ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿದ್ದು ಇದೀಗ ಬಾಡಿಗೆ ಕೊಡುವ ಮನೆ ಮಾಲೀಕರು ಎಚ್ಚೆತ್ತುಕೊಳ್ಳಬೇಕಾಗಿದೆ.
ಹೌದು, ಬೆಂಗ್ಳೂರಿನಲ್ಲಿ ಲಿವಿಂಗ್ ರಿಲೇಷನ್‌ಶಿಪ್‌ನಲ್ಲೇ ಇದ್ದುಕೊಂಡು ಮನೆ ದೋಚಿದ ಖತರ್ನಾಕ್ ಜೋಡಿ ಈಗ ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ.
ಮನೆಯನ್ನೇ ಗುಡಿಸಿ ಗುಂಡಾತರ ಮಾಡಿದ್ದ ಜೋಡಿ ಇದೀಗ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರ ಬಲೆಗೆ ಬಿದ್ದಿದೆ. ಲಿಖಿತಾ ಹಾಗೂ ಸುಮಂತ್ ಬಂಧಿತ ಆರೋಪಿಗಳು.
ಈ ಖತರ್ನಾಕ್ ಜೋಡಿ ತಾವು ಬಾಡಿಗೆಗೆ ಇದ್ದ ಮಾಲೀಕರ ಮನೆಯಲ್ಲೇ ಬರೋಬ್ಬರಿ 4 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದರು. ಬೆಂಗಳೂರು ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಎಜಿಎಸ್ ಲೇಔಟ್‌ನಲ್ಲಿ ಘಟನೆ ನಡೆದಿತ್ತು.
ನಡೆದಿದ್ದು ಹೇಗೆ..?
ಆರೋಪಿಗಳಾದ ಲಿಖಿತಾ, ಸುಮಂತ್, ಎಜಿಎಸ್ ಬಡಾವಣೆಯ ಪ್ರೇಮಲತಾ ಎಂಬವರ ಮನೆಯಲ್ಲಿ ಬಾಡಿಗೆಗೆ ಇದ್ದರು. ಬಾಡಿಗೆ ಜಾಸ್ತಿ ಬರುತ್ತೆ ಅಂತಾ ಲಿವಿಂಗ್ ರಿಲೇಷನ್‌ನಲ್ಲಿರಲು ಮಾಲೀಕರು ಅನುಮತಿಸಿದ್ದರು. ಕಳೆದ ನಾಲ್ಕೂವರೆ ತಿಂಗಳಿನಿಂದ ಬಾಡಿಗೆ ಮನೆಯಲ್ಲಿದ್ದುಕೊಂಡೇ ಮಾಲೀಕರ ಚಲನವಲನ ವೀಕ್ಷಿಸುತ್ತಿದ್ದರು. ಇದ್ದಕ್ಕಿದ್ದಂತೆ ಮನೆ ಖಾಲಿ ಮಾಡಿದರು. ಮನೆ ಖಾಲಿ ಮಾಡಿದ ಕೆಲವೇ ದಿನಗಳಲ್ಲಿ ಮಾಲೀಕರ ಮನೆಯಲ್ಲಿ ಕಳ್ಳತನವಾಯಿತು. ಆರೋಪಿಗಳ ಕೈಚಳಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಚಿನ್ನಾಭರಣಗಳನ್ನ ಕದ್ದು ಮಾರಾಟ ಮಾಡಿದ್ದ ಜೋಡಿ, ಬೆಂಗಳೂರಿನಿಂದ ಎಸ್ಕೇಪ್ ಆಗಿ ಶಿವಮೊಗ್ಗದಲ್ಲಿ ಸೆಟಲ್ ಆಗಿತ್ತು. ಕೈಯಲ್ಲಿದ್ದ ಹಣ ಖಾಲಿಯಾಗಿ ಮತ್ತೊಂದು ಕಡೆ ಕೃತ್ಯವೆಸಗಲು ಈ ಜೋಡಿ ಸಿದ್ಧವಾಗಿತ್ತು. ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.