ಹೆಸರು- ಚಿಹ್ನೆ ನಮ್ಮದು, ಡಿಸಿಎಂ ಆದ ಬೆನ್ನಲ್ಲೇ ಎನ್‌ಸಿಪಿಗೆ ಮತ್ತೊಂದು ಶಾಕ್ ನೀಡಿದ ಅಜಿತ್ ಪವಾರ್!

ಮುಂಬೈ(ಜು02) ಮಹಾರಾಷ್ಟ್ರದಲ್ಲಿ ಕಳೆದ 2 ವರ್ಷದಲ್ಲಿ ಪದೇ ಪದೇ ರಾಜಕೀಯ ಬಿರುಗಾಳಿ ಬೀಸುತ್ತಲೇ ಇದೆ. ಇದೀಗ ಊಹೆಗೂ ನಿಲುಕದ ಸುಂಟರಗಾಳಿಯೇ ಬೀಸಿದೆ. ಎನ್‌ಸಿಪಿ ನಾಯಕ ಅಜಿತ್ ಪವಾರ್ ಹಾಗೂ ಸಚಿವರು ಬಿಜೆಪಿ-ಶಿವಸೇನೆ ಸರ್ಕಾರ ಸೇರಿಕೊಂಡಿದ್ದಾರೆ. ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಎನ್‌ಸಿಪಿ ಪಕ್ಷಕ್ಕೆ ನೀಡಿದ ಹೊಡೆತಕ್ಕೆ ಇದೀಗ ಪಕ್ಷವೇ ನಿರ್ನಾಮ ಹಂತಕ್ಕೆ ತಲುಪಿದೆ. 9 ಶಾಸಕರ ಜೊತೆ ಬಿಜೆಪಿ-ಶಿವಸೇನೆ ಮೈತ್ರಿಯಲ್ಲಿ ಅಜಿತ್ ಪವಾರ್ ಸೇರಿಕೊಂಡಿದ್ದಾರೆ. ಈ ಶಾಕ್‌ನಿಂದ ಎನ್‌ಸಿಬಿ ಹೊರಬರುವ ಮುನ್ನವೇ ಮತ್ತೊಂದು ಶಾಕ್ ನೀಡಲಾಗಿದೆ. ಎನ್‌ಸಿಪಿ ಪಕ್ಷದ ಹೆಸರು ಹಾಗೂ ಚಿಹ್ನೆ ನಮ್ಮದು ಎಂದು ಅಜಿತ್ ಪವಾರ್ ಹೇಳಿದ್ದಾರೆ. ಈ ಮೂಲಕ ಈ ಹಿಂದೆ ಏಕನಾಥ್ ಶಿಂಧೆ ಬಣ ಹಾಗೂ ಉದ್ಧವ್ ಠಾಕ್ರೆ ಬಣದ ನಡುವೆ ನಡೆದ ಶಿವಸೇನೆ ಪಕ್ಷದ ಹೆಸರು ಹಾಗೂ ಚಿಹ್ನೆ ಹೋರಾಟ ಇದೀಗ ಎನ್‌ಸಿಪಿಯಲ್ಲೂ ಆರಂಭವಾಗುವ ಎಲ್ಲಾ ಲಕ್ಷಗಳು ಗೋಚರಿಸುತ್ತಿದೆ. 

ಎನ್‌ಸಿಪಿ ಪಾರ್ಟಿ ನಮ್ಮದು. ಈ ಪಾರ್ಟಿ ಅಡಿಯಲ್ಲೇ ನಾವು ಬಿಜೆಪಿ ಹಾಗೂ ಶಿವಸೇನೆ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದೇವೆ. ಎನ್‌ಸಿಪಿ ಪಕ್ಷ ಹಾಗೂ ಎನ್‌ಸಿಪಿ ಚಿಹ್ನೆ ಅಡಿಯಲ್ಲೇ ಮೈತ್ರಿ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದೇವೆ. ಹೀಗಾಗಿ ಎನ್‌ಸಿಪಿ ಪಾರ್ಟಿ ನಮ್ಮದು ಎಂದು ಅಜಿತ್ ಪವಾರ್ ಹೇಳಿದ್ದಾರೆ. ಮುಂಬರುವ ಚುನಾವಣೆಯಲ್ಲಿ ನಾವು ಎನ್‌ಸಿಪಿ ಚಿಹ್ನೆ ಅಡಿಯಲ್ಲೇ ಸ್ಪರ್ಧಿಸುತ್ತೇವೆ ಎಂದು ಅಜಿತ್ ಪವಾರ್ ಹೇಳಿದ್ದಾರೆ.

