ಈ ಸರ್ಕಾರದವರು ಇದುವರೆಗೂ ಯಾರೂ ನಮ್ಮ ಬಳಿ ಕಮೀಷನ್ ಕೇಳಿಲ್ಲ, ಕೇಳಿದ್ರೆ ಬಹಿರಂಗ ಪಡಿಸುತ್ತೇವೆ: ಕೆಂಪಣ್ಣ

ಬೆಂಗಳೂರು: ಕರ್ನಾಟಕ ರಾಜ್ಯ ಗುತ್ತಿಗೆಗಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಅವರ ನೇತೃತ್ವದ ನಿಯೋಗವು ಇಂದು (ಜೂನ್ 23) ಸಿದ್ದರಾಮಯ್ಯನವರನ್ನುಭೇಟಿ ಮಾಡಿ ಬಾಕಿ ಇರುವ ಬಿಲ್ಲುಗಳ ಪಾವತಿಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಬಿಬಿಎಂಪಿಯಲ್ಲಿ 2000 ಕೋಟಿ ರೂ. ಹಾಗೂ ನಗರೋತ್ಥಾನ ಯೋಜನೆಯಡಿ 1500 ಕೋಟಿ ರೂ. ಬಾಕಿ ಇರುವುದಾಗಿ ತಿಳಿಸಿದ ಕೆಂಪಣ್ಣ ಅವರು ತಡೆಹಿಡಿದಿರುವ ಮೊತ್ತವನ್ನು ಪರಿಶೀಲಿಸಿ ಬಿಡುಗಡೆ ಮಾಡಬೇಕು ಹಾಗೂ ನಿರಾಕ್ಷೇಪಣಾ ಪತ್ರವನ್ನು ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ‘ರಾಜ್ಯದಲ್ಲಿ ಕಮಿಷನ್ ಹಾವಳಿಗೆ ಕಡಿವಾಣ ಹಾಕಿ, ಸ್ಥಳೀಯ ಗುತ್ತಿಗೆದಾರರ ಹಿತಕ್ಕೆ ಧಕ್ಕೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದು, ಬಜೆಟ್ ಅಧಿವೇಶನದ ನಂತರ ಬಿಬಿಎಂಪಿ ಹಾಗೂ ಆರ್ಥಿಕ ಇಲಾಖೆ ಕಾರ್ಯದರ್ಶಿಗಳ ಸಭೆ ಕರೆದು ಪರಿಶೀಲಿಸಲಾಗುವುದು’ ಎಂದು ತಿಳಿಸಿದರು.

ಸಿದ್ದರಾಮಯ್ಯನವರ ಜೊತೆಗಿನ ಸಭೆ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ನಾವು ಬಾಕಿ ಬಿಲ್ ಗಳ ಬಗ್ಗೆ ಚರ್ಚೆಗೆ ಬಂದಿದ್ವಿ. ಕಮಿಷನ್ ಆರೋಪ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿಲ್ಲ. ಕಾಮಗಾರಿ ಬಾಕಿ ಬಿಲ್​​ ಪಾವತಿ ಬಗ್ಗೆ ಸಿಎಂಗೆ ಮನವಿ ಮಾಡಿದ್ದು, ಅಧಿಕಾರಿಗಳ ಜತೆ ಚರ್ಚಿಸಿ ಬಾಕಿ ಬಿಲ್ ಪಾವತಿಸುವುದಾಗಿ ಭರವಸೆ ನೀಡಿದರು ಎಂದು ಸ್ಪಷ್ಟಪಡಿಸಿದರು.

ಈಗಿನ ಸರ್ಕಾರದ ಸಚಿವರು ಕಮೀಷನ್ ಫಿಕ್ಸ್ ಮಾಡಿಕೊಂಡಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಕೆಂಪಣ್ಣ, ಸರ್ಕಾರ ಬಂದು ಒಂದು ತಿಂಗಳಾಗಿದೆ. ಈ ಸರ್ಕಾರದವರು ಇದುವರೆಗೂ ಯಾರೂ ನಮ್ಮ ಬಳಿ ಕಮೀಷನ್ ಕೇಳಿಲ್ಲ. ಯಾರಾದರೂ ಸಚಿವರು, ಶಾಸಕರು ನಮ್ಮ ಬಳಿ ಕಮೀಷನ್ ಕೇಳಿದ್ರೆ ಬಹಿರಂಗ ಪಡಿಸುತ್ತೇವೆ. ಯಾರಾದರೂ ಕಮೀಷನ್ ಕೇಳಿದರೆ ಅದನ್ನೂ ಸಹ ವಿರೋಧಿಸುತ್ತೇವೆ ಎಂದು ಹೇಳಿದರು.

ಇನ್ನು ಬಿಜೆಪಿ ಸರ್ಕಾರದ 40% ಕಮೀಷನ್ ಆರೋಪದ ದಾಖಲಾತಿ ಬಿಡುಗಡೆ ಮಾಡದ ಬಗ್ಗೆ ಮಾತನಾಡಿ, ಸದ್ಯ ಪ್ರಕರಣ ಕೋರ್ಟ್ ನಲ್ಲಿದೆ . ಅದರ ಕುರಿತ ದಾಖಲಾತಿಗಳನ್ನು ಸಮಯ ಬಂದಾಗ ಬಿಡುಗಡೆ ಮಾಡುತ್ತೇವೆ ಎಂದು ಮತ್ತೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದರು.