ನೆರೆ ಬಾಧಿತ ಪ್ರದೇಶದ ಕುಟುಂಬಗಳಿಗೆ ಶಾಶ್ವತ ಪರಿಹಾರ ಒದಗಿಸಿ

ಹೊನ್ನಾವರ: ತಾಲೂಕಿನ ಹೊಸಾಕುಳಿ ಗ್ರಾ.ಪಂ ವ್ಯಾಪ್ತಿಯ ನೆರೆ ಪ್ರದೇಶಗಳಾದ ಶಶಿಹಿತ್ಲ, ದೊಡ್ಡಹಿತ್ಲ, ಗೊಳಿಬೈಲು, ಭಾಸ್ಕೇರಿ, ಗಜನಕೇರಿ, ಮಡಿವಾಳಕೇರಿ, ಹೆಬ್ಬಾರ್ತಕೇರಿಯ 114 ಕುಟುಂಬಗಳಿಗೆ ಶಾಶ್ವತ ಪರಿಹಾರ ಒದಗಿಸುವಂತೆ ಅಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.

ಹೊಸಾಕುಳಿ ಗ್ರಾ.ಪಂಕ್ಕೆ ಮಂಗಳವಾರ ಆಗಮಿಸಿದ ನಿವಾಸಿಗಳು ಗ್ರಾ.ಪಂ. ಸದಸ್ಯ ಎಚ್.ಆರ್ ಗಣೇಶ ನೇತ್ರತ್ವದಲ್ಲಿ ಗ್ರಾಮಲೆಕ್ಕಾಧಿಕಾರಿ ವಿನಯ ಪಂಡಿತ್ ಮೂಲಕ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ಕಳೆದ 20 ವರ್ಷಗಳಿಂದಲೂ ನಿರಂತರವಾಗಿ ಭಾಸ್ಕೇರಿ ಹೊಳೆಯಿಂದ ಸುತ್ತಮುತ್ತಲ ಗ್ರಾಮಸ್ಥರು ನೆರೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಿ ಪ್ರವಾಹದಿಂದ ಜನರು ಹಾಗೂ ಜಾನುವಾರು ಸಂಕಷ್ಟ ಅನುಭವಿಸುವ ಜೊತೆ ಬೆಳೆ ಹಾನಿಯು ಸಂಭವಿಸುತ್ತಿದೆ.

ಪ್ರತಿ ಬಾರಿಯೂ ಸರ್ಕಾರ ನೆರೆಬಂದಾಗ ಕಾಳಜಿ ಕೇಂದ್ರ ಹಾಗೂ ಒಂದಿಷ್ಟು ಪರಿಹಾರ ನೀಡುವ ಬದಲು ಗ್ರಾಮದ 169ಅ/1 ಸರ್ಕಾರಿ ಖರಾಬು 54-07 ಜಾಗವಿದ್ದು, ಇದರಲ್ಲಿ 10 ಎಕರೆಯಷ್ಟು ಜಾಗ ಫಾರೆಸ್ಟ ಖಾತೆಯಿಂದ ರೆವಿನ್ಯೂ ಖಾತೆಗೆ ಬಂದಿದೆ. ನೆರೆ ಬಾದಿತ ಪ್ರದೇಶದ 114 ಕುಟುಂಬಗಳಿಗೆ ತಲಾ 2 ಗುಂಟೆಯಂತೆ ಈ ಸ್ಥಳವನ್ನು ಮಂಜೂರು ಮಾಡಿ ಸರ್ಕಾರದ ಮನೆ ನಿರ್ಮಾಣ ಮಾಡಿದರೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಗ್ರಾ.ಪಂ. ಅಧ್ಯಕ್ಷೆ ಸುರೇಖಾ ನಾಯ್ಕ, ಉಪಾಧ್ಯಕ್ಷ ಕಿರಣ ಹೆಗಡೆ, ಸದಸ್ಯೆ ಮಾದೇವಿ ಮುಕ್ರಿ, ಕಮಲಾ ಮುಕ್ರಿ, ಪಿಡಿಓ ಬಾಲಕೃಷ್ಣ ನಾಯ್ಕ, ನೂರಾರು ಸಂಖ್ಯೆಯ ಸಾರ್ವಜನಿಕರು ಹಾಜರಿದ್ದರು.