ಮಣಿಪುರ ಹಿಂಸಾಚಾರ ಗುಜರಾತ್ ಗಲಭೆಗೆ ಹೋಲಿಸಿದ ಆರ್ಚ್ ಬಿಷಪ್

ಕಣ್ಣೂರು: ಮಣಿಪುರದಲ್ಲಿ ಉಂಟಾಗಿರುವ ಹಿಂಸಾಚಾರವನ್ನು 2002ರಲ್ಲಿ ನಡೆದ ಗುಜರಾತ್‌ ಗಲಭೆಗೆ ಹೋಲಿಸಿರುವ ಕೇರಳದ ಆರ್ಚ್ ಬಿಷಪ್‌ವೊಬ್ಬರು ಕೇಂದ್ರ ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ. ಜೊತೆಗೆ ಹಿಂಸಾಚಾರ ಹತ್ತಿಕ್ಕುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಅವರು ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ತೆಲಿಚೇರಿಯ ಚರ್ಚ್‌ನ ಆರ್ಚ್‌ಬಿಷಪ್‌ ಜೋಸೆಫ್‌ ಪಾಂಪ್ಲನಿ, ಮಣಿಪುರ ಹಿಂಸಾಚಾರ ಕೋಮುಗಲಭೆಯಾಗಿ ಪರಿವರ್ತನೆಯಾಗುತ್ತಿದೆ. ಇದು ವರ್ಷಗಳ ಹಿಂದೆ ಗುಜರಾತ್‌ನಲ್ಲಿ ನಡೆದ ಗಲಭೆಯ ಮತ್ತೊಂದು ರೂಪವಾಗಿದೆ. ಇಲ್ಲಿ ಹಿಂಸಾಚಾರವನ್ನು ಯೋಜನಾಬದ್ಧವಾಗಿ ಪುಸಲಾಯಿಸಲಾಗುತ್ತಿದೆ. ಹಾಗಾಗಿ ಇದರ ಹಿಂದಿರುವ ಜನರನ್ನು ಸರ್ಕಾರ ರಕ್ಷಣೆ ಮಾಡುತ್ತಿದೆ ಎಂಬ ಅನುಮಾನ ಜನರಿಗೆ ಮೂಡುವುದು ಸಹಜ ಪ್ರಕ್ರಿಯೆಯಾಗಿದೆ ಎಂದು ಹೇಳಿದ್ದಾರೆ.

ಜೊತೆಗೆ ಭಾರತದಲ್ಲಿ ಅಲ್ಪಸಂಖ್ಯಾತರ ವಿಷಯದಲ್ಲಿ ಯಾವುದೇ ತಾರತಮ್ಯ ಇಲ್ಲ ಎಂದು ಅಮೆರಿಕದಲ್ಲಿ ಹೇಳುವ ಬದಲು, ಅದೇ ವಿಷಯವನ್ನು ಭಾರತದಲ್ಲಿನ ಕ್ರೈಸ್ತರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.

ಮಣಿಪುರದಲ್ಲಿ ಕುಕಿ ಸಮುದಾಯದವರಿಗೆ ಸೇನಾ ಭದ್ರತೆ ಒದಗಿಸಬೇಕು ಎಂದು ಸರ್ಕಾರೇತರ ಸಂಘವೊಂದು ಸಲ್ಲಿಸಿದ್ದ ಅರ್ಜಿಯನ್ನು ಜು.3ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ತೀರ್ಮಾನಿಸಿದೆ. ಈ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಬೇಕೆಂದು ಮಣಿಪುರ ಟ್ರೈಬಲ್‌ ಫೋರಂ ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿತ್ತು. ಜೂ.20ರಂದು ರಜಾಕಾಲದ ಪೀಠ, ಇದು ತುರ್ತು ವಿಚಾರಣೆಗೆ ಅಗತ್ಯವಿಲ್ಲ. ಏಕೆಂದರೆ ಈ ವಿಷಯ ಆಡಳಿತದ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ್ದು ಎಂದು ತುರ್ತು ವಿಚಾರಣೆ ನಿರಾಕರಿಸಿತ್ತು. ಬಳಿಕ ಇದರ ವಿಚಾರಣೆಯನ್ನು ಜು.17ರಂದು ನಡೆಸಲು ಪಟ್ಟಿ ಮಾಡಿತ್ತು. ಬಳಿಕ ಈ ದಿನಾಂಕವನ್ನು ಜು.3ಕ್ಕೆ ನಿಗದಿ ಮಾಡಿದೆ. ಈ ಅರ್ಜಿಯನ್ನು ಸುಪ್ರೀಂನ ಮುಖ್ಯ ನ್ಯಾಯಾಧೀಶರನ್ನೊಳಗೊಂಡ ತ್ರಿಸದಸ್ಯ ಪೀಠ ವಿಚಾರಣೆ ನಡೆಸಲಿದೆ.