ಟೇಕ್​ಆಫ್​ನಲ್ಲಿ ವಿಮಾನದ ಬಾಗಿಲು ತೆರೆಯಲು ಪ್ರಯತ್ನಿಸಿದ ಲಂಡನ್ ಭೂಪ

ವಿಮಾನವು ಅಮೆರಿಕದಿಂದ ಲಂಡನ್​​ಗೆ ಹಾರಲೆಂದು ರನ್​​ವೇನಲ್ಲಿ ಚಲಿಸುತ್ತಿರುವಾಗ ಲಂಡನ್​​ನ (UK)​ 27 ವರ್ಷದ ವ್ಯಕ್ತಿ ವಿಮಾನದ ಬಾಗಿಲನ್ನು ತೆರೆಯಲು ಪ್ರಯತ್ನಿಸಿದ ಆತಂಕಕಾರಿ ಘಟನೆ ನಡೆದಿದೆ. ಆಗ ಪ್ರಯಾಣಿಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಕೆಲ ಪ್ರಯಾಣಿಕರು ಈ ವ್ಯಕ್ತಿಯನ್ನು ಬಾಗಿಲು ತೆರೆಯದಂತೆ ತಡೆದಿದ್ದಾರೆ. ಆನಂತರ ಈ ವ್ಯಕ್ತಿಯನ್ನು ಬಂಧಿಸಲಾಗಿದೆ. ಈ ಘಟನೆ ಕುರಿತಾದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗುತ್ತಿದೆ

ಈ ವಿಮಾನದಲ್ಲಿದ್ದ ಬಹುಪಾಲು ಪ್ರಯಾಣಿಕರು ಅಮೆರಿಕದ ಪಾಗ್​ ದ್ವೀಪದಲ್ಲಿ ನಡೆದ ಹೈಡ್​ ಔಟ್​ ಕ್ರೊಯೇಷಿಯಾದ ಸಂಗೀತ ಉತ್ಸವದಿಂದ ಲಂಡನ್​ಗೆ ಮರಳುತ್ತಿದ್ದರು. ವಿಮಾನವು ರನ್​ವೇನಲ್ಲಿ ಚಲಿಸುತ್ತಿದ್ದಂತೆ ಈ ವ್ಯಕ್ತಿ ಇದ್ದಕ್ಕಿದ್ದಂತೆ ಸೀಟು ಬಿಟ್ಟು ಬಂದು ಬಾಗಿಲು ತೆರೆಯಿರಿ ಎಂದು ಕೂಗಲಾರಂಭಿಸಿದ. ಜೊತೆಗೆ ಏನೋ ಸನ್ನೆ ಮಾಡತೊಡಗಿದ. ಅಲ್ಲಿದ್ದ ಪ್ರಯಾಣಿಕರು ಅವನನ್ನು ತಡೆಯಲು ಹರಸಾಹಸಪಟ್ಟರು. ಅವನ ಆರ್ಭಟ ಜೋರಾಗುತ್ತಿದ್ದಂತೆ ಇಬ್ಬರು ಗಂಡಸರು ಅವನನ್ನು ಕೆಳಕ್ಕೆ ಬೀಳಿಸಿ ಗಟ್ಟಿಯಾಗಿ ಹಿಡಿದು ಬಾಗಿಲು ತೆರೆಯುವುದನ್ನು ತಪ್ಪಿಸಿದರು.

ನಂತರ ಈತನನ್ನು ವಿಮಾನದಿಂದ ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಉಳಿದ ಪ್ರಯಾಣಿಕರು ಅದೇ  ವಿಮಾನದಲ್ಲಿ ತಮ್ಮ ದೇಶ ತಲುಪಿದರು. ”ಅಧಿಕಾರಿಯೊಬ್ಬರ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಸದ್ಯ ಈತ ಬಂಧನದಲ್ಲಿದ್ದಾನೆ. ಅಲ್ಲದೆ ಈ ವ್ಯಕ್ತಿಯಿಂದ ಉಂಟಾದ ಅನಾನುಕೂಲತೆಗೆ ಪ್ರಯಾಣಿಕರಲ್ಲಿ ಕ್ಷಮೆ ಕೇಳುತ್ತೇವೆ” ಎಂದು ವಿಮಾನಸಂಸ್ಥೆಯು ತಿಳಿಸಿದೆ.