ಕಾರವಾರ: ಓಟಿಪಿ ಪಡೆದು ಸಾರ್ವಜನಿಕರಿಗೆ ಲಕ್ಷಾಂತರ ರೂ. ಆನ್‌ಲೈನ್ ವಂಚನೆ ಮಾಡಿದ್ದರ ಕುರಿತು ತನಿಖೆ ನಡೆಸಿದ ಸಿಇಎನ್ ಕ್ರೈಂ ಪೊಲೀಸರು ಸುಮಾರು 7.9 ಲಕ್ಷ ರೂ. ಹಣವನ್ನು ಅವರ ಖಾತೆಗಳಿಗೆ ಮರು ಜಮಾವಣೆ ಮಾಡಲು ಯಶಸ್ವಿಯಾಗಿದ್ದಾರೆ. ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ನಾಲ್ಕು ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ.
ಜುಲೈ 21 ರಂದು ಸಿದ್ದಾಪುರದ ಗಜಾನನ ಎನ್ನುವವರಿಂದ ಓಟಿಪಿ ಪಡೆದು 1,79,929 ರೂ. ಗಳನ್ನು ಯಾರೋ ಆರೋಪಿಗಳ ಎಗರಿಸಿದ್ದರು. ಈ ಬಗ್ಗೆ ಹಣ ಕಳೆದುಕೊಂಡವರು ಸೈಬರ್ ಪೋರ್ಟಲ್ ಮೂಲಕ ಸಿಇಎನ್ ಅಪರಾಧ ವಿಭಾಗಕ್ಕೆ ದೂರು ಸಲ್ಲಿಸಿದ್ದರು. ತಕ್ಷಣ ಕ್ರಮ ಕೈಗೊಂಡ ಅಧಿಕಾರಿಗಳು ಸಂಬಂಧಪಟ್ಟ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಿ ಅವರ ಹಣವನ್ನು ಜಮಾ ಮಾಡಲು ಯಶಸ್ವಿಯಾಗಿದ್ದರೆ.
ಇನ್ನು ಏಪ್ರಿಲ್ 27 ರಂದು ಹೊನ್ನಾವರದ ತಾರಾ ಸುಭಾಷ ಎನ್ನುವವರ ಬ್ಯಾಂಕ್ ಖಾತೆಯಿಂದ ವಂಚಿಸಿದ್ದ 50 ಸಾವಿರ ರೂ.ಗಳನ್ನು, ಜನವರಿ 10 ರಂದು ಕಾರವಾರ ನೌಕಾನೆಲೆಯ ಸಿಬ್ಬಂದಿ ಮನೋಜ್ ಅವರ ಬ್ಯಾಂಕ್ ಖಾತೆಯಿಂದ ಎಗರಿಸಿದ್ದ 1,83,678 ರೂ.ಗಳನ್ನು ಹಾಗೂ 2021ರ ಸೆಪ್ಟೆಂಬರ್ 8 ರಂದು ಅಂಕೋಲಾದ ಮಂಜುನಾಥ ಅವರ ಖಾತೆಯಿಂದ ಲಪಟಾಯಿಸಿದ್ದ 3,77,700 ರೂ.ಗಳನ್ನು ಸಂಬಂಧಪಟ್ಟ ನೋಡಲ್ ಅಧಿಕಾರಿಗಳೊಂದಿಗೆ ಪತ್ರ-ವ್ಯವಹಾರ ನಡೆಸಿ ಹಣ ಮರು ಜಮಾ ಮಾಡಿಸಲಾಗಿದೆ ಎಂದು ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸಾರ್ವಜನಿಕರಲ್ಲಿ ಎಚ್ಚರಿಕೆ ಅಗತ್ಯ
