ಬಕ್ರೀದ್​ ಟೈಮಲ್ಲಿ 6 ಲಕ್ಷ ರೂ ವರೆಗೆ ರೇಟ್​​ ಏರಿಸಿಕೊಂಡಿದ್ದ ಧಾರವಾಡದ ಜಂಗ್ಲಿ ಟಗರು ಹೃದಯಾಘಾತಕ್ಕೆ ಬಲಿ

ಆತ ಕಾಳಗ ಮಾಡಲು ಕಣದಲ್ಲಿ ಕಾಲೂರಿದರೆ ಎದುರಾಳಿಗಳು ಚಿತ್​ ಆಗುತ್ತಿದ್ದರು, ಮುಂದೆ ಬರಲು ಹಿಂಜರಿಯುತ್ತಿದ್ದರು. ಅದೂ ಮೀರಿ ಕಾಳಗಕ್ಕೆ ಬಂದರೆ ಒಂದೇ ಒಂದು ಡಿಚ್ಚಿಗೆ ತಲೆ ತಿರುಗಿ ಬೀಳುತ್ತಿದ್ದುದು ಗ್ಯಾರಂಟಿ. ಇನ್ನು ಆತ ಯಾವುದೇ ಕಾಳಗದಲ್ಲಿ ಸೋತಿದ್ದೇ ಇಲ್ಲ. ಆತ ಧಾರವಾಡ ಜನರ ಹೆಮ್ಮೆಯ ಮಗ. ಆದರೆ ಆತ ಒಮ್ಮಿಂದೊಮ್ಮೆಲೇ ಇಲ್ಲ ಅಂದರೆ ಹೇಗಾಗಬೇಡ? ಅಂಥದ್ದೊಂದು ಘಟನೆಯಿಂದ ಆತನ ಕುಟುಂಬಸ್ಥರಷ್ಟೇ ಅಲ್ಲ, ಆತನ ಫ್ಯಾನ್ ಗಳು ಕೂಡ ದುಃಖದ ಕಡಲಿಗೆ ಜಾರಿದ್ದಾರೆ.

ಅಷ್ಟಕ್ಕೂ ಯಾರು ಆತ? ಬನ್ನಿ ನೋಡೋಣ… ಆತ ಕಾಲು ಕೆರೆದು ಓಡಿ ಬಂದು ಹೊಡೆಯೋ ಒಂದೇ ಒಂದು ಡಿಚ್ಚಿಗೆ ಎದುರಾಳಿ ಫಿನಿಷ್; ಹಿಂದೆ ಸರಿದು ಓಡಿ ಹೋದರೆ ಬಚಾವ್; ನುಗ್ಗಿ ಬಂದು ಡಿಚ್ಚಿ ಕೊಡುತ್ತಿದ್ದಂತೆಯೇ ಜನರ ಕೇಕೆ ಶಿಳ್ಳೆ -ಹೀಗೆ ಎದುರಾಳಿಗಳ ಎದೆಯನ್ನೇ ಬೆಚ್ಚಿ ಬೀಳಿಸುವಂತೆ ಡಿಚ್ಚಿ ಕೊಡೋ ಈ ಟಗರಿನ ಹೆಸರು ಧಾರವಾಡ ಜಂಗ್ಲಿ.

ಎದುರಾಳಿ ಎಷ್ಟೇ ಗಟ್ಟಿಯಾಗಿದ್ದರೂ ಧಾರವಾಡ ಜಂಗ್ಲಿ ಒಂದು ಬಾರಿ ಹೊಡೆದರೆ ನೆಲಕ್ಕುರುಳೋದು ಗ್ಯಾರಂಟಿ. ಧಾರವಾಡ ನಗರದ ಕಮಲಾಪುರ ಬಡಾವಣೆಯ ಮಂಜುನಾಥ ಅಮ್ಮಿನಬಾವಿ ಅನ್ನೋರು ನಾಲ್ಕು ವರ್ಷಗಳ ಹಿಂದೆ ಈ ಟಗರನ್ನು ಖರೀದಿಸಿದ್ದರು.

ಆಗ ಈ ಟಗರಿಗೆ ಮೂರು ವರ್ಷವಾಗಿತ್ತು. ಅಮ್ಮಿನಬಾವಿ ಕುಟುಂಬಸ್ಥರೆಲ್ಲರೂ ಈ ಜಂಗ್ಲಿಯನ್ನು ಮನೆಯ ಮಗನಂತೆಯೇ ಸಾಕಿ, ಬೆಳೆಸಿದರು. ಅಲ್ಲದೇ ಇದನ್ನು ಟಗರು ಕಾಳಗಕ್ಕೆ ಸಿದ್ದ ಮಾಡಿದರು. ನೋಡನೋಡುತ್ತಿದ್ದಂತೆಯೇ ಜಂಗ್ಲಿ ಧಾರವಾಡದಲ್ಲಿ ಫೇಮಸ್ ಆಗಿ ಹೋದ.

ಎಲ್ಲಿಯೇ ಟಗರು ಕಾಳಗ ಇದ್ದರೂ ಅಲ್ಲಿಗೆ ಧಾರವಾಡ ಜಂಗ್ಲಿ ಹಾಜರ್. ಹೀಗೆ ಕಾಳಗಕ್ಕೆ ಹೋದವನು ಒಂದು ಬಾರಿಯೂ ಸೋತಿದ್ದೇ ಇಲ್ಲ. ತನ್ನ ಡಿಚ್ಚಿಯಿಂದಲೇ ಫೇಮಸ್ ಆಗಿದ್ದ ಧಾರವಾಡ ಜಂಗ್ಲಿ ಇಂದು ಮೃತಪಟ್ಟಿದೆ. ಇದರಿಂದಾಗಿ ಅಮ್ಮಿನಬಾವಿ ಕುಟುಂಬ ಮನೆ ಮಗನನ್ನೇ ಕಳೆದುಕೊಂಡಷ್ಟು ದುಃಖದಲ್ಲಿದ್ದಾರೆ.

ಮೊನ್ನೆ ಭಾನುವಾರ ಕೊಂಚ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ವೈದ್ಯರ ಬಳಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಸೋಮವಾರ ಬೆಳಿಗ್ಗೆ ಏಳುವಷ್ಟರಲ್ಲಿಯೇ ಜಂಗ್ಲಿ ಕೊನೆಯುಸಿರೆಳೆದಿತ್ತು. ಜಂಗ್ಲಿ ಸತ್ತಿದೆ ಅನ್ನೋದನ್ನು ಕುಟುಂಬಸ್ಥರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಲೇ ಇಲ್ಲ.

ಮನುಷ್ಯರು ಮೃತಪಟ್ಟಾಗ ಯಾವ ರೀತಿ ಅಂತಿಮಸಂಸ್ಕಾರ ಮಾಡುತ್ತಾರೋ ಅದೇ ರೀತಿ ಜಂಗ್ಲಿ ಅಂತ್ಯಸಂಸ್ಕಾರವನ್ನೂ ಮಾಡಲು ಮನೆಯವರು ನಿರ್ಧರಿಸಿದ್ದಾರೆ. ಟಗರಿನ ಶವವನ್ನು ಮನೆಯಲ್ಲಿ ಇಟ್ಟು, ಅದರ ಸುತ್ತಲೂ ಗೆದ್ದಾಗ ಪಡೆದಿರೋ ನೆನಪಿನ ಕಾಣಿಕೆಗಳನ್ನು ಇಡಲಾಗಿತ್ತು. ಜಂಗ್ಲಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ರೇಣಮ್ಮನಿಗೆ ಇದೀಗ ಮಗನನ್ನ ಕಳೆದುಕೊಂಡಷ್ಟೇ ದುಃಖವಾಗಿದೆ.

ಧಾರವಾಡದ ಜಂಗ್ಲಿ ಹೃದಯಾಘಾತಕ್ಕೆ ಬಲಿ

ಇನ್ನು ಈ ಧಾರವಾಡ ಜಂಗ್ಲಿಯನ್ನು ಖರೀದಿಸಲು ಅನೇಕರು ಬಂದಿದ್ದರಂತೆ. ಕಳೆದ ವಾರವಷ್ಟೇ ಇದನ್ನು ಖರೀದಿಸಲು ಬಂದಿದ್ದ ವ್ಯಕ್ತಿಯೊಬ್ಬರು, 6 ಲಕ್ಷ ರೂಪಾಯಿವರೆಗೆ ಕೊಡೋದಾಗಿ ಹೇಳಿದ್ದರಂತೆ. ಆದರೆ ಯಾವುದೇ ಕಾರಣಕ್ಕೂ ಮಾರಾಟ ಮಾಡಲು ಮನೆಯವರು ನಿರಾಕರಿಸಿದ್ದರು. ಅದಾಗಿ ಒಂದು ವಾರಕ್ಕೆ ಟಗರು ಮೃತಪಟ್ಟಿದೆ. ಹೀಗೆ ಆಕಸ್ಮಿಕವಾಗಿ ಮೃತಪಡಲು ಹೃದಯಾಘಾತವೇ ಕಾರಣ ಎನ್ನಲಾಗಿದೆ. ಒಟ್ಟಿನಲ್ಲಿ ಧಾರವಾಡ ಜನರ ಮನಸ್ಸನ್ನು ಗೆದ್ದಿದ್ದ ಧಾರವಾಡ ಜಂಗ್ಲಿ ಈಗ ನೆನಪಷ್ಟೇ…