ಹಿಂದೂ ಧರ್ಮದಲ್ಲಿ ಏಕಾದಶಿಯ ಉಪವಾಸ ಬಹಳ ಮಹತ್ವವನ್ನು ಪಡೆದಿದೆ. ಆಷಾಡ ಮಾಸದ ಶುಕ್ಷ ಪಕ್ಷದ ಬರುವ ಏಕಾದಶಿಯ ದಿನವನ್ನು ದೇವಶಯಾನಿ ಎಂದು ಕರೆಯಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ಶುಭ ದಿನದಂದು ವಿಷ್ಣು ದೇವರನ್ನು ಪೂಜಿಸುವುದರಿಂದ, ಭಕ್ತರು ಅನೇಕ ಶುಭ ಲಾಭವನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ. ದೇವಶಯನಿ ಏಕಾದಶಿಯು ಅರ್ಥವನ್ನು ನೋಡುವುದಾದರೆ ದೇವ ಎಂದರೆ ದೇವರು ಮತ್ತು ಶಯನಿ ಎಂದರೆ ಮಲಗುವುದು ಎಂದರ್ಥ. ಈ ಶುಭ ದಿನ ವಿಷ್ಣು ದೇವರು ಕ್ಷೀರ ಸಾಗರದಲ್ಲಿ ನಾಲ್ಕು ತಿಂಗಳುಗಳ ಕಾಲ ಯೋಗ ನಿದ್ರೆಗೆ ಜಾರುತ್ತಾರೆ ಹಾಗೂ ಕಾರ್ತಿಕ ಮಾಸದ ಪ್ರಬೋಧಿನಿ ಏಕಾದಶಿಯಂದು ಎಚ್ಚರಗೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ವಿಷ್ಣು ದೇವರು ಯೋಗ ನಿದ್ರೆಗೆ ಜಾರಿದ ನಾಲ್ಕು ತಿಂಗಳುಗಳನ್ನು ಚತುರ್ಮಾಸ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಯಾವುದೇ ಶುಭ ಮತ್ತು ಮಂಗಳಕಾರ್ಯಗಳನ್ನು ಮಾಡಲಾಗುವುದಿಲ್ಲ. ಚತುರ್ಮಾಸದಲ್ಲಿ ಪೂಜೆ, ಪುನಸ್ಕಾರ ಮತ್ತು ಉಪವಾಸ ಹಾಗೂ ಇತ್ಯಾದಿ ದೇವರ ಕಾರ್ಯದಲ್ಲಿ ತೊಡಗಿಕೊಳ್ಳುವುದು ಉತ್ತಮವೆಂದು ಪರಿಗಣಿಸಲಾಗಿದೆ. ಈ ಬಾರಿಯ ದೇವಶಯಾನಿ ಏಕಾದಶಿಯನ್ನು ಜೂನ್ 29 ಅಂದರೆ ಇಂದು ಆಚರಿಸಲಾಗುತ್ತಿದೆ.
ದೇವಶಯಾನಿ ಏಕಾದಶಿಯ ಮಹತ್ವ:
ಹರಿ ಶಯನಿ ಏಕಾದಶಿ, ಪದ್ಮ ಏಕಾದಶಿ ಎಂದೂ ಕರಯಲ್ಪಡುವ ದೇವಶಯನಿ ಏಕಾದಶಿಯು ಸನಾತನ ಧರ್ಮದಲ್ಲಿ ಅಪಾರ ಮಹತವವನ್ನು ಹೊಂದಿದೆ. ದೇವಶಯಾನಿ ಏಕಾದಶಿಯ ಈ ಶುಭದಿನದಂದು ವಿಷ್ಣು ದೇವರನ್ನು ಪೂಜಿಸುವ ಅಥವಾ ಉಪವಾಸ ಮಾಡುವ ವ್ಯಕ್ತಿಯು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯುತ್ತಾನೆ, ಎಲ್ಲಾ ರೀತಿಯ ಪಾಪಗಳಿಂದ ಮುಕ್ತಿ ಸಿಗುತ್ತದೆ ಎಂದು ನಂಬಲಾಗಿದೆ. ಈ ದಿನದಂದು ‘ಓಂ ನಮೋ ಭಗವತೇ ವಾಸುದೇವಾಯ ನಮಃ’ ಎಂಬ ಮಂತ್ರವನ್ನು ನಿರಂತರವಾಗಿ ಜಪಿಸುವುದರಿಂದ ಎಲ್ಲಾ ರೀತಿಯ ಭಯ, ರೋಗಗಳು ದೋಷ ಇತ್ಯಾದಿಗಳು ದೂರವಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಆದ್ದರಿಂದ ಈ ದಿನ ಭಕ್ತರು ಶ್ರದ್ಧಾ ಭಕ್ತಿಯಿಂದ ಉಪವಾಸ ಹಾಗೂ ಪೂಜೆಯನ್ನು ಮಾಡುತ್ತಾರೆ.
