ಬೆಂಗಳೂರು: ನಿನ್ನೆ (ಜುಲೈ 05) ತಡರಾತ್ರಿ ಬಂದ ಅದೊಂದು ಫೋನ್ ಕರೆಗೆ ಬೆಂಗಳೂರು ಪೊಲೀಸರು ಬೆಚ್ಚಿಬಿದ್ದಿದ್ದು, ಫೋನ್ ಮೂಲಕ ಬಂದ ಮಾಹಿತಿಗೆ ಪೊಲೀಸರು ರಾತ್ರಿಯಲ್ಲ ತಡಕಾಡಿದ್ದಾರೆ. ಆದ್ರೆ, ಅದೊಂದು ಸುಳ್ಳು ಮಾಹಿತಿ ಎಂದು ಗೊತ್ತಾಗಿ ನಿಟ್ಟುಸಿರು ಬಿಟ್ಟಿದ್ದಾರೆ. ಹೌದು.. ಬೆಂಗಳೂರಿನ ಶಿವಾಜಿನಗರದಲ್ಲಿರುವ ಆಜಾಂ ಮಸೀದಿಯಲ್ಲಿ ಟೆರೆರಿಸ್ಟ್ಗಳು ಬಾಂಬ್ ಇಟ್ಟಿದ್ದಾರೆಂದು ವ್ಯಕ್ತಿಯೋರ್ವ ಬುಧವಾರ ತಡರಾತ್ರಿ 112ಗೆ ಕರೆ ಮಾಡಿದ್ದಾನೆ. ವಿಷಯ ತಿಳಿಯುತ್ತಿದ್ದಂತೆಯೇ ಶಿವಾಜಿನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಇಡಿ ಮಸೀದಿಯನ್ನೇ ಪರಿಶೀಲಿಸಿದ್ದಾರೆ. ಅಲ್ಲದೇ ಹಿರಿಯ ಅಧಿಕಾರಿಗಳು ಸಹಿತ ಸ್ಥಳಕ್ಕೆ ಭೇಟಿ ನೀಡಿ ಮಸೀದಿಯ ಸುತ್ತಾಮುತ್ತ ಹುಡುಕಾಡಿದ್ದಾರೆ. ಕೊನೆಗೆ ಸುಳ್ಳು ಮಾಹಿತಿ ಎಂದು ತಿಳಿದು ಪೊಲೀಸರು ನಿಟ್ಟುಸಿರು ಬಿಟ್ಟು ಅಲ್ಲಿಂದ ವಾಪಸ್ ಆಗಿದ್ದಾರೆ.
ಸದ್ಯ ಪೊಲೀಸರ ನಿದ್ದೆ ಗೆಡಿಸಿದ್ದ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಬೆಂಗಳೂರಿನಿಂದ ಹೊರಗಡೆ ಕುಳಿತುಕೊಂಡು ಪೊಲೀಸರಿಗೆ ಕರೆ ಮಾಡಿದ್ದಾನೆ ಎಂದು ತಿಳಿದುಬಂದಿದ್ದು, ಆತನ ಪತ್ತೆಯಾಗಿ ಶಿವಾಜಿನಗರ ಪೊಲೀಸರ ಬಲೆಬೀಸಿದ್ದಾರೆ.
ಈ ರೀತಿಯ ಸುಳ್ಳು ಬಾಂಬ್ ಕರೆ ಬಂದಿರುವುದು ಇದು ಮೊದಲಲ್ಲ. ಈ ಹಿಂದೆ ಶಾಲೆಗಳಿಗೆ, ಐಟಿ-ಬಿಟಿ ಕಂಪನಿಗಳಿಗೆ ಹುಸಿ ಬಾಂಬ್ ಬೆದರಿಕೆ ಕರೆ ಬಂದಿರುವ ಸಾಕಷ್ಟು ಉದಾಹರಣಗಳು ಇವೆ. ಇನ್ನು ಕೆಲವರು ಅಲ್ಲಿ ಬಾಂಬ್ ಇಟ್ಟಿದ್ದಾರೆ. ಇಲ್ಲಿ ಬಾಂಬ್ ಬ್ಲಾಸ್ಟ್ ಆಗಲಿದೆ ಎಂದು ಪೊಲೀಸರಿಗೆ ಕರೆ ಮಾಡಿ ಇಲ್ಲ ಇಮೇಲ್ ಮಾಡಿರುವುದು ಉಂಟು.