USA ನಲ್ಲಿ ನಡೆದ ರೇಸ್ ಅಕ್ರಾಸ್ ಅಮೆರಿಕ (RAAM) ಸೈಕಲ್ ರೇಸಿಂಗ್ನಲ್ಲಿ ಕರ್ನಾಟಕದ ಅಲ್ಟ್ರಾ ಸೈಕ್ಲಿಸ್ಟ್ ಶ್ರೀನಿವಾಸ್ ಗೋಕುಲನಾಥ್ ಯಶಸ್ವಿಯಾಗಿ ಗುರಿ ಮುಟ್ಟಿದ್ದಾರೆ. RAAM 2023 ರೇಸ್ನ ಏಕವ್ಯಕ್ತಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಶ್ರೀನಿವಾಸ್ ಅವರು 4,800 ಕಿ.ಮೀ ದೂರವನ್ನು 11 ದಿನಗಳು ಮತ್ತು 6 ಗಂಟೆಗಳಲ್ಲಿ ಕ್ರಮಿಸಿದರು. ಈ ಮೂಲಕ ರೇಸ್ ಅಕ್ರಾಸ್ ಅಮೆರಿಕ ಏಕವ್ಯಕ್ತಿ ವಿಭಾಗದಲ್ಲಿ 7ನೇ ಸ್ಥಾನಗಳಿಸಿದರು. ವಿಶೇಷ ಎಂದರೆ ರೇಸ್ ಅಕ್ರಾಸ್ ಅಮೆರಿಕ ಸೈಕ್ಲಿಂಗ್ ಸ್ಪರ್ಧೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಮೊದಲ ಭಾರತೀಯ ಎಂಬ ದಾಖಲೆ ಕೂಡ ಶ್ರೀನಿವಾಸ್ ಗೋಕುಲನಾಥ್ ಹೆಸರಿನಲ್ಲಿದೆ. 2017 ರ RAAM ರೇಸ್ನಲ್ಲಿ ಅವರು ಈ ಸಾಧನೆ ಮಾಡಿದ್ದರು. ಇದೀಗ ಮತ್ತೊಮ್ಮೆ ಗಂಟೆಗೆ 11.25 ಮೈಲು ವೇಗದಲ್ಲಿ ಸೈಕಲ್ ಚಲಾಯಿಸಿ ಈ ಬಾರಿಯ ರೇಸ್ನಲ್ಲಿ 7ನೇ ಸ್ಥಾನ ಅಲಂಕರಿಸಿರುವುದು ವಿಶೇಷ.
ಬೆಂಗಳೂರು ಮೂಲದ ಶ್ರೀನಿವಾಸ್ ಗೋಕುಲನಾಥ್ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಏರೋಸ್ಪೇಸ್ ಮೆಡಿಸನ್ ಸ್ಪೆಷಲಿಸ್ಟ್ ನಿಪುಣರಾಗಿರುವ ಅವರು ಭಾರತದ ಕೆಲವೇ ಅಲ್ಟ್ರಾ ಸೈಕ್ಲಿಸ್ಟ್ಗಳಲ್ಲಿ ಒಬ್ಬರು ಎಂಬುದು ವಿಶೇಷ.
“ಭಾರತೀಯ ಸೈಕ್ಲಿಸ್ಟ್ಗಳು ಕಳೆದ ಕೆಲವು ವರ್ಷಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪರಾಕ್ರಮವನ್ನು ಪ್ರದರ್ಶಿಸಿದ್ದಾರೆ. ಅಲ್ಲದೆ ಕೆಲವರು ಉತ್ತಮ ಸ್ಪರ್ಧೆಗಳಲ್ಲಿ ಭಾಗವಹಿಸಲು ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿಯೇ ಈ ಬಾರಿಯ ಆರ್ಎಎಎಂ ರೇಸ್ನಲ್ಲಿ ಮೂವರು ಭಾರತೀಯ ಸೈಕ್ಲಿಸ್ಟ್ಗಳು ಟಾಪ್-7 ರಲ್ಲಿ ಸ್ಥಾನಗಳಿಸಿರುವುದು. ಈ ಟ್ರೆಂಡ್ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಎಂಬ ವಿಶ್ವಾಸವಿದೆ. ಹಾಗೆಯೇ ಜಾಗತಿಕವಾಗಿ ಅಲ್ಟ್ರಾ-ರೇಸಿಂಗ್ ಸಕ್ರ್ಯೂಟ್‍ಗಳಲ್ಲಿ ಹೆಚ್ಚಿನ ಸೈಕ್ಲಿಸ್ಟ್ಗಳು ಭಾಗವಹಿಸಿದರೆ ನನಗೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ ಎಂದು ಶ್ರೀನಿವಾಸ್ ತಿಳಿಸಿದ್ದಾರೆ.
