ನಮ್ಮ ಜನರು ಅಕ್ಷರಸ್ಥರಾಗುತ್ತಿದ್ದಾರೆಯೇ ಹೊರತು ಪ್ರಜ್ಞಾವಂತರಾಗಿಲ್ಲ

ಕುಮಟಾ : ಇದು ಕೇವಲ ಕುಮಟಾ ತಾಲೂಕಿನ ಸಮಸ್ಯೆಯಲ್ಲ. ನಮ್ಮ ಇಡೀ ದೇಶದ ದುಃಸ್ಥಿತಿ. “ಇಲ್ಲಿ ಉಗುಳಬೇಡಿ..” “ಇಲ್ಲಿ ಕಸ ಚೆಲ್ಲಬೇಡಿ” ಎಂದು ಪುರಸಭೆಯವರು ಸ್ಪಷ್ಟವಾಗಿ ಬೋರ್ಡ ಬರೆದು ಹಾಕಿದ್ದರೂ ಸಹ ನಮ್ಮ‌ ಜನ ಉದ್ದೇಶಪೂರ್ವಕವಾಗಿ ಅಲ್ಲೇ ಉಗುಳುತ್ತಾರೆ, ಅಲ್ಲೇ ತ್ಯಾಜ್ಯವನ್ನೂ ಎಸೆಯುತ್ತಾರೆ.
ಹೌದು, ಇದು ಕುಮಟಾ ತಾಲೂಕಿನ ಹಳೇ ಬಸ್ ನಿಲ್ದಾಣದ ಎದುರು ಕಂಡು ಬಂದ ದೃಶ್ಯ. “ಇಲ್ಲಿ ತ್ಯಾಜ್ಯವನ್ನು ಎಸೆಯಬಾರದು, ಎಸೆದರೆ ದಂಡ ವಿಧಿಸಲಾಗುವುದು..” ಎಂದು ಕುಮಟಾ ಪರಸಭೆಯವರು ಅಷ್ಟು ಸ್ಪಷ್ಟವಾಗಿ ಬೋರ್ಡ ಹಾಕಿದ್ದರೂ ಸಹ, ಜನರು ಅಲ್ಲೇ ಹೆಚ್ಚಿನ ತ್ಯಾಜ್ಯವನ್ನು ಎಸೆದಿದ್ದಾರೆ. ಬೋರ್ಡ ಹಾಕಿದಲ್ಲೇ ತ್ಯಾಜ್ಯಗಳ ರಾಶಿ, ಪ್ಲಾಸ್ಟಿಕ್ ರಾಶಿ ತುಂಬಿ, ನೀರು ಹರಿದು ಹೋಗಲು ಸಾಧ್ಯವಾಗದೇ ಗಬ್ಬು ನಾರುತ್ತಿದೆ.
ನಾವು ಎಲ್ಲದಕ್ಕೂ ಸರ್ಕಾರವನ್ನು ನಿಂದಿಸುತ್ತೇವೆ.. ಆದರೆ ಇಂತಹ ವಿಚಾರಗಳಲ್ಲಿ ಸರ್ಕಾರವನ್ನು ನಿಂದಿಸುವುದು ಸರಿಯೇ? ಕಂಡ, ಕಂಡಲ್ಲಿ ತ್ಯಾಜ್ಯವನ್ನು ಎಸೆದು ಪರಿಸರವನ್ನು ಮಲಿನಗೊಳಿಸಬಾರದೆಂದು ನಾಗರೀಕರಾದ ನಮಗೆ ತಿಳಿದಿಲ್ಲವೇ? ಜನರು ಕಸವನ್ನು ಎಲ್ಲೆಂದರಲ್ಲಿ ಎಸೆಯದಿರಲಿ‌ ಎಂದು ಪುರಸಭೆಯ ಸಿಬ್ಬಂದಿಗಳು ಎರಡು ದಿನಕ್ಕೊಮ್ಮೆ ಮನೆ ಮನೆಗೂ ಬಂದು ಎಲ್ಲ ಮನೆಯ ಕಸವನ್ನೂ ಒಟ್ಟು ಮಾಡಿಕೊಂಡು ಹೋಗುತ್ತಾರೆ. ಹೀಗಿದ್ದೂ ಸಹ ಇಂತಹ ದುಃಸ್ಥಿತಿ.

ಇದನ್ನೆಲ್ಲಾ ನೋಡುತ್ತಿದ್ದರೆ, ನಮ್ಮ ಜನರು ಅಕ್ಷರಸ್ಥರಾಗುತ್ತಿದ್ದಾರೆಯೇ ಹೊರತು ಪ್ರಜ್ಞಾವಂತರಾಗುತ್ತಿಲ್ಲ ಎಂದು ಅನಿಸತೊಡಗುತ್ತದೆ. ಹೀಗೆ ತ್ಯಾಜ್ಯಗಳನ್ನು ಕಂಡ ಕಂಡಲ್ಲಿ ಎಸೆಯುವುದರಿಂದ, ಪರಿಸರ ಮಾಲಿನ್ಯದ ಜೊತೆಗೆ, ಹಲವು ಸಾಂಕ್ರಾಮಿಕ ರೋಗಗಳು ಹರಡಿ‌ ತೊಂದರೆ ಅನುಭವಿಸುವವರು ನಾವುಗಳೇ ಎಂಬ ಕನಿಷ್ಟ ಜ್ಞಾನವೂ ನಮಗೆ ಇಲ್ಲವಾಯಿತೆ ? ಇದು ಕೇವಲ ಕುಮಟಾ ತಾಲೂಕಿನಲ್ಲಿ ಕಂಡು ಬಂದ ಒಂದು ಭಾಗದ ಚಿತ್ರಣ ಮಾತ್ರ. ಇಂತಹ ಸ್ಥಿತಿ ಇಂದು ನಮ್ಮ ದೇಶದ ತುಂಬೆಲ್ಲಾ ಕಾಣಸಿಗುತ್ತದೆ. ಈ ಸಮಸ್ಯೆಯ ಪರಿಹಾರ ಸರ್ಕಾರದಿಂದ ಅಲ್ಲ, ನಮ್ಮಿಂದಲೇ ಆಗಬೇಕು. ನಮ್ಮ ಸುತ್ತಲಿನ ಪರಿಸರ ಸ್ವಚ್ಛವಾಗಿರುವಂತೆ ನಾವುಗಳೇ ಜವಾಬ್ಧಾರಿಯಿಂದ ನೋಡಿಕೊಳ್ಳಬೇಕಾಗಿದೆ…