ಇದೀಗ ಎನ್‌ಸಿಪಿಯಲ್ಲಿರುವ ಸುಪ್ರೀಂ ಸುಪ್ರಿಯಾ ಸುಳೆ, ಶರದ್ ಪವಾರ್ , ಪ್ರಫುಲ್ ಪಟೇಲ್ ಸೇರಿದಂತೆ ಇತರ ನಾಯಕರಿಗೆ ಕಾನೂನು ಹೋರಾಟದ ಸಂಕಷ್ಟ ಎದುರಾಗಿದೆ. ಇತ್ತೀಚೆಗೆ ಏಕನಾಥ್ ಶಿಂಧೆ ಬಣ ಇದೀ ರೀತಿ ವಾದ ಮುಂದಿಟ್ಟಿತ್ತು. ಶಿವಸೇನೆ ಹೆಸರು ಹಾಗೂ ಚಿಹ್ನೆ ತಮ್ಮದು ಎಂದು ಕೋರ್ಟ್ ಮೆಟ್ಟಿಲೇರಿತ್ತು. ಸುದೀರ್ಘ ದಿನಗಳ ಹೋರಾಟದ  ನಡುವೆ ಚನಾವಣಾ ಆಯೋಗ ಶಿಂಧೆ ಬಣಕ್ಕೆ ಚಿಹ್ನೆ ಹಾಗೂ ಹೆಸರು ನೀಡಿತ್ತು ಇದೀಗ ಇದೇ ಪರಿಸ್ಥಿತಿ ಎನ್‌ಸಿಪಿಗೆ ಎದುರಾಗುವ ಸಾಧ್ಯತೆ ಇದೆ.

ಶಿವಸೇನಾ ಮುಖಂಡ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅವರ ಬಣವನ್ನು ನಿಜವಾದ ಶಿವಸೇನೆ ಎಂದು ಘೋಷಿಸಿರುವ ಚುನಾವಣಾ ಆಯೋಗ, ಶಿಂಧೆ ಬಣಕ್ಕೇ ಮಹತ್ವದ ಬಿಲ್ಲು-ಬಾಣ ಚಿಹ್ನೆ ನೀಡಿತ್ತು. ಇದರಿಂದಾಗಿ ಶಿವಸೇನಾ ಸಂಸ್ಥಾಪಕ ಬಾಳಾ ಠಾಕ್ರೆ ಅವರ ಪುತ್ರ ಉದ್ಧವ್‌ ಠಾಕ್ರೆ ಅವರ ಬಣಕ್ಕೆ ಭಾರಿ ಹಿನ್ನಡೆಯಾಗಿದೆ. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಉದ್ಧವ್‌, ‘ಇದು ಪ್ರಜಾಪ್ರಭುತ್ವದ ಕೊಲೆ. ವಿಷಯ ಸುಪ್ರೀಂ ಕೋರ್ಟಲ್ಲಿರುವಾಗ ಆಯೋಗ ಹೇಗೆ ನಿರ್ಧರಿಸುತ್ತದೆ? ಆಯೋಗದ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಚ್‌ ಮೊರೆ ಹೋಗುತ್ತೇವೆ’ ಎಂದಿದ್ದಾರೆ. ಆದರೆ, ‘ಬಾಳಾ ಠಾಕ್ರೆ ಅವರ ತತ್ವಗಳಿಗೆ, ಸತ್ಯಕ್ಕೆ ಸಂದ ಜಯ ಇದೆ’ ಎಂದು ಆಯೋಗದ ನಿರ್ಣಯಕ್ಕೆ ಶಿಂಧೆ ಹರ್ಷಿಸಿದ್ದಾರೆ.

2018ರಲ್ಲಿ ಪಕ್ಷದ ನಿಯಮಕ್ಕೆ ತಿದ್ದುಪಡಿ ತರಲಾಗಿತ್ತು. ಆದರೆ ಅದನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿರಲಿಲ್ಲ. ಅಲ್ಲದೆ, ಪದಾಧಿಕಾರಿಗಳ ಆಯ್ಕೆ ನಿಯಮಾನುಸಾರ ನಡೆದಿಲ್ಲ. ಕೇವಲ ಭಟ್ಟಂಗಿಗಳು ಪದಾಧಿಕಾರಿಗಳಾಗಿದ್ದಾರೆ. ಇಂಥ ಸಂರಚನೆಯನ್ನು ಮಾನ್ಯ ಮಾಡಲಾಗದು. ಅಲ್ಲದೆ, ಶಿಂಧೆ ಬಣದಲ್ಲಿರುವ ಶಾಸಕರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಉದ್ಧವ್‌ ಬಣಕ್ಕಿಂತ ಹೆಚ್ಚು ಮತ ಗಳಿಸಿದ್ದರು’ ಎಂದು ಹೇಳಿ ಉದ್ಧವ್‌ ಬಣದ ಕೋರಿಕೆ ತಿರಸ್ಕರಿಸಿದೆ ಹಾಗೂ ಶಿಂಧೆ ಬಣಕ್ಕೆ ಮಾನ್ಯತೆ ನೀಡಿದೆ..