RAAM ಎಂಬುದು ಅಮೆರಿಕದಾದ್ಯಂತ ನಡೆಯುವ ಅಲ್ಟ್ರಾ- ಡಿಸ್ಟೆನ್ಸ್ ಸೈಕ್ಲಿಂಗ್ ರೇಸಿಂಗ್ ಸ್ಪರ್ಧೆ. ಇದನ್ನು ವಿಶ್ವದ ಅತಿ-ದೂರದ ರಸ್ತೆ ಸೈಕ್ಲಿಂಗ್ ರೇಸ್ ಎಂದು ಪರಿಗಣಿಸಲಾಗಿದೆ. ಈ ರೇಸಿಂಗ್ ಸ್ಪರ್ಧೆಯು ಅಮೆರಿಕದ ಪಶ್ಚಿಮ ಕರಾವಳಿಯಿಂದ ಶುರುವಾದರೆ, ಪೂರ್ವ ಕರಾವಳಿಯಲ್ಲಿ ಮುಕ್ತಾಯಗೊಳ್ಳುತ್ತದೆ.
ಅಂದರೆ ಅಮೆರಿಕದ ವಿವಿಧ ಭೂಪ್ರದೇಶಗಳಲ್ಲಿ ಸುಮಾರು 4,800 ಕಿ.ಮೀ. ವರೆಗೆ ಸೈಕಲ್ ತುಳಿಯಬೇಕಿದೆ. ಅಚ್ಚರಿ ಎಂದರೆ ಇದು ಪ್ರಾರಂಭದಿಂದ ಅಂತ್ಯದವರೆಗೆ ತಡೆರಹಿತ ಸ್ಪರ್ಧೆಯಾಗಿದ್ದು, ರೇಸಿಂಗ್ ಸ್ಪರ್ಧಿಗಳು ಅಂತಿಮ ಗುರಿಯನ್ನು ತಲುಪಲು ಒಂದು ವಾರದವರೆಗೆ ಸಮಯ ತೆಗೆದುಕೊಳ್ಳುತ್ತಾರೆ. ಇನ್ನು ಆರ್ಎಎಎಂ ಸೋಲೋ ರೇಸ್ ಪೂರ್ಣಗೊಳಿಸಲು 12 ದಿನಗಳ ಕಾಲಾವಕಾಶ ಇರುತ್ತದೆ.
ಇಲ್ಲಿ ಕುತೂಹಲಕಾರಿ ವಿಷಯ ಎಂದರೆ 1982 ರಲ್ಲಿ ಶುರುವಾದ ಈ ಸೋಲೋ ರೇಸಿಂಗ್ ಸ್ಪರ್ಧೆಯಲ್ಲಿ ಇದುವರೆಗೆ ಕೇವಲ 370 ಸ್ಪರ್ಧಿಗಳು ಮಾತ್ರ ಗುರಿಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಈ ಸಾಧನೆ ಮಾಡಿದ ಪಟ್ಟಿಯಲ್ಲಿ ಕನ್ನಡಿಗ ಶ್ರೀನಿವಾಸ್ ಗೋಕುಲನಾಥ್ ಹೆಸರು ಕೂಡ ಇರುವುದು ವಿಶೇಷ.