ಮಹಾರಾಷ್ಟ್ರದ ಜನರು ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳಿಗೆ ಬಲಿಯಾಗುವುದಿಲ್ಲ: ಶರದ್ ಪವಾರ್

ಮುಂಬೈ: ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಕೆಲವು ಗುಂಪುಗಳು ರಾಜ್ಯ ಮತ್ತು ದೇಶದಲ್ಲಿ ಜನರ ನಡುವೆ ಬಿರುಕು ಮೂಡಿಸುವ ಪ್ರಯತ್ನ ಮಾಡುತ್ತಿವೆ. ಮಹಾರಾಷ್ಟ್ರದ ಜನರು ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳಿಗೆ ಬಲಿಯಾಗುವುದಿಲ್ಲ ಎಂದು ಎನ್‌ಸಿಪಿ ನಾಯಕ ಶರದ್ ಪವಾರ್ ಹೇಳಿದ್ದಾರೆ.

ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಮಹಾರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿದ್ದೆವು. ಆದರೆ ನಮ್ಮ ಸರ್ಕಾರವನ್ನು ಕೆಲವರು ಪತನಗೊಳಿಸಿದರು. ಪಶ್ಚಿಮ ಬಂಗಾಳ ಸರ್ಕಾರದ ಮೇಲೆ ದಾಳಿ ನಡೆಸಲಾಗುತ್ತಿದೆ. ದೆಹಲಿ, ಪಂಜಾಬ್‌ನಲ್ಲೂ ಇದೇ ಆಗುತ್ತಿದೆ ಎಂದರು.

ಇಂದು ಮಹಾರಾಷ್ಟ್ರಮತ್ತು ದೇಶದಲ್ಲಿ ಕೆಲವು ಗುಂಪುಗಳಿಂದ ಸಮಾಜದಲ್ಲಿ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಬಿರುಕು ಮೂಡಿಸಲಾಗುತ್ತಿದೆ. ನಾವು ಬಿಜೆಪಿ ವಿರುದ್ಧ ನಿಲ್ಲಲು ಪ್ರಯತ್ನಿಸಿದ್ದೇವೆ. ಆದರೆ ದುರಾದೃಷ್ಟವಶಾತ್ ನಮ್ಮಲ್ಲಿ ಕೆಲವರು ಅದಕ್ಕೆ ಬಲಿಯಾದರು ಎಂದು ತಮ್ಮ ಸಹೋದರ ಸಂಬಂಧಿ ಅಜಿತ್ ಪವಾರ್ ಹೆಸರು ಉಲ್ಲೇಖಿಸದೇ ವಾಗ್ದಾಳಿ ನಡೆಸಿದರು. 

ಸಾರ್ವಜನಿಕರ ಬೆಂಬಲದಿಂದ ನಾವು ಮತ್ತೆ ಬಲಗೊಳ್ಳುತ್ತೇವೆ. ಅದೇನೇ ಇದ್ದರೂ ಮಹಾರಾಷ್ಟ್ರದ ಜನರು ಈ ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳಿಗೆ ಶರಣಾಗುವುದಿಲ್ಲ. ಮಹಾರಾಷ್ಟ್ರಮತ್ತೆ ಪ್ರಗತಿಯ ಹಾದಿಯಲ್ಲಿ ಸಾಗುತ್ತದೆ. ಆ ನಿಟ್ಟಿನಲ್ಲಿ ನಾವು ಪ್ರಯತ್ನ ಮುಂದುವರಿಸುತ್ತೇವೆ ಎಂದು ಭರವಸೆ ನೀಡಿದರು.