ಮಂಗಳೂರಲ್ಲಿ ಗಾಳಿ ಸಹಿತ ಭಾರಿ ಮಳೆ; ಧರೆಗೆ ಉರುಳಿದ ಜಾಹೀರಾತು ಫಲಕ, ಮರ

ಮಂಗಳೂರು: ಕರಾವಳಿ ಜಿಲ್ಲೆಗಳಿ ಗಾಳಿ ಸಹಿತ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಭಾರಿ ಮಳೆಯಾಗುತ್ತಿದೆ. ಜೊತೆಗೆ ಜೋರಾದ ಗಾಳಿ ಬೀಸಿದೆ. ಈ ಹಿನ್ನೆಲೆ ಈಗಾಗಲೆ ಜಿಲ್ಲಾಡಳಿತ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ. ಅಲ್ಲದೇ ಹವಾಮಾನ ಇಲಾಖೆ ರೆಡ್​​ ಅಲರ್ಟ್​​ ಘೋಷಿಸಿದೆ. ಇನ್ನು ಗಾಳಿ 80 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ. ಇದರ ಪರಿಣಾಮ ಕಮರ್ಷಿಯಲ್ ಕಟ್ಟಡದ ಮೇಲೆ ಹಾಕಿದ್ದ ಜಾಹೀರಾತು ಫಲಕ ಬಿದ್ದು 10ಕ್ಕೂ ಹೆಚ್ಚು ಬೈಕ್​ಗಳು ಜಖಂಗೊಂಡಿರುವ ಘಟನೆ ಮಂಗಳೂರು ನಗರದ ಬಿಕರ್ನಕಟ್ಟೆ ಎಂಬಲ್ಲಿ ನಡೆದಿದೆ. ಅದೃಷ್ಟವಶಾತ್ ರಸ್ತೆಯಲ್ಲಿ ಜನರಿಲ್ಲದಿದ್ದರಿಂದ ಭಾರಿ ಅನಾಹುತ ತಪ್ಪಿದೆ. ಫಲಕ ಮಾತ್ರವಲ್ಲದೇ ಭಾರ ತಾಳಲಾಗದೆ ವಿದ್ಯುತ್ ಕಂಬ ಹಾಗೂ ವಿದ್ಯುತ್ ಪರಿವರ್ತಕ ಕೂಡ ಧರಗೆ ಬಿದ್ದಿದೆ.

ಮಂಗಳೂರು ಹೊರವಲಯದ ಸೋಮೇಶ್ವರ ಪ್ರದೇಶದಲ್ಲಿ ಭಾರಿ ಗಾಳಿಮಳೆಗೆ ಮರಗಳು ಮನೆ ಮೇಲೆ ಉರುಳಿ ಬಿದ್ದಿವೆ. ಮರಗಳು ಉರುಳಿ ಮೂರು ಮನೆಗಳು, ವಾಹನಕ್ಕೆ ಹಾನಿಯಾಗಿದೆ. ಸೋಮೇಶ್ವರ ಪುರಸಭೆ ವ್ಯಾಪ್ತಿಯ ಪೆರಿಬೈಲ್, ಕುಂಪಲ ಬಾರ್ದೆ, ಅಂಚಿಕಟ್ಟೆ ಪ್ರದೇಶದ ನಾಲ್ಕು ಮನೆಗಳ ಮೇಲೆ ಮರಗಳು ಉರುಳಿಬಿದ್ದು ಅಬ್ಬಾಸ್ , ಕುಂಪಲ ಬಾರ್ದೆಯ ಯಮುನಾ ಬಂಗೇರ, ಸುನಿಲ್ ಹಾಗೂ ಅಂಚೆಕಟ್ಟೆಯ ಯು.ಎ ಹಸೈನಾರ್, ಯು.ಎ.ಖಾದರ್ ಎಂಬವರ ಮನೆಗಳಿಗೆ ಹಾನಿಯಾಗಿದೆ. ಒಂದು ಸ್ಕೂಟರ್ ಮರದಡಿ ಸಿಲುಕಿ ನುಜ್ಜುಗುಜ್ಜಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಪಿ.ವಿ.ಎಸ್ ಬಳಿ ಗುಡ್ಡ ಕುಸಿತಗೊಂಡಿದೆ. ಪಿ.ವಿ.ಎಸ್​​ ನಿಂದ ಕೆ.ಎಸ್ ರಾವ್ ರೋಡ್​​ಗೆ ಸಂಪರ್ಕ ಕಲ್ಪಿಸುವ ಒಳ ರಸ್ತೆಯಲ್ಲಿ ಗುಡ್ಡ ಕುಸಿದ ಹಿನ್ನಲೆ ಪಕ್ಕದಲ್ಲಿದ್ದ ಹಳೆಯ ಕಟ್ಟಡದ ಗೋಡೆ ಕೂಡ ಕುಸಿತವಾಗಿದೆ. ಗುಡ್ಡ ಕುಸಿತವಾದ ಸ್ಥಳಕ್ಕೆ ಟಾರ್ಪಲ್ ಹೊದಿಕೆ ಹಾಕಲಾಗಿದ್ದು, ಇನ್ನಷ್ಟು ಮಣ್ಣು ಕುಸಿಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

ಇನ್ನು ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಜಿಲ್ಲೆಗೆ ಹವಾಮಾನ ‌ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಕರಾವಳಿಯ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾದ ಹಿನ್ನೆಲೆ ಮಂಗಳೂರಿನ ಉಚ್ಚಿಲ, ಉಳ್ಳಾಲ ಕಡಲ ತೀರ ಫುಲ್ ರಫ್ ಆಗಿದೆ. ಅಲೆಗಳು ಮನೆ, ಬೀಚ್ ರೆಸಾರ್ಟ್​​ಗಳಿಗೆ ಅಪ್ಪಳಿಸುತ್ತಿರುವ ಹಿನ್ನೆಲೆ ಜನರು ಆತಂಕದಲ್ಲಿದ್ದಾರೆ.