ಸಾಲ ಕೊಡಿಸುವುದಾಗಿ ಜನರಿಗೆ ಮಕ್ಮಲ್ ಟೋಪಿ, ಮುಂಬೈನಲ್ಲಿ ಸಿಕ್ಕಿಬಿದ್ದ ವಂಚಕರು

ಯಾದಗಿರಿ: ಸಾಲ ಕೊಡಿಸುವುದಾಗಿ ಹೇಳಿ, ಮುಂಗಡವಾಗಿ ಬಡ್ಡಿಯ ಹಣವನ್ನು ತೆಗೆದುಕೊಂಡು ಜನರಿಗೆ ವಂಚಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಹಾರಾಷ್ಟ್ರದ ಮುಂಬೈನಲ್ಲಿ ಯಾದಗಿರಿ ಪೊಲೀಸರು ಬಂಧಿಸಿದ್ದಾರೆ. ಸಂತೋಷ್​, ಪಾಂಡು ಹಾಗೂ ಮಹೆಬೂಬ್ ಬಂಧನಕ್ಕೆ ಒಳಗಾದವರು. ಇನ್ನು ಈ ಮೋಸದ ಜಾಲದ ಕುರಿತು ಟಿವಿ9ನಲ್ಲಿ ವಿಸ್ತೃತವಾಗಿ ಸುದ್ದಿ ಪ್ರಸಾರವಾಗಿತ್ತು. ಇದು ಬಿತ್ತರವಾಗುತ್ತಿದ್ದಂತೆ ಜೂ.11ರಂದು ಯಾದಗಿರಿ ನಗರ ಠಾಣೆಯಲ್ಲಿ ಹಣ ಕಳೆದುಕೊಂಡ ರಂಗರಾವ್ ಎಂಬುವರು ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆ ಆರಂಭಿಸಿದ್ದ ಪ್ರಮುಖ ಆರೋಪಿ ಸಂತೋಷ್, ಪಾಂಡು, ಮೆಹಬೂಬ್ ಅವರನ್ನು ಇದೀಗ ಬಂಧಿಸಲಾಗಿದೆ.

ಯಾದಗಿರಿಯ ರಾಜೀವ್ ಗಾಂಧಿ ನಗರದಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಿಸೋದಾಗಿ ನಂಬಿಸಿ, ಮುಂಗಡವಾಗಿ ಜನರಿಂದ ಬಡ್ಡಿ ಹಣವನ್ನ ವಸೂಲಿ ಮಾಡಿ ವಂಚಿಸುತ್ತಿದ್ದರು. ರಾಯಚೂರು ಜಿಲ್ಲೆಯ ಮಾನ್ವಿ ಮೂಲದ ರಂಗರಾವ್ ಎನ್ನುವವರು ನೇರವಾಗಿ ಸಂತೋಷ್ ಮನೆಗೆ ಬಂದು 10 ಲಕ್ಷ ಸಾಲ ಕೇಳಿದ್ದಾರೆ. ಆದ್ರೆ, ಸಾಲ ಕೊಡಿಸುವ ಮೊದಲೇ ಸಂತೋಷ್ ರಂಗರಾವ್ ಬಳಿ ಒಂದು ವರ್ಷದ ಬಡ್ಡಿಯೆಂದು  80 ಸಾವಿರ ಹಾಗೂ ದಾಖಲಾತಿ ಚಾರ್ಜ್ 16 ಸಾವಿರ ಮುಂಗಡವಾಗಿ ಪಡೆದಿದ್ದಾನಂತೆ. ಈ ರೀತಿ ಮೋಸದ ಜಾಲಕ್ಕೆ ಸಿಲುಕಿ ರಾಯಚೂರು ಜಿಲ್ಲೆಯ ಮಾನ್ವಿಯ ಮೂವರು ಹಣ ಕಳೆದುಕೊಂಡಿದ್ದರು. ಈ ಹಿನ್ನಲೆ ಸಂತ್ರಸ್ಥರು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದರು.

ಇನ್ನು ಈ ಕುರಿತು ಯಾದಗಿರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಈ ಗ್ಯಾಂಗ್ ಪರಾರಿಯಾಗಿತ್ತು. ಇದನ್ನು ತೀವ್ರವಾಗಿ ಪರಿಗಣಿಸಿದ್ದ ಪೊಲೀಸರು. ತನಿಖೆ ಕೈಗೊಂಡು ಇವರ ಮನೆಗಳ ಬಳಿ ಹುಡುಕಾಟ ನಡೆಸಲು ಮುಂದಾಗಿದ್ದರು. ಆದರೆ, ಕೇಸ್​ ದಾಖಲಾಗುತ್ತಿದ್ದಂತೆ ಊರು ಬಿಟ್ಟಿದ್ದು ಗೊತ್ತಾಗಿ, ಮಹಾರಾಷ್ಟ್ರದ ಮುಂಬೈನಲ್ಲಿ ಈ ಆರೋಪಿಗಳು ಇರುವುದಾಗಿ ಮಾಹಿತಿ ಬರುತ್ತದೆ. ಕೂಡಲೇ ಮುಂಬೈಗೆ ಹೋಗಿ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.