ಆದಿವಾಸಿ ವ್ಯಕ್ತಿಯ ಮೇಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೇಶ್ ಶುಕ್ಲಾ ಅವರ ಮನೆಯನ್ನು ರಾಜ್ಯ ಸರ್ಕಾರದ ಆದೇಶದ ಮೇರೆಗೆ ಕೆಡವಲಾಗಿದೆ. ಮಂಗಳವಾರ ವ್ಯಕ್ತಿಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಅಧಿಕಾರಿಗಳು ಬುಲ್ಡೋಜರ್‌ನೊಂದಿಗೆ ಆರೋಪಿಯ ಮನೆಗೆ ಆಗಮಿಸುತ್ತಿದ್ದಂತೆ, ಅವರ ಕುಟುಂಬ ಸದಸ್ಯರು ಆರೋಪಿಯನ್ನು ಬಂಧಿಸಿದ ವೀಡಿಯೊ ಹಳೆಯದು ಎಂದು ಹೇಳಿದರು, ಚುನಾವಣೆ ಹತ್ತಿರವಾಗಿರುವುದರಿಂದ ಅದನ್ನು ಮುನ್ನೆಲೆಗೆ ತರಲಾಗಿದೆ ಎಂದು ಹೇಳಿದ್ದಾರೆ.
ಇದು ರಾಜಕೀಯ ಮತ್ತು ಚುನಾವಣಾ ಕಾರಣಗಳಿಗಾಗಿ ಪ್ರಸಾರ ಮಾಡಲಾದ ಹಳೆಯ ವೀಡಿಯೊ ಎಂದು ಆರೋಪಿಯ ಸಹೋದರಿ ಎಎನ್‌ಐಗೆ ತಿಳಿಸಿದ್ದಾರೆ. ಪ್ರವೇಶ್ ಶುಕ್ಲಾ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಸ್ತುತ ರೇವಾ ಸೆಂಟ್ರಲ್ ಜೈಲಿನಲ್ಲಿ ಇರಿಸಲಾಗಿದೆ.
ನನ್ನ ಮಗ ಈ ಕೃತ್ಯ ಎಸಗಲು ಸಾಧ್ಯವೇ ಇಲ್ಲ, ಇದು ಸಂಚು, ಇದರಿಂದ ನಮಗೆ ತುಂಬಾ ನೋವಾಗಿದೆ ಎಂದು ಪ್ರವೇಶ ಶುಕ್ಲಾ ತಂದೆ ಹೇಳಿದ್ದಾರೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಆರೋಪಿಗಳ ವಿರುದ್ಧ ತಕ್ಷಣದ ಕ್ರಮಕ್ಕೆ ಆದೇಶಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾ ಮಂಗಳವಾರ ಹೇಳಿದ್ದಾರೆ.
ಮಧ್ಯ ಪ್ರದೇಶದ ಸಿಧಿ ಜಿಲ್ಲೆಯ ಕುಬ್ರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರೋಪಿಯು ಕುಡಿದ ನಶೆಯಲ್ಲಿ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಬಳಿಕ ಪ್ರವೇಶ್ ಶುಕ್ಲಾ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು.