ಬೆಳಗಾವಿ: ರಾಜ್ಯದ ಕರಾವಳಿ ಭಾಗದಲ್ಲಿ ವರುಣನ ಅಬ್ಬರ ಜೋರಾಗಿದೆ. ಮನೆಗಳು, ಸೇತುವೆಗಳು ಮುಳುಗಿವೆ. ಪ್ರವಾಹದ ಭೀತಿ ಎದುರಾಗಿದೆ. ಆದ್ರೆ ಉತ್ತರ ಕರ್ನಾಟಕದಲ್ಲಿಮಳೆ ಕೈಕೊಟ್ಟಿದೆ. ಬರದ ಛಾಯೆ ಆವರಿಸಿದೆ. ಪಶ್ಚಿಮ ಘಟ್ಟಗಳ ಪ್ರದೇಶ, ಬೆಳಗಾವಿ ಭಾಗದಲ್ಲಿ ಮಳೆ ಕೊರತೆ ಉಂಟಾಗಿದೆ. ಯಳ್ಳೂರ, ಶಹಾಪುರ, ವಡಗಾಂವ ಸೇರಿದಂತೆ ಹಲವು ಭಾಗದಲ್ಲಿ ಭತ್ತದ ಬೆಳೆ ಒಣಗುತ್ತಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಭತ್ತ ಬಿತ್ತನೆ ಮಾಡಿದ್ದ ರೈತರು ಕಂಗಾಲಾಗಿದ್ದಾರೆ. ಮಳೆ ಕೊರತೆ ಬಗ್ಗೆ ಇಂದಿನ ಸದನದಲ್ಲಿ ಪ್ರಸ್ತಾಪ ಮಾಡಲಾಗಿದೆ.
ಮಳೆಯಾಗದ ಕಾರಣ ಅಲ್ಪಸ್ವಲ್ಪ ಚಿಗುರೊಡೆದ ಬೆಳೆಗಳ ಮಧ್ಯೆ ಜಮೀನು ಬಿರುಕು ಬಿಡ್ತಿವೆ. ಮೂವತ್ತು ಸಾವಿರ ವರೆಗೂ ಖರ್ಚು ಮಾಡಿ ಭತ್ತ ಬಿತ್ತನೆ ಮಾಡಿದ್ದೀವಿ. ಮಳೆಯಾಗದ ಹಿನ್ನೆಲೆ ಬೆಳೆ ಕೈಕೊಟ್ಟಿದೆ. ಮಳೆ ಬರುತ್ತೆ ಅಂತ ಒಂದೂವರೆ ತಿಂಗಳ ಹಿಂದೆ ಭತ್ತ ಬಿತ್ತನೆ ಮಾಡಿದ್ದೀವಿ. ಹನ್ನೆರಡನೂರು ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದ ಭತ್ತ ಹಾಳಾಗುವ ಭೀತಿ ಎದುರಾಗಿದೆ. ಹೀಗಾಗಿ ಹೆಕ್ಟೇರ್‌ಗೆ ಐವತ್ತು ಸಾವಿರ ಪರಿಹಾರ ನೀಡುವಂತೆ ಸರ್ಕಾರಕ್ಕೆ ರೈತರು ಒತ್ತಾಯಿಸಿದ್ದಾರೆ.
ಮಳೆ ಇಲ್ಲದೆ ಖಾಲಿ ಖಾಲಿಯಾಗಿರುವ ಜಲಾಶಯಗಳು
ಇನ್ನು ಮಳೆ ಇಲ್ಲದ ಕಾರಣ ಜಲಾಶಯಗಳಿಗೆ ಇನ್ನೂ ನೀರಿನ ಒಳ ಹರಿವು ಆರಂಭವಾಗಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಶೇ 62 ರಷ್ಟು ಮಳೆಯ ಕೊರತೆ ಇದೆ. ಜೂನ್ 1 ರಿಂದ ಇಲ್ಲಿಯ ವರೆಗೆ 165 ಮಿ.ಮೀ ವಾಡಿಕೆ ಮಳೆ ಆಗಬೇಕಿತ್ತು. ಈವರೆಗೆ ಕೇವಲ 62 ಮಿ.ಮೀ ಮಳೆಯಾಗಿದೆ. ಬೆಳಗಾವಿಯ ಘಟಪ್ರಭಾ, ಮಲಪ್ರಭಾ ಜಲಾಶಯಕ್ಕೆ ಇನ್ನೂ ಒಳ ಹರಿವು ಆರಂಭ ಆಗಿಲ್ಲ. 51 ಟಿಎಂಸಿ ಸಾಮರ್ಥ್ಯದ ಘಟಪ್ರಭಾ ಜಲಾಶಯ ಸಂಪೂರ್ಣ ಖಾಲಿಯಾಗಿದೆ. 37 ಟಿಎಂಸಿ ಸಾಮರ್ಥ್ಯದ ಮಲಪ್ರಭಾ ಜಲಾಶಯವೂ ಖಾಲಿಯಾಗಿದೆ.
ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮುಂಗಾರು ಮಳೆ ಆಗುತ್ತಿಲ್ಲ. ಹೀಗಾಗಿ ಎರಡು ನದಿಗಳಲ್ಲಿ ಇನ್ನೂ ನಿರೀಕ್ಷಿತ ಪ್ರಮಾಣದ ನೀರಿ ಹರಿದು ಬರುತ್ತಿಲ್ಲ. ಕೇವಲ ಜಿಟಿಜಿಟಿ ಮಳೆಯಾಗುತ್ತಿದ್ದು ಈ ವರೆಗೂ ದೊಡ್ಡ ಮಳೆ ಆಗಿಲ್ಲ. ಜಿಲ್ಲೆಯಲ್ಲಿ 7.11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ಗೋವಿನಜೋಳ ಹೆಸರು, ಉದ್ದು, ಸೋಯಾಬಿನ್, ಶೇಂಗಾ ಬಿತ್ತನೆಯ ಗುರಿ ಇದೆ. ಇಷ್ಟೊತ್ತಿಗೆ ಆಗಲೇ ಶೇ 80ರಷ್ಟು ಬಿತ್ತನೆ ಕಾರ್ಯ ಆಗಬೇಕಿತ್ತು. ಕಬ್ಬು ಹೊರತು ಪಡಿಸಿ ಕೇವಲ ಶೇಕಡಾ 18ರಷ್ಟು ಮಾತ್ರ ಬಿತ್ತನೆ ಕಾರ್ಯ ಆಗಿದೆ. ಮಳೆ ಕೈ ಕೊಟ್ಟ ಹಿನ್ನೆಲೆ ರೈತರ ಲೆಕ್ಕಾಚಾರ ತಲೆಕೆಳಗಾಗಿದೆ.
ಸದನದಲ್ಲಿ ಮಳೆ ಕೊರತೆ ಹಾಗೂ ಬರ ನಿಯಂತ್ರಣ ಪ್ರಸ್ತಾಪ
ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಮಳೆ ಕೊರತೆ ಹಾಗೂ ಬರ ನಿಯಂತ್ರಣದ ಬಗ್ಗೆ ಪ್ರಸ್ತಾಪ ಮಾಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹವಾಮಾನ ಇಲಾಖೆಯನ್ನು ನಂಬಿಕೊಂಡು ಪ್ಲ್ಯಾನ್ ಮಾಡಬೇಡಿ. ಇಡೀ ರಾಜ್ಯದಲ್ಲಿ ಈ ಬಾರಿ ಮಳೆ ಸರಿಯಾಗಿ ಆಗಿಲ್ಲ. ಕೂಡಲೇ ವಿಪತ್ತು ನಿರ್ವಹಣಾ ಇಲಾಖೆ ಗಮನಹರಿಸಬೇಕು. ಪ್ರತಿ ತಾಲೂಕಿಗೆ ಕುಡಿಯುವ ನೀರಿಗೆ 50 ಲಕ್ಷ ಬಿಡುಗಡೆ ಮಾಡಿ. ಸಮಸ್ಯೆ ನಿವಾರಣೆಗೆ ಶಾಶ್ವತ ಟಾಸ್ಕ್ಫೋರ್ಸ್ ಮಾಡಬೇಕು. ತಡಮಾಡದೇ ಕ್ರಿಯಾ ಯೋಜನೆಗೆ ಅನುಮೋದನೆ ಮಾಡಲು ಎಸಿ ಅಥವಾ ತಹಸೀಲ್ದಾರ್ಗೆ ಅಧಿಕಾರ ನೀಡಿ. ಮಳೆ ಕೊರತೆ ಆಗಿ ಮೊಳಕೆ ಆಗದಿದ್ರೆ ಬೆಳೆ ವಿಮೆ ಬರುವುದಿಲ್ಲ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಸಲಹೆ ಕೊಟ್ಟರು.