ಬೆಂಗಳೂರು: ಗಬ್ಬೆದ್ದು ನಾರುತ್ತಿರುವ ಕೆ.ಆರ್‌.ಮಾರ್ಕೆಟ್‌, ವ್ಯಾಪಾರಿಗಳು, ಗ್ರಾಹಕರ ಆಕ್ರೋಶ..!

ಬೆಂಗಳೂರು(ಜೂ.29):  ನಗರದ ಕೆ.ಆರ್‌.ಮಾರುಕಟ್ಟೆ ಕೊಳಚೆ ತ್ಯಾಜ್ಯದಿಂದ ನಾರುತ್ತಿದೆ, ಕಳೆದೊಂದು ತಿಂಗಳಿಂದ ಇಲ್ಲಿನ ಹಣ್ಣಿನ ವಹಿವಾಟು ವಿಭಾಗದ ಪ್ರವೇಶದಲ್ಲೇ ಮ್ಯಾನ್‌ಹೋಲ್‌ ತುಂಬಿ ಒಳಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿದ್ದರೂ ದುರಸ್ತಿಯಾಗಿಲ್ಲ. ಪ್ರತಿದಿನ ಕೊಳಚೆ, ದುರ್ವಾಸನೆ ಮಧ್ಯೆಯೇ ಇಲ್ಲಿ ಹಣ್ಣು, ತರಕಾರಿ, ಸೊಪ್ಪು, ಹೂವುಗಳ ವ್ಯಾಪಾರ ನಡೆಯುತ್ತಿದೆ.

ಅಸಮರ್ಪಕ ಒಳಚರಂಡಿ ವ್ಯವಸ್ಥೆ, ನಿಗದಿತವಾಗಿ ನಡೆಯದ ಸ್ವಚ್ಛತಾ ಕಾರ್ಯ, ಏಳು ವರ್ಷದಿಂದ ಸ್ಮಾರ್ಟ್‌ ಸಿಟಿ ಹೆಸರಿನಲ್ಲಿ ನಡೆಯುತ್ತಿರುವ ಕಾಮಗಾರಿಗಳು, ನಗರದ ಪ್ರಮುಖ ಕೆ.ಆರ್‌.ಮಾರುಕಟ್ಟೆಯನ್ನು ಅವ್ಯವಸ್ಥೆಯ ತಾಣವಾಗಿಸಿದೆ. ಗ್ರಾಹಕರು ಮೂಗು ಮುಚ್ಚಿಕೊಂಡು. ಕೊಳಚೆ ಮೇಲೆ ಓಡಾಡುತ್ತಾ ಖರೀದಿಸುವ ದುಃಸ್ಥಿತಿ ಬಂದಿದೆ.

ಮಾರುಕಟ್ಟೆಯ ಹಣ್ಣಿನ ವಿಭಾಗ ತ್ಯಾಜ್ಯದಿಂದ ತುಂಬಿಹೋಗಿದೆ. ಮಾರುಕಟ್ಟೆಎಡಭಾಗದಿಂದ ಹಣ್ಣಿನ ಮಾರಾಟ ಮಳಿಗೆಗಳತ್ತ ಹೋಗುವ ರಸ್ತೆ ಆರಂಭದಲ್ಲಿಯೆ ಮ್ಯಾನ್‌ಹೋಲ್‌ ತುಂಬಿ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಕಳೆದೊಂದು ತಿಂಗಳಿಂದಲೂ ಇದೇ ಪರಿಸ್ಥಿತಿ ಇದೆ. ವ್ಯಾಪಾರಿಗಳು ಬಿಬಿಎಂಪಿಗೆ ದೂರು ನೀಡಿ, ಅಧಿಕಾರಿಗಳು ಬಂದು ನೋಡಿ ಹೋಗಿದ್ದೂ ಆಗಿದೆ. ಆದರೆ, ಈವರೆಗೆ ಅದನ್ನು ಸರಿಪಡಿಸುವ ಕೆಲಸ ಆಗಿಲ್ಲ.

ಮಾರುಕಟ್ಟೆ ಹಿಂದಿರುವ ಶೌಚಾಲಯಗಳು ಸಮರ್ಪಕವಾಗಿಲ್ಲ. ಇರುವ ವ್ಯಾಪಾರಿಗಳ ಸಂಖ್ಯೆಗೆ ಇನ್ನು ನಾಲ್ಕೈದು ಶೌಚಾಲಯಗಳಾದರೂ ಬೇಕು. ಮಹಿಳೆಯರಿಗೆ ತೀರಾ ಸಮಸ್ಯೆಗಳಿವೆ. ಅದರೆ, ಸ್ಮಾರ್ಚ್‌ ಸಿಟಿ ಹೆಸರಲ್ಲಿ ಏಳು ವರ್ಷದಿಂದ ಕಾಮಗಾರಿ ನಡೆಯುತ್ತಿದೆ ವಿನಃ ಇನ್ನೂ ಪೂರ್ಣಗೊಂಡಿಲ್ಲ. ಅಲ್ಲದೆ ಹಿಂಭಾಗದಲ್ಲಿಯೂ ತೀರಾ ಗಲೀಜು ಆವರಿಸಿದೆ. ಸ್ವಚ್ಛತಾ ಕೆಲಸ ಆಗುತ್ತಿಲ್ಲ ಎಂದು ಮಹಿಳಾ ವ್ಯಾಪಾರಿಗಳು ಬೇಸರ ತೋಡಿಕೊಂಡರು.

ಮಳೆಗಾಲದ ಆರಂಭಕ್ಕೂ ಮುನ್ನ ನಡೆಸಬೇಕಾದ ಒಳಚರಂಡಿ ಹೂಳೆತ್ತುವ, ಮ್ಯಾನ್‌ಹೋಲ್‌ ಕಟ್ಟಿದ್ದರೆ ಅದನ್ನು ಸರಿಪಡಿಸುವುದು ಸೇರಿ ಯಾವುದೇ ಕೆಲಸಗಳನ್ನು ಮಾರುಕಟ್ಟೆಸುತ್ತ ಮಾಡಲಾಗಿಲ್ಲ. ಹೀಗಾಗಿ ಸಣ್ಣ ಮಳೆಯಾದರೂ ಮಾರುಕಟ್ಟೆಯ ಸುತ್ತಲಿನ ರಸ್ತೆಗಳಲ್ಲೇ ನೀರು ನಿಲ್ಲುತ್ತಿದೆ. ಕೊಳೆತ ಹಣ್ಣು, ಸೊಪ್ಪು ಸೇರಿ ಸುತ್ತಲೂ ಅಶುಚಿತ್ವ, ದುರ್ವಾಸನೆ ಆವರಿಸುತ್ತಿದೆ. ತರಕಾರಿಗಳನ್ನು ಒಂದೆಡೆಯಿಂದ ಇನ್ನೊಂದೆಡೆ ತೆಗೆದುಕೊಂಡು ಹೋಗುವುದು, ವ್ಯಾಪಾರ ಮಾಡುವುದು ಕಷ್ಟವಾಗಿದೆ. ಇದರೊಂದಿಗೆ ಮಾರುಕಟ್ಟೆಯ ಪ್ರತಿದಿನ ಬಿಬಿಎಂಪಿಯಿಂದ ನಿಗದಿತವಾಗಿ ತ್ಯಾಜ್ಯ ವಿಲೇವಾರಿ ನಡೆಯುತ್ತಿಲ್ಲ ಎಂದು ವ್ಯಾಪಾರಿ ಸೊಪ್ಪಿನ ವ್ಯಾಪಾರಿ ಮಂಜುನಾಥ್‌, ಸಂತೋಷ್‌ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಮುಖವಾಗಿ ಬೆಳಗ್ಗೆ ಟೆಂಡರ್‌ ಮುಗಿದ ಬಳಿಕ ಬಿಬಿಎಂಪಿಯಿಂದ ತ್ಯಾಜ್ಯದ ವಿಲೇವಾರಿ ಮಾಡಿಸಬೇಕು. ಹಾಗೂ ಒಳಚರಂಡಿಯ ಹೂಳೆತ್ತಿಸಿ ನೀರು ಸರಾಗವಾಗಿ ಹೋಗುವಂತೆ ಮಾಡಬೇಕು. ಇಲ್ಲದಿದ್ದರೆ ಮಳೆ ಜೋರಾಗಿ ಸುರಿಯಲಾರಂಭಿಸಿದರೆ ವ್ಯಾಪಾರ ಮಾಡುವುದು ಕಷ್ಟವಾಗಲಿದೆ ಎಂದು ವರ್ತಕರು ಹೇಳಿದರು.

ಒಂದೂವರೆ ತಿಂಗಳಿಂದ ಮ್ಯಾನ್‌ಹೋಲ್‌ ತುಂಬಿ ಕೊಳಚೆ ನೀರು ಹರಿಯುತ್ತಿದೆ. ಬಿಬಿಎಂಪಿ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ತೆರಳಿದ್ದರೂ ದುರಸ್ತಿ ಕಾರ್ಯವಾಗಿಲ್ಲ. ಮಾರುಕಟ್ಟೆಯಲ್ಲಿ ನಿಗದಿತವಾಗಿ ಸ್ವಚ್ಛತಾ ಕಾರ್ಯ ನಡೆಯುತ್ತಿಲ್ಲ ಅಂತ ಹಣ್ಣಿನ ವ್ಯಾಪಾರಿ ಕುಮಾರ್‌ ಹೇಳಿದ್ದಾರೆ. 

ಮಾರುಕಟ್ಟೆಯಲ್ಲಿ ಶುಚಿತ್ವ ಇಲ್ಲ. ಕೊಳಚೆಯಲ್ಲೇ ತರಕಾರಿಗಳನ್ನು ಮಾರಾಟ ಮಾಡಬೇಕಾಗಿದೆ. ಸೊಳ್ಳೆ, ಕೀಟಗಳು ಹೆಚ್ಚಾಗಿ ರೋಗಭೀತಿ ಆವರಿಸಿದೆ ಅಂತ ತರಕಾರಿ ವ್ಯಾಪಾರಸ್ಥೆ ಯಮುನಾ ತಿಳಿಸಿದ್ದಾರೆ.