ದೇವಶಯನಿ ಏಕಾದಶಿಯ ಕಥೆ:
ಪುರಾಣಗಳ ಪ್ರಕಾರ ಸೂರ್ಯವಂಶದಲ್ಲಿ ಮಾಂಧಾತನೆಂಬ ರಾಜನಿದ್ದ. ದಕ್ಷ ರಾಜನಾಗಿದ್ದ ಆತ ಪ್ರಜೆಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದನು. ಹಾಗೂ ಇತನ ರಾಜ್ಯ ಶ್ರೀಮಂತಿಕೆ ಮತ್ತು ಸಮೃದ್ಧಿಯಿಂದ ಕೂಡಿತ್ತು. ಆದರೆ ಒಮ್ಮೆ ರಾಜ ಮಾಂಧಾತನ ರಾಜ್ಯದಲ್ಲಿ ಮೂರು ವರ್ಷಗಳ ಮಳೆಯಾಗದೆ ಬರಗಾಲದ ಪರಿಸ್ಥಿತಿ ತಲೆದೂರಿತ್ತು. ಇದರಿಂದ ಯಾವುದೇ ಬೆಳೆಗಳಿಲ್ಲದೆ, ರಾಜ್ಯದಲ್ಲಿ ಕ್ರಮೇಣ ಆಹಾರ ಧಾನ್ಯಗಳ ದಾಸ್ತಾನು ಖಾಲಿಯಾಯಿತು. ಜನರು ಬಡವರಾದರು ಮತ್ತು ಹಸಿವಿನಿಂದ ನರಳುವಂತಹ ಪರಿಸ್ಥಿತಿ ಎದುರಾಯಿತು. ಪ್ರಜೆಗಳ ಈ ಪರಿಸ್ಥಿತಿಯು ರಾಜನಿಗೆ ಅಸಮಾಧಾನವನ್ನು ಉಂಟುಮಾಡಿತು. ರಾಜನು ತನ್ನ ಪ್ರಜೆಗಳನ್ನು ಸಮಧಾನಪಡಿಸಿ ಮತ್ತು ಶೀಘ್ರದಲ್ಲೇ ಇದಕ್ಕೆ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದನು. ಪರಿಹಾರಕ್ಕಾಗಿ ಋಷಿ ಮುನಿಗಳನ್ನು ಹುಡುಕಲು ಹೊರಟನು. ಹುಡುಕಾಟದಲ್ಲಿ ಕಾಡುಗಳಲ್ಲಿ ಅಲೆಯುತ್ತಿರುವಾಗ, ರಾಜ ಅಂಗೀರ ಎಂಬ ಮಹಾನ್ ಋಷಿಯನ್ನು ಭೇಟಿಯಾದನು. ಹಾಗೂ ಅವನು ಋಷಿಯ ಮುಂದೆ ತಲೆಬಾಗಿ ರಾಜ್ಯದಲ್ಲಿ ಉಂಟಾದ ಬರಗಾಲದ ಪರಿಸ್ಥಿತಿಯನ್ನು ನಿವಾರಿಸಲು ಋಷಿಯ ಬಳಿ ಪರಿಹಾರವನ್ನು ಕೇಳಿದನು.
ಆಗ ಅಂಗೀರ ಋಷಿ ಈ ಬಿಕ್ಕಟ್ಟಿನಿಂದ ಹೊರಬರಲು ಉತ್ತಮ ಮಾರ್ಗವೆಂದರೆ ಆಷಾಡ ಶುಕ್ಷ ಏಕಾದಶಿಯಂದು ದೇವಶಯನಿ ಉಪವಾಸವನ್ನು ಕ್ರಮಬದ್ಧವಾಗಿ ಆಚರಿಸುವುದು. ಅದರ ಪುಣ್ಯದ ಫಲವಾದ ನಿನ್ನ ರಾಜ್ಯದಲ್ಲಿ ಮಳೆಯಾಗುತ್ತದೆ. ಇದರಿಂದ ಸಮೃದ್ಧಿ ಬರುತ್ತದೆ. ಮತ್ತು ಆಹಾರದ ಬಿಕ್ಕಟ್ಟು ಕೊನೆಗೊಳ್ಳುತ್ತದೆ. ಹಾಗಾಗಿ ರಾಜ್ಯದ ಪ್ರತಿಯೊಬ್ಬ ಜರು ಕೂಡಾ ಈ ಉಪವಾಸವನ್ನು ಮಾಡಿ ಎಂದು ಸಲಹೆ ನೀಡುತ್ತಾರೆ.
ಋಷಿಯ ಸಲಹೆಯನ್ನು ಅನುಸರಿಸಿ, ರಾಜನು ತನ್ನ ಅರಮನೆಗೆ ಹಿಂತಿರುಗಿದನು. ಮತ್ತು ಪ್ರಜೆಗಳ ಜೊತೆಗೂಡಿ ದೇವಶಯನಿ ಏಕಾದಶಿಯನ್ನು ವಿಧಿವತ್ತಾಗಿ ಆಚರಿಸಿದನು. ಈ ವ್ರತ ಫಲವಾಗಿ ಬಹುಬೇಗನೆ ಮಳೆ ಬಂದು ಬರಗಾಲ ನಿವಾರಣೆಯಾಯಿತು. ರಾಜ್ಯವು ತನ್ನ ಕಳೆದುಹೋದ ವೈಭವವನ್ನು ಮರಳಿ ಪಡೆಯಿತು ಹಾಗೂ ಸಮೃದ್ಧವಾದ ಮಳೆ, ಬೆಳೆಯ ಪರಿಣಾಮವಾಗಿ ಪ್ರಜೆಗಳು ನೆಮ್ಮದಿಯ ಜೀವನ ಸಾಗಿಸಿದರು.