ನವದೆಹಲಿ: ಎಚ್ಡಿಎಫ್ಸಿ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ವಿಲಿನಗೊಂಡ ಬೆನ್ನಲ್ಲೇ ಈಗ ಐಡಿಎಫ್ಸಿ ಸಂಸ್ಥೆಗಳೂ (IDFC Entities Merger) ಕೂಡ ಒಂದುಗೂಡಲು ಹೊರಟಿವೆ. ಐಡಿಎಫ್ಸಿ ಲಿ ಅನ್ನು ಐಡಿಎಫ್ಸಿ ಫಸ್ಟ್ ಜೊತೆ ವಿಲೀನಗೊಳಿಸಲು ಬ್ಯಾಂಕ್ನ ಮಂಡಳಿ ಅನುಮೋದನೆ ಕೊಟ್ಟಿದೆ. ಪ್ರಾಧಿಕಾರ ಹಾಗೂ ಷೇರುದಾರರು ಈ ವಿಲೀನಕ್ಕೆ ಒಪ್ಪಿಗೆ ಸೂಚಿಸಿದರೆ ಐಡಿಎಫ್ಸಿ ಫಸ್ಟ್ ಬ್ಯಾಂಕ್ ಒಂದೇ ಉಳಿಯಲಿದೆ. ಬ್ಯಾಂಕ್ನ ಕಾರ್ಪೊರೇಟ್ ವ್ಯವಸ್ಥೆ ಸರಳಗೊಳಿಸಲು ಈ ವಿಲೀನ ಸಹಾಯವಾಗಲಿದೆ. ವಿಲೀನಗೊಂಡ ಬಳಿಕ ಇತರ ಪ್ರಮುಖ ಖಾಸಗಿ ವಲಯದ ಬ್ಯಾಂಕುಗಳಂತೆ ಐಡಿಎಫ್ಸಿ ಫಸ್ಟ್ ಬ್ಯಾಂಕ್ನಲ್ಲೂ ಪ್ರೊಮೋಟರ್ಗಳ ಷೇರುದಾರಿಕೆ ಪ್ರಮಾಣ ಕಡಿಮೆಗೊಳ್ಳುತ್ತದೆ. ಸಾರ್ವಜನಿಕ ಮತ್ತು ಸಾಂಸ್ಥಿಕ ಹೂಡಿಕೆದಾರರ ಪ್ರಮಾಣ ಹೆಚ್ಚಾಗಲಿದೆ.
ಐಡಿಎಫ್ಸಿ ಲಿಮಿಟೆಡ್ ಮತ್ತು ಐಡಿಎಫ್ಸಿ ಫಸ್ಟ್ ಬ್ಯಾಂಕ್ ವಿಲೀನ ಎಷ್ಟು ಕೋಟಿ ಮೊತ್ತದ ಡೀಲ್ ಎಂಬುದು ನಿರ್ದಿಷ್ಟವಾಗಿಲ್ಲ. 100:155 ಷೇರುಹಂಚಿಕೆ ಸೂತ್ರ ಸದ್ಯಕ್ಕೆ ನಿರ್ಧರಿಸಲಾಗಿದೆ. ಅದರ ಪ್ರಕಾರ ಐಡಿಎಫ್ಸಿ ಲಿ ಸಂಸ್ಥೆಯ ಪ್ರತೀ 100 ಷೇರಿಗೆ ಬದಲಾಗಿದೆ ಐಡಿಎಫ್ಸಿ ಫಸ್ಟ್ ಬ್ಯಾಂಕ್ನ 155 ಈಕ್ವಿಟಿ ಷೇರುಗಳು ಸಿಗುತ್ತವೆ. ಐಡಿಎಫ್ಸಿಯಲ್ಲಿ 100 ಷೇರುಗಳನ್ನು ಹೊಂದಿರುವವರಿಗೆ ಈಗ ಬ್ಯಾಂಕ್ನ 155 ಷೇರುಗಳು ಸಿಗುತ್ತವೆ. ವಿಲೀನ ಮುಗಿದ ಬಳಿಕ ಐಡಿಎಫ್ಸಿ ಬ್ಯಾಂಕ್ನ ಷೇರುಮೌಲ್ಯ ಶೇ. 4.9ರಷ್ಟು ಹೆಚ್ಚಾಗಬಹುದು ಎಂದು ಲೆಕ್ಕ ಮಾಡಲಾಗಿದೆ.
ಸೌಕರ್ಯ ಯೋಜನೆಗಳಿಗೆ ಫಂಡಿಂಗ್ ಒದಗಿಸಲು 1997ರಲ್ಲಿ ಐಡಿಎಫ್ಸಿ ಲಿ ಸ್ಥಾಪನೆಯಾಗಿತ್ತು. ಆರ್ಬಿಐ ಒಪ್ಪಿಗೆ ಪಡೆದು 2014ರಲ್ಲಿ ಐಡಿಎಫ್ಸಿ ಬ್ಯಾಂಕ್ ಸ್ಥಾಪನೆ ಆಯಿತು. 2018ರ ಡಿಸೆಂಬರ್ 18ರಂದು ಕ್ಯಾಪಿಟಲ್ ಫಸ್ಟ್ ಕಂಪನಿ ಜೊತೆ ಐಡಿಎಫ್ಸಿ ಬ್ಯಾಂಕ್ ವಿಲೀನಗೊಂಡು ಐಡಿಎಫ್ಸಿ ಫಸ್ಟ್ ಬ್ಯಾಂಕ್ ಎಂದು ಹೆಸರು ಬದಲಾಯಿತು. ಈ ಬ್ಯಾಂಕ್ನಲ್ಲಿ ಐಡಿಎಫ್ಸಿ ಲಿ ಸಂಸ್ಥೆ ಶೇ. 39.93ರಷ್ಟು ಷೇರುಪಾಲು ಹೊಂದಿದೆ.
ಐಡಿಎಫ್ಸಿ ಫಸ್ಟ್ ಬ್ಯಾಂಕ್ನ ಷೇರುಬೆಲೆ ಇಳಿಕೆ
ಐಡಿಎಫ್ಸಿಯ ಎರಡು ಸಂಸ್ಥೆಗಳು ವಿಲೀನಗೊಳ್ಳಲು ಮುಂದಾಗುತ್ತಿದ್ದಂತೆಯೇ ಷೇರುಪೇಟೆಯಲ್ಲಿ ಮಿಶ್ರ ಸ್ಪಂದನೆ ಸಿಕ್ಕಿದೆ. ಐಡಿಎಫ್ಸಿ ಲಿ ಸಂಸ್ಥೆಯ ಷೇರುಗಳಿಗೆ ಬೇಡಿಕೆ ಹೆಚ್ಚಾಗಿ, ಅದರ ಮೌಲ್ಯ ಸಾರ್ವಕಾಲಿಕ ಎತ್ತರಕ್ಕೆ ಹೋಗಿದೆ. ಅದಕ್ಕೆ ತದ್ವಿರುದ್ಧವಾಗಿ ಐಡಿಎಫ್ಸಿ ಫಸ್ಟ್ ಬ್ಯಾಂಕ್ನ ಷೇರುಮೌಲ್ಯ ಜುಲೈ 4ರ ಬೆಳಗಿನ ವಹಿವಾಟಿನಲ್ಲಿ ತೀವ್ರ ಹಿನ್ನಡೆ ಕಾಣುತ್ತಿದೆ.