ಬೆಂಗಳೂರು: ಮೊಬೈಲ್ಗಳಲ್ಲಿ ನೆಟ್ ವರ್ಕ್ ಸಮಸ್ಯೆಯಾಗಿ(Mobile Network Issue) ಆಗಾಗ ಕಾಲ್ ಕಟ್ಟಾಗುವುದು ಸಾಮಾನ್ಯ. ಆದ್ರೆ ಬೆಂಗಳೂರಿನ ಮಹಿಳೆಯೊಬ್ಬರು ನೆಟ್ ವರ್ಕ್ ಸರಿ ಮಾಡಿಸಿಕೊಳ್ಳಲು ಹೋಗಿ ಹಣ ಕಳೆದುಕೊಂಡಿದ್ದಾರೆ. ತಾನು ಬಳಸುತ್ತಿದ್ದ ಮೊಬೈಲ್ ಫೋನ್ನಲ್ಲಿನ ನೆಟ್‌ವರ್ಕ್ ಸಮಸ್ಯೆಯನ್ನು ಸರಿಪಡಿಸಿಕೊಳ್ಳಲು ಹೋಗಿ ಬೆಂಗಳೂರಿನ 50 ವರ್ಷದ ಗೃಹಿಣಿಯೊಬ್ಬರು ₹3 ಲಕ್ಷಕ್ಕೂ ಹೆಚ್ಚು ಹಣವನ್ನು ಕಳೆದುಕೊಂಡಿರುವ ಘಟನೆ ನಡೆದಿದೆ.
ಬಾಬುಸಾಪಾಳ್ಯ ನಿವಾಸಿಯಾಗಿರುವ ಮಹಿಳೆಯೊಬ್ಬರು ತಮ್ಮ ಫೋನ್ನ ನೆಟ್ ವರ್ಕ್ ಸಮಸ್ಯೆಯಿಂದ, ಯಾರೊಂದಿಗೂ ಸರಿಯಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ತೀರ ನೊಂದಿದ್ದರು. ಹೀಗಾಗಿ ಜೂ.22ರಂದು ತಮ್ಮ ಸಿಮ್ಗೆ ಸಂಬಂಧಿಸಿದ ಸೇವಾ ಪೂರೈಕೆದಾರರ ಕಸ್ಟಮರ್ ಕೇರ್ ಸಂಖ್ಯೆಯನ್ನು ಗೂಗಲ್ನಲ್ಲಿ ಹುಡುಕಿದ್ದಾರೆ. ಈ ವೇಳೆ ಅವರಿಗೊಂದು ನಂಬರ್ ಸಿಕ್ಕಿದೆ. ಬಳಿಕ ಆ ನಂಬರ್‌ಗೆ ಕಾಲ್ ಮಾಡಿ ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ ಎಂದು ಹೇಳಿಕೊಂಡ ವ್ಯಕ್ತಿಯ ಬಳಿ ತಾವು ಅನುಭವಿಸುತ್ತಿರುವ ನೆಟ್‌ವರ್ಕ್ ಸಮಸ್ಯೆ ಬಗ್ಗೆ ತಿಳಿಸಿದ್ದಾರೆ.
ಸಮಸ್ಯೆ ಆಲಿಸಿದ ವ್ಯಕ್ತಿ ಮಹಿಳೆಗೆ ರಿಮೋಟ್ ಆಕ್ಸೆಸ್ ಅಥವಾ ರಿಮೋಟ್ ಕಂಟ್ರೋಲ್ ಸಾಫ್ಟ್‌ವೇರ್ ಅನ್ನು ಡೌನ್‌ಲೋಡ್ ಮಾಡಲು ತಿಳಿಸಿದ್ದಾನೆ. ಆಗ ಮಹಿಳೆ ಸಾಫ್ಟ್‌ವೇರ್ ಅನ್ನು ಡೌನ್‌ಲೋಡ್ ಮಾಡಿದ್ದಾರೆ. ಬಳಿಕ ತನ್ನ ಮೊಬೈಲ್ ಸ್ಕ್ರೀನನ್ನು ಷೇರ್ ಮಾಡಿದ್ದಾರೆ. ಇಷ್ಟಲ್ಲಾ ಆದ ಬಳಿಕ ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ ಎಂದು ಪರಿಚಯ ಮಾಡಿಕೊಂಡಿದ್ದ ವ್ಯಕ್ತಿ, ಮಹಿಳೆಯ ಮೊಬೈಲ್ ಆ್ಯಕ್ಸೆಸ್ ಪಡೆದಿದ್ದಾನೆ. ನಂತರ 9583929517 ನಂಬರ್‌ಗೆ 2 ರೂಪಾಯಿ Google Pay ಮಾಡಲು ವ್ಯಕ್ತಿ ತಿಳಿಸುತ್ತಾನೆ. ಅದರಂತೆಯೇ ಮಹಿಳೆ 2ರೂಪಾಯಿ ಹಾಕುತ್ತಾರೆ..
ಮಹಿಳೆ ಹಣ ಹಾಕುವುದನ್ನು ಸೂಕ್ಷ್ಮವಾಗಿ ಗಮನಿಸಿದ ವ್ಯಕ್ತಿ ನಂತರ, ಅಪ್ಲಿಕೇಶನ್‌ನ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಮಹಿಳೆಯ ಖಾತೆಯಿಂದ ಹಣವನ್ನು ವರ್ಗಾಯಿಸಿಕೊಂಡಿದ್ದಾನೆ. ಹಂತ ಹಂತವಾಗಿ ಮೂರು ಬಾರಿ ಸುಮಾರು ₹ 2.52 ಲಕ್ಷವನ್ನು ವರ್ಗಾಯಿಸಿಕೊಂಡಿದ್ದಾನೆ. ಬಳಿಕ ಮತ್ತೆ 75 ಸಾವಿರ ರೂಗಳನ್ನು ಮತ್ತೊಂದು ಖಾತೆಯಿಂದ ವರ್ಗಾವಣೆ ಮಾಡಿಕೊಂಡಿದ್ದಾನೆ. ಆದ್ರೆ ಮಹಿಳೆಗೆ ಈ ಬಗ್ಗೆ ಮನವರಿಕೆ ಆಗಿಲ್ಲ. ಅವರು ನೆಟ್ ವರ್ಕ್ ಸರಿಮಾಡಲು ಏನು ಮಾಡುತ್ತಿದ್ದಾರೆ ಎಂದು ಸುಮ್ಮನಾಗಿದ್ದಾರೆ.
ಮಹಿಳೆಯ ಮೊಬೈಲ್ನಲ್ಲಿ ಆಕ್ಸೆಸ್ ಇದ್ದ ಆಕೆಯ ಹಾಗೂ ಆಕೆಯ ಮಗಳ ಎರಡು ಬ್ಯಾಂಕ್ ಖಾತೆಗಳಲ್ಲಿದ್ದ ಹಣವನ್ನು ಖಾಲಿ ಮಾಡಿದ್ದಾನೆ. ಬಳಿಕ ಹಣ ಕಟ್ ಆದ ಬಗ್ಗೆ ಬ್ಯಾಂಕ್ನಿಂದ ಮೊಬೈಲ್ಗೆ ಮೆಸೇಜ್ಗಳು ಬಂದದನ್ನು ಗಮನಿಸಿದ ಮಹಿಳೆ ಶಾಕ್ ಆಗಿದ್ದಾರೆ. ಬಳಿಕ ತನ್ನ ಖಾತೆಯಿಂದ ಹಣ ತೆಗೆದುಕೊಂಡಿದ್ದೀರಿ ಎಂದು ನಕಲಿ ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ ಬಳಿ ಪ್ರಶ್ನಿಸಿದ್ದಾರೆ. ಆಗ ಇನ್ನು 24 ಗಂಟೆಗಳೊಳಗೆ ನಿಮ್ಮ ಹಣ ವಾಪಾಸ್ ಬರುತ್ತೆ. ನೀವು ಚಿಂತಿಸಬೇಡಿ ಎಂದು ಸಮಾಧಾನವಾಗಿ ಉತ್ತರಿಸಿ ಕಾಲ್ ಕಟ್ ಮಾಡಿದ್ದಾನೆ. ಎಷ್ಟೇ ಕಾದರೂ ಮಹಿಳೆಗೆ ಹಣ ಬಾರದ ಹಿನ್ನೆಲೆ ಮಹಿಳೆ ಮತ್ತೆ ಅದೇ ನಂಬರ್‌ಗೆ ಕಾಲ್ ಮಾಡಿದ್ದಾರೆ. ಆದ್ರೆ ಸಂಪರ್ಕ ಸಿಗದ ಹಿನ್ನೆಲೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.