ವಿಜಯಪುರ (ಜು. 07) : 2021ರಲ್ಲಿ ಹಿಮಪಾತದಲ್ಲಿ ಸಿಲುಕಿ ಬದುಕುಳಿದಿದ್ದ ವೀರಯೋಧ ನ್ಯೂಮೋನಿಯಾದಿಂದ ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗಿ ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ಜಮ್ಮು-ಕಾಶ್ಮೀರದಲ್ಲಿ ಕರ್ತವ್ಯದಲ್ಲಿ ಇರೋವಾಗಲೇ ತೀವ್ರ ಸೋಂಕಿಗೆ ಒಳಗಾದ ಯೋಧ ಚಿಕಿತ್ಸೆ ಫಲಿಸದೆ ಮೃತಪಟ್ಟದ್ದಾರೆ. ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ರಾಜಶೇಖರ್ ಶರಣಪ್ಪ ಮುಜುಗೊಂಡ ಪೂಣೆಯ ಸೇನಾಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಉಸಿರಾಟದ ತೊಂದರೆ, ಯೋಧ ರಾಜಶೇಖರ್ ನಿಧನ..!
ಕಳೆದ ಕೆಲ ದಿನಗಳಿಂದ ರಾಜಶೇಖರ್ ಉಸಿರಾಟದ ತೊಂದರೆ ಅನುಭವಿಸುತ್ತಿದ್ದರು. ಜಮ್ಮುಕಾಶ್ಮೀರದ ಜಡಗಲಿ 53 ಬಟಾಲಿಯನ್ ನಲ್ಲಿ ಕರ್ತವ್ಯದಲ್ಲಿದ್ದ ರಾಜಶೇಖರ್ ಗೆ ಆರಂಭಿಕ ಚಿಕಿತ್ಸೆ ನೀಡಲಾಗಿತ್ತಾದರು, ನ್ಯುಮೋನಿಯಾ ಆವರಿಸಿಕೊಂಡಿದ್ದ ಕಾರಣ ಮಹಾರಾಷ್ಟ್ರದ ಪೂಣೆಯ ಸೇನಾ ಆಸ್ಪತ್ರೆಯಲ್ಲಿ ಐಸಿಯು ವಿಭಾಗದಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು. ಆದ್ರೆ ನಿನ್ನೆ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಕಾಶ್ಮೀರ ಹಿಮಪಾತದಲ್ಲಿ ತೀವ್ರಗಾಯ..!
2021ರಲ್ಲಿ ಜಮ್ಮು-ಕಾಶ್ಮೀರದ ಜಡಗಲ್ ಪ್ರದೇಶದಲ್ಲಿ ಉಂಟಾಗಿದ್ದ ಹಿಮಪಾತದಲ್ಲಿ ರಾಜಶೇಖರ್ ಮುಜುಗೊಂಡ ತೀವ್ರವಾಗಿ ಗಾಯಗೊಂಡಿದ್ದರು. ಬಳಿಕ ಶ್ವಾಸಕೋಶದಲ್ಲಿ ಸಮಸ್ಯೆಯು ಉಂಟಾಗಿತ್ತು. ಈ ಕಾರಣದಿಂದಾಗಿ ಚಿಕಿತ್ಸೆ ಪಡೆದು 6 ತಿಂಗಳ ಕಾಲ ಬೆಡ್ ರೆಸ್ಟನಲ್ಲಿದ್ದರು. ಬಳಿಕ ಆರೋಗ್ಯ ಸುಧಾರಿಸಿದ ಬಳಿಕ ಮತ್ತೆ ಜಮ್ಮು-ಕಾಶ್ಮೀರಕ್ಕೆ ಕರ್ತವ್ಯಕ್ಕಾಗಿ ತೆರಳಿದ್ದರು.
ಮತ್ತೆ ಕಾಡಿದ ಲಂಗ್ಸ್ ಕನ್ಪೆಕ್ಷನ್ ಯೋಧ..!
ಹಿಮಪಾತದಲ್ಲಿ ತೀವ್ರ ಅನಾರೋಗ್ಯಗೊಂಡು ಬಳಲಿದ್ದ ಯೋಧ ರಾಜಶೇಖರ್‌ಗೆ ಮತ್ತೆ ಅನಾರೋಗ್ಯ ಕಾಡಲು ಶುರು ಮಾಡಿತ್ತು. ಈ ಹಿಂದೆ ಉಂಟಾಗಿದ್ದ ಲಂಗ್ಸ್ ಇನ್ಪೆಕ್ಷನ್ ಮತ್ತೆ ಆವರಿಸಿಕೊಂಡಿತ್ತು. ಈ ಬಾರಿ ತೀವ್ರವಾಗಿ ಶ್ವಾಸಕೋಶದಲ್ಲಿ ಸೋಂಕು ಆವರಿಸಿದ್ದರಿಂದ ಅಸ್ವಸ್ಥಗೊಂಡಿದ್ದರು, ಬಳಿಕ ಪೂಣೆಯ ಸೇನಾಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಿಕೊಡಲಾಗಿತ್ತು.
3 ವರ್ಷದ ಹಿಂದಷ್ಟೆ ಮದುವೆ, ಸಹೋದರನು ಯೋಧನೇ..!
ರಾಜಶೇಖರ್ 2010ರಲ್ಲಿ ಭಾರತೀಯ ಸೇನೆಗೆ ಸೆಲೆಕ್ಷನ್ ಆಗಿದ್ದರು. ಮಡ್ರಾಸ್ ಬಟಾಲಿಯನ್ ಮೂಲಕ ಭಾರತಾಂಬೆಯ ಸೇವೆಯಲ್ಲಿ ತೊಡಗಿದ್ದರು. ಇನ್ನು ಕಳೆದ 2020ರಲ್ಲಿ ಮದುವೆಯಾಗಿತ್ತು. ಈ ವರೆಗೆ ಮಕ್ಕಳಾಗಿರಲಿಲ್ಲ. ಯೋಧನ ಅಕಾಲಿಕ ಮರಣದಿಂದಾಗಿ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಇನ್ನೂ ಇತ್ತ ರಾಜಶೇಖರ್ ಸಹೋದರ ಸುರೇಶ ಮುಜುಗೊಂಡ ಸಹ ಯೋಧ. ಮರಾಠಾ ಇನ್‌ಪೆಂಟ್ರಿಗೆ ಸುರೇಶ ಸೇರ್ಪಡೆಗೊಂಡಿದ್ದರು. ಸುರೇಶ ಸಹ ಈಗ ಪ್ರಸ್ತುತ ಜಮ್ಮು-ಕಾಶ್ಮೀರದಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಲಚ್ಯಾಣಕ್ಕೆ ಆಗಮಿಸಲಿರುವ ಯೋಧನ ಪಾರ್ಥಿವ ಶರೀರ..!
ನಿನ್ನೆ ತಡರಾತ್ರಿ ಸಾವನ್ನಪ್ಪಿರುವ ಯೋಧ ರಾಜಶೇಖರ್ ಪಾರ್ಥಿವ ಶರೀರ ಇಂದು ಲಚ್ಯಾಣ ಗ್ರಾಮಕ್ಕೆ ಬರಲಿದೆ. ಯೋಧನ ಸಾವಿನ ಸುದ್ದಿ ತಿಳಿದ ಗ್ರಾಮಸ್ಥರಲ್ಲಿ ದುಃಖ ಮಡುಗಟ್ಟಿದೆ. ಕುಟುಂಬಸ್ಥರಿಗೆ ಆಕಾಶವೆ ಕಳಚಿ ಬಿದ್ದಂತಾಗಿದೆ.