ಚಿಕ್ಕಮಗಳೂರು (ಜೂ.23) : ನಿಧಿಗಾಗಿ ದುಷ್ಕರ್ಮಿಗಳು ನಿರ್ಜನ ಪ್ರದೇಶದಲ್ಲಿ 15 ಅಡಿ ಅಗಲ ಹಾಗೂ ಸುಮಾರು 25 ಅಡಿಯಷ್ಟು ಆಳದ ಬೃಹತ್ ಗುಂಡಿ ತೋಡಿ ನಿಧಿಗಾಗಿ ಶೋಧ ನಡೆಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಣೂರು ಸಮೀಪದ ಕೆಸರಿಕೆ ಗ್ರಾಮದಲ್ಲಿ ನಡೆದಿದೆ.
ಉಡುಪಿ ನೋಂದಣಿ ಹೊಂದಿರುವ ಎರಡು ಕಾರುಗಳಲ್ಲಿ ಬಂದಿದ್ದ 15ಕ್ಕೂ ಹೆಚ್ಚು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ನಿಧಿಗಾಗಿ ಶೋಧ ನಡೆಸಿದ ಜಾಗದಲ್ಲಿ ಅರಿಶಿನ-ಕುಂಕುಮ, ಬಾಳೆಹಣ್ಣು, ತೆಂಗಿನಕಾಯಿ, ಕುಂಬಳಕಾಯಿ, ಊದುಬತ್ತಿ, ಕರ್ಪೂರ, ಮೂರು ತರದ ದಾರ, ಕೋಳಿ ಸೇರಿದಂತೆ ವಿವಿಧ ವಸ್ತುಗಳು ಪತ್ತೆಯಾಗಿವೆ.
ಇದೇ ತಿಂಗಳು 18ರಂದು ಅಮಾವಾಸ್ಯೆ ಇದ್ದ ಹಿನ್ನೆಲೆಯಲ್ಲಿ ಅಂದು ನಿಧಿಗಾಗಿ ಶೋಧ ಕಾರ್ಯ ನಡೆದಿರುವ ಸಾಧ್ಯತೆಗಳು ಹೆಚ್ಚಾಗಿವೆ. ಕರಾವಳಿಯಿಂದ ಆಗಮಿಸಿದ ಕೆಲ ದುಷ್ಕರ್ಮಿಗಳು ನಿಧಿಗಾಗಿ ಶೋಧ ಕಾರ್ಯ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕಳೆದೊಂದು ವಾರದಿಂದ ರಸ್ತೆ ಬದಿ ಎರಡು ಮೂರು ಗಾಡಿಗಳು ನಿಲ್ಲುತ್ತಿದ್ದವು. ಸ್ಥಳೀಯರಿಗೆ ಅನುಮಾನ ಕೂಡ ಮೂಡಿತ್ತು.
ಕಳೆದ ರಾತ್ರಿ ತೋಟಕ್ಕೆ ನೀರಾಯಿಸಲು ಹೋಗುವಾಗಲೂ ರಸ್ತೆ ಬದಿ ಎರಡು ಕಾರುಗಳು ನಿಂತಿದ್ದವು. ತೋಟಕ್ಕೆ ನೀರಿನ ಮೋಟಾರ್ ಆನ್ ಮಾಡಿ ಬರುವಾಗ ತೋಟದ ಮಧ್ಯೆ ಗಲಾಟೆ ಹಾಗೂ ಬೆಳಕು ಕಾಣುತ್ತಿತ್ತು. ಇದನ್ನ ಗಮನಿಸಿದ ಸ್ಥಳೀಯರು ಊರಿಗೆ ಬಂದು ನಾಲ್ಕೈದು ಜನ ಸ್ಥಳಕ್ಕೆ ಹೋಗಿ ಟಾರ್ಚ್ ಆನ್ ಮಾಡಿ ಯಾರೆಂದು ಕೇಳಿದಾಗ ಎಲ್ಲರೂ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಸ್ಥಳದಲ್ಲಿದ್ದ ಗುಂಡಿಯನ್ನು ಕಂಡು ಸ್ಥಳೀಯರು ಆತಂಕಗೊಂಡಿದ್ದಾರೆ.
ವಾಮಾಚಾರ ನಡೆದಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿದ್ದ ವಾಮಾಚಾರದ ವಸ್ತುಗಳು, ಗುಂಡಿಯನ್ನು ಕಂಡು ಸ್ಥಳೀಯರು ಆತಂಕಗೊಂಡಿದ್ದಾರೆ. ಭಯಭೀತರಾಗಿರುವ ಸ್ಥಳೀಯರು ಆಲ್ದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೆಸರಿಕೆ ಗ್ರಾಮಕ್ಕೆ ಭೇಟಿ ನೀಡಿ ಸ್ಥಳವನ್ನು ಪರಿಶೀಲನೆ ನಡೆಸಿದ್ದಾರೆ.