ಅಂಕೋಲಾ: ಜಿಲ್ಲೆಯ ಹಿರಿಯ ಕವಿ ನಾಡಿನ ನಾಮಾಂಕಿತ ಸಾಹಿತಿ ವಿಷ್ಣು ನಾಯ್ಕ ಅವರ 80ನೇ ಜನ್ಮದಿನವನ್ನು ಇಲ್ಲಿನ ದಿನಕರ ವೇದಿಕೆಯ ವತಿಯಿಂದ ಅಂಬಾರಕೊಡ್ಲದ ವಿಷ್ಣು ನಾಯ್ಕರ ಮನೆಯಂಗಳದಲ್ಲಿ ಶನಿವಾರ ಅರ್ಥಪೂರ್ಣವಾಗಿ ಆಚರಿಸಿ ಅಭಿನಂದನೆ ಕೋರಲಾಯಿತು.
ದಿನಕರ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ದಿನಕರ ವೇದಿಕೆಯ ಆಜೀವ ಸದಸ್ಯರಾದ ಪ್ರೊ. ಮೋಹನ ಹಬ್ಬುರವರ ಆಶಯ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಹಿರಿಯ ಚೇತನ ವಿಷ್ಣು ನಾಯ್ಕರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು
ವಿಷ್ಣು ನಾಯ್ಕರವರ ಸಾಧನೆಗಳು, ಅವರು ನಡೆದು ಬಂದ ದಾರಿ,ಹೋರಾಟಗಳು, ದಿನಕರ ದೇಸಾಯಿಯವರ ಜೊತೆಗಿನ ಒಡನಾಟಗಳು, ದಿನಕರ ಪ್ರತಿಷ್ಠಾನ ಕಟ್ಟಿ ಬೆಳೆಸಿ ಇತರ ಯುವ ಸಾಹಿತಿಗಳಿಗೆ ಮಾರ್ಗದರ್ಶನ ಮಾಡಿದ್ದು, ಇತರ ಸಂಘ ಸಂಸ್ಥೆಗಳನ್ನು ಹುಟ್ಟುಹಾಕಿ ಬೆಳೆಸಿದ ರೀತಿ ಮುಂತಾದ ವಿಷಯಗಳ ಕುರಿತು ಪ್ರೊ.ಮೋಹನ ಹಬ್ಬು, ಉಪನ್ಯಾಸಕರಾದ ಉಲ್ಲಾಸ ಹುದ್ದಾರ, ಎಂ.ಎಂ.ಕರ್ಕಿಕರ, ವೇದಿಕೆಯ ಎನ್.ವಿ.ರಾಠೋಡ್, ಅರ್ಚನಾ ನಾಯಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ವೇದಿಕೆಯ ಅಧ್ಯಕ್ಷರಾದ ರವೀಂದ್ರ ಕೇಣಿ ಮಾತನಾಡಿ ವಿಷ್ಣು ನಾಯ್ಕರವರ ದೂರದರ್ಶಿತ್ವ ಹಾಗೂ ವಿಚಾರಧಾರೆಗಳು ಇಂದಿಗೂ ಉಳಿದವರಿಗೆ ದಾರಿದೀಪ ಆಗಿದೆ ಎಂದು ಹೇಳಿದರು.
ದಿನಕರ ವೇದಿಕೆಯ ಸದಸ್ಯರಾದ ಡಾ. ಅರ್ಚನಾ ನಾಯಕರನ್ನು ಸಹ ರಾಷ್ಟ್ರೀಯ ವೈದ್ಯರ ದಿನಾಚರಣೆ ನಿಮಿತ್ತ ಪುಷ್ಪ ನೀಡಿ ಅಭಿನಂದಿಸಲಾಯಿತು.
ವೇದಿಕೆಯ ಕಾರ್ಯದರ್ಶಿ ಸಂದೇಶ ಉಳ್ಳಿಕಾಶಿ ಸ್ವಾಗತಿಸಿದರು. ಸಹಕಾರ್ಯದರ್ಶಿ ವಸಂತ ನಾಯ್ಕ ವಂದಿಸಿದರು. ಕೋಶಾಧ್ಯಕ್ಷ ಸಂತೋಷ ನಾಯಕ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ವೇದಿಕೆಯ ಸಂಘಟನಾ ಕಾರ್ಯದರ್ಶಿ ರಫೀಖ ಶೇಖ್, ಪೋಷಕ ಸದಸ್ಯರಾದ ಶ್ಯಾಮಸುಂದರ ಗೌಡ, ಕೆ.ಎಸ್.ಬೋರಕರ, ದುರ್ಗಾನಂದ ದೇಸಾಯಿ,ಶ್ರೀಮತಿ ಶೀಲಾ ಬಂಟ್, ಬಿ.ಎಲ್. ಸಂಜೀವರಾವ, ವಿಕ್ರಾಂತ ಕೇಣಿ, ಮಂಜುಳಾ ಬಂಟ್, ಲಲಿತಾ ನಾಯ್ಕ, ನಿರುಪಮಾ ಗೌಡ, ಸುಜನ ಕೇಣಿ ವಿಷ್ಣು ನಾಯ್ಕರವರ ಸಹೋದರರಾದ ದತ್ತಾ, ಅನಂತ,ರಾಮಾ ನಾಯ್ಕ, ಮಗಳು ಭಾರತಿ ನಾಯ್ಕ ಮತ್ತು ಕುಟುಂಬದ ಸದಸ್ಯರು ಉಪಸ್ಥಿತರಿದ್ದರು