ಅಂಕೋಲಾ: ರಾಮನಗುಳಿ ಸೇತುವೆ ಜನರ ಓಡಾಟಕ್ಕೆ ಮುಕ್ತ; ಮಾಜಿ ಶಾಸಕಿ ರೂಪಾಲಿ ನಾಯ್ಕ್ ಸತತ ಪ್ರಯತ್ನದಿಂದ ಈಡೇರಿಕೆಯತ್ತ ಬಹು ದಶಕಗಳ ಶಾಶ್ವತ ಸೇತುವೆ ಬೇಡಿಕೆ.

ಅಂಕೋಲಾ: ತಾಲೂಕಿನ ಬಹುದಶಕಗಳ ಬೇಡಿಕೆಯಾದ ರಾಮನಗುಳಿ- ಡೊಂಗ್ರಿ ಶಾಶ್ವತ ಸಂಪರ್ಕ ಸೇತುವೆಯು ಇದೀಗ ತಾತ್ಕಾಲಿಕವಾಗಿ ಜನರ ಓಡಾಟಕ್ಕೆ ಸಿದ್ಧವಾಗಿರುವ ಹಿನ್ನೆಲೆ ಗ್ರಾಮಸ್ಥರಲ್ಲಿ ಸಂತಸ ಮನೆ ಮಾಡಿದೆ. ಲೋಕೋಪಯೋಗಿ ಇಲಾಖೆ ಅಡಿಯಲ್ಲಿ 25 ಕೋಟಿ ರೂಪಾಯಿ ವೆಚ್ಚದ ರಾಮನಗುಳಿ ಸೇತುವೆ ನಿರ್ಮಾಣದ ಕೊನೆಯ ಹಂತದಲ್ಲಿದೆ.
ತಾತ್ಕಾಲಿಕವಾಗಿ ಜನರು ಓಡಾಟ ನಡೆಸುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಪ್ರಮಾಣದಲ್ಲಿ ಮುಗಿದು ಜನರ ಬಳಕೆಗೆ ಮುಕ್ತವಾಗಲು 2-3 ತಿಂಗಳು ಬೇಕಾಗಲಿದ್ದು ಜನರ ಅವಶ್ಯಕತೆ ಹಾಗೂ ಒತ್ತಾಯದ ಮೇರೆಗೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಶಿಕಾಂತ ಕೋಳೆಕರ್, ಸಹಾಯಕ ಅಭಿಯಂತರ ಸುಧೀರ್ ನಾಯ್ಕರ್ ಮುತುವರ್ಜಿ ಹಾಗೂ ಗುತ್ತಿಗೆದಾರರಾದ ಮುಗ್ರೋಡಿ ಕನ್ಸ್ಟ್ರಕ್ಷನ್ ಅವರ ಸತತ ಪರಿಶ್ರಮದಿಂದ ತಾತ್ಕಾಲಿಕವಾಗಿ ಸಜ್ಜುಗೊಳಿಸಲಾಗಿದೆ.

ಈ ಭಾಗದಲ್ಲಿರುವ ತೂಗು ಸೇತುವೆ ಭೀಕರ ಪ್ರವಾಹಕ್ಕೆ ತುತ್ತಾಗಿ ಜನರು ಸಂಪರ್ಕ ಕಳೆದುಕೊಳ್ಳುವಂತಾಗಿತ್ತು. 2021ರಲ್ಲಿ ಗುಳ್ಳಾಪುರ ಶಾಶ್ವತ ಸೇತುವೆ ಭೀಕರ ಪ್ರವಾಹದಿಂದ ಕೊಚ್ಚಿಹೋಗಿತ್ತು. ತಮಗೊಂದು ಸಂಪರ್ಕ ದಾರಿ ಕಲ್ಪಿಸಿ ಎಂದು ಹತ್ತಕ್ಕೂ ಅಧಿಕ ಗ್ರಾಮಗಳ ಸಾರ್ವಜನಿಕರು ಜನಪ್ರತಿನಿಧಿಗಳ ಮೊರೆ ಇಟ್ಟಿದ್ದರು. ಜನರ ಬೇಡಿಕೆಗೆ ಸ್ಪಂದಿಸಿದ ಅಂದಿನ ಶಾಸಕಿ ರೂಪಾಲಿ ನಾಯ್ಕ ತೂಗು ಸೇತುವೆಯ ಬದಲಾಗಿ 25 ಕೋಟಿ ರೂಪಾಯಿ ವೆಚ್ಚದಲ್ಲಿ ಶಾಶ್ವತ ಸೇತುವೆ ನಿರ್ಮಾಣಕ್ಕೆ ಅನುದಾನ ಕಲ್ಪಿಸಿ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮುಂದಾಳತ್ವದಲ್ಲಿ ಕಾಮಗಾರಿಗೆ ಚಾಲನೆ ನೀಡಿದ್ದರು.

ಮಾಜಿ ಶಾಸಕಿ ರೂಪಾಲಿ ನಾಯ್ಕರ ಸತತ ಪ್ರಯತ್ನದಿಂದ ಮಂಜೂರಾದ ಈ ಸೇತುವೆ 150 ಮೀ. ಉದ್ದ ಹಾಗೂ 7.5 ಮೀ ಅಗಲವನ್ನು ಹೊಂದಿದೆ. ಸೇತುವೆಯ ಸ್ಲಾಬ್ ಕೆಲಸ ಈಗಾಗಲೇ ಪೂರ್ಣಗೊಂಡಿದೆ. ಸೇತುವೆಯ ಎರಡು ಕಡೆಗಳಲ್ಲಿ ಸಂಪರ್ಕ ಕಲ್ಪಿಸುವ ಕಾಮಗಾರಿ, ರಕ್ಷಣಾ ಗೋಡೆ ಮತ್ತು ಸೇತುವೆಯ ಮೇಲೆ ಹ್ಯಾಂಡ್ ರೇಲಿಂಗ್ ಕಾಮಗಾರಿ ಮಾತ್ರ ಆಗಬೇಕಿದೆ. ಸೇತುವೆ ಕಾಮಗಾರಿ ಆರಂಭಗೊಂಡು ಕೇವಲ‌ ಒಂದುವರೆ ವರ್ಷದಲ್ಲಿ ರಾಮನಗುಳಿ ಸೇತುವೆ ಜನರ ಓಡಾಟಕ್ಕೆ ಮುಕ್ತಗೊಂಡಿರುವುದು ವಿಶೇಷ. ಇನ್ನು 2-3 ತಿಂಗಳಲ್ಲಿ ಸೇತುವೆ ಪೂರ್ಣಗೊಂಡು ಜನರ ಬಳಕೆಗೆ ಸಿಗುವ ವಿಶ್ವಾಸವಿದೆ.

ಜನರ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು ತಾತ್ಕಾಲಿಕವಾಗಿ ಸೇತುವೆಯನ್ನು ಜನರ ಓಡಾಟಕ್ಕೆ ಮಾತ್ರ ಅನುವು ಮಾಡಿಕೊಡಲಾಗಿದೆ. ಆದಷ್ಟು ಬೇಗ ಸೇತುವೆ ಕಾಮಗಾರಿ ಪೂರ್ಣಗೊಳಿಸಿ ಜನರ ಬಳಕೆಗೆ ನೀಡುವುದು ನಮ್ಮ ಜವಾಬ್ದಾರಿ. ದಯವಿಟ್ಟು ಜನರು ಸುರಕ್ಷತೆಯಿಂದ ಸಂಚರಿಸಲು ಮನವಿ ಮಾಡುತ್ತೇವೆ ಎಂದು ಸೈಟ್ ಇಂಜಿನಿಯರ್ ಶಂಭುಲಿಂಗ ತಿಳಿಸಿದರು.