ಯಾವುದೇ ಬ್ಯಾಂಕ್ ಗಳಾಗಲಿ, ಮೊಬೈಲ್ ಕಂಪೆನಿಗಳಾಗಲಿ ಅಥವಾ ಇನ್ಯಾವುದೇ ಸಂಸ್ಥೆಗಳಾಗಲಿ ನವೀಕರೀಸುವಂತಹ ಚಟುವಟಿಕೆಗಾಗಿ ಕೆವೈಸಿ, ಆಧಾರ್, ಡೆಬಿಟ್ ಕ್ರೆಡಿಟ್ ಕಾರ್ಡ್, ಓಟಿಪಿ ವಿವರಗಳನ್ನು ಹಾಗೂ ಯಾವುದೇ ಅಪ್ಲಿಕೇಷನ್ ಡೌನಲೋಡ್ ಮಾಡಲು ಸಾರ್ವಜನಿಕರಿಗೆ ಎಂದಿಗೂ ಹೇಳುವುದಿಲ್ಲ. ಆದ್ದರಿಂದ ಮೋಸದ ಕರೆಗಳಿಗೆ ವಿವರಗಳನ್ನು ನೀಡಬಾರದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಇನ್ನು ಗೂಗಲ್ ಪೇ, ಪೋನ್ ಪೇ, ತೇಜ್ ಆಪ್ ಮುಂತಾದವುಗಳ ಮೂಲಕ ಹಣ ವರ್ಗಾವಣೆ ಮಾಡಿ ಹಣವು ಸಂಬಂಧಪಟ್ಟವರಿಗೆ ತಲುಪದಿದ್ದರೆ ವೆಬ್‌ಸೈಟ್‌ನಲ್ಲಿ ಕಸ್ಟಮರ್ ಕೇರ್ ನಂಬರ್ ಅನ್ನು ಹುಡುಕಿ ಅವರಿಗೆ ಕಾಲ್ ಮಾಡಿದಾಗ ಅವರು ಒಂದು ಲಿಂಕ್, ಸಂದೇಶ ಅಥವಾ ಯುಪಿಐ ಪಿನ್ ಅನ್ನು ಮತ್ತೊಂದು ನಂಬರ್‌ಗೆ ಕಳುಹಿಸಲು ಹೇಳಿದರೆ ಕಳುಹಿಸಬಾರದು. ಅಂತಹ ಕಸ್ಟಮರ್ ಕೇರ್ ನಂಬರ್‌ಗಳು ನಿಜವಾದ ಕಸ್ಟಮರ್ ಕೇರ್ ನಂಬರ್ ಗಳಾಗಿರುವುದಿಲ್ಲ. ಈ ಬಗ್ಗೆ ಸದಾ ಜಾಗೃತರಾಗಿರಬೇಕು ಎಂದು ಪೊಲೀಸ ಇಲಾಖೆ ಅಧಿಕಾರಿಗಳು ಕೋರಿದ್ದಾರೆ.
ಆನ್‌ಲೈನ್ ವಂಚನೆಗೊಳಗಾದ ತಕ್ಷಣ ಹೀಗೆ ಮಾಡಿ
ಇಷ್ಟೆಲ್ಲ ಎಚ್ಚರಿಕೆ ನೀಡಿದರೂ ಅದನ್ನು ಪಾಲಿಸದೇ ಮತ್ತೆ ಮತ್ತೆ ವಂಚನೆಗೊಳಗಾಗುತ್ತಿರುವುದು ಸಾಮಾನ್ಯವಾಗಿದೆ. ಹೀಗೇ ಒಂದು ವೇಳೆ ಸಾರ್ವಜನಿಕರು ಸೈಬರ್ ಅಪರಾಧದ ತೊಂದರೆಗೆ ಒಳಗಾಗಿದ್ದರೆ ಕೂಡಲೇ 1930 ಅಥವಾ 112 ಗೆ ಕರೆ ಮಾಡಿ ದೂರು ದಾಖಲಿಸಬೇಕು. ಅಲ್ಲದೇ ಸೈಬರ್ ಪೋರ್ಟಲ್: www.cybercrime.gov.in ರಲ್ಲಿ ದೂರನ್ನು ದಾಖಲಿಸಬಹುದಾಗಿದೆ. ಅಲ್ಲದೇ ಹತ್ತಿರದ ಪೊಲೀಸ್ ಠಾಣೆ ಅಥವಾ ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ದೂರು ದಾಖಲಿಸಬೇಕು. ತಕ್ಷಣದಲ್ಲಿ ದೂರು ನೀಡಿದರೆ ಅಪರಾಧ ಪ್ರಕರಣವನ್ನು ಭೇದಿಸಿ ಕಳೆದುಕೊಂಡ ಹಣವನ್ನು ಮರಳಿ ಜಮಾ ಮಾಡಿಸಲು ಅನುಕೂಲವಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.