ಜಾಗತಿಕ ಅಂತರ್ಜಾಲ ಬಳಕೆ ಪ್ರತಿ ವರ್ಷವೂ 25% ಹೆಚ್ಚಾಗುವ ನಿರೀಕ್ಷೆಗಳಿವೆ. ಈ ರೀತಿ ಹೆಚ್ಚಾಗುವ ಬೇಡಿಕೆಯನ್ನು ಫೈಬರ್ ಆಪ್ಟಿಕ್ ಕೇಬಲ್ ಮೂಲಕ ಪೂರೈಸಲು ಸಾಧ್ಯವಿದೆ. ಆದರೆ, ಅತಿಹೆಚ್ಚು ಪ್ರದೇಶದಲ್ಲಿ ಈ ರೀತಿ ದೊಡ್ಡ ಫೈಬರ್ ಜಾಲವನ್ನು ಅಳವಡಿಸುವುದು ಕಷ್ಟಕರ. ಕೇಬಲ್ ಅಳವಡಿಕೆಗಾಗಿ ಹಳ್ಳ ತೋಡುವುದು, ಕೇಬಲ್ ಅಳವಡಿಸುವುದು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಮತ್ತು ಅಪಾರ ವೆಚ್ಚದಾಯಕವಾಗಿದೆ. ಅದರಲ್ಲೂ ಕಲ್ಲು ಬಂಡೆಗಳನ್ನೊಳಗೊಂಡ ನೆಲದಲ್ಲಿ ಅಗೆಯುವುದಂತೂ ಇನ್ನಷ್ಟು ಪ್ರಯಾಸಕರವಾಗಿದ್ದು, ಸವಾಲಿನ ಕೆಲಸವಾಗಿದೆ. ಎಲ್ಲಾ ಭೂಪ್ರದೇಶಗಳಲ್ಲಿ ಕೇಬಲ್ ಅಳವಡಿಸುವುದು ಪ್ರಾಯೋಗಿಕವಾಗಿ ಅಸಾಧ್ಯವಾಗಿದೆ. ಅಂತರಾಷ್ಟ್ರೀಯ ಟೆಲಿಕಮ್ಯುನಿಕೇಶನ್ ಯೂನಿಯನ್ ಪ್ರಕಾರ, ಜಗತ್ತಿನಾದ್ಯಂತ ಇಂದಿಗೂ ಬಹುತೇಕ 3 ಬಿಲಿಯನ್ ಜನರಿಗೆ ಅಂತರ್ಜಾಲ ಸೌಲಭ್ಯ ಲಭ್ಯವಿಲ್ಲ. ಇನ್ನೂ ಬಿಲಿಯನ್‌ಗಟ್ಟಲೆ ಜನರು ಹೆಚ್ಚುತ್ತಿರುವ ಮಾಹಿತಿಯ ಬೇಡಿಕೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.
ಆದ್ದರಿಂದ, ಫೈಬರ್ ವ್ಯವಸ್ಥೆ ತಲುಪಲು ಸಾಧ್ಯವಿಲ್ಲದ ಪ್ರದೇಶಗಳಲ್ಲಿ ಅಂತರ್ಜಾಲ ಸೇವೆ ಪೂರೈಕೆದಾರರು ಬಳಕೆದಾರರಿಗೆ ಸೇವೆ ಒದಗಿಸಲು ಕಡಿಮೆ ವೆಚ್ಚದಾಯಕವಾದ, ವೇಗದ ಪರ್ಯಾಯ ವೈರ್‌ಲೆಸ್ ಅಂತರ್ಜಾಲ ವ್ಯವಸ್ಥೆಯ ಅವಶ್ಯಕತೆಯಿದೆ. ಬಹುತೇಕ ತಂತ್ರಜ್ಞಾನಗಳು ಪ್ರಸ್ತುತ ರೇಡಿಯೋ ಸ್ಪೆಕ್ಟ್ರಮ್‌ನಲ್ಲಿ ಕಾರ್ಯಾಚರಿಸುತ್ತಿದ್ದು, ಕೇವಲ ರೇಡಿಯೋ ಸ್ಪೆಕ್ಟ್ರಮ್ ಜಗತ್ತಿನಾದ್ಯಂತ ಹೆಚ್ಚುತ್ತಿರುವ ಅಂತರ್ಜಾಲದ ಬೇಡಿಕೆಯನ್ನು ಪೂರೈಸಲು ಸಾಧ್ಯವಿಲ್ಲ. ಹಾಗಾದರೆ, ನಾವು ಆಪ್ಟಿಕಲ್ ಸ್ಪೆಕ್ಟ್ರಮ್ ಕಡೆ ಚಲಿಸಿ, 30 ಪಟ್ಟು ಹೆಚ್ಚಿನ ಡೇಟಾ ಸಾಮರ್ಥ್ಯವನ್ನು ಹೊಂದುವುದು ಸಾಧ್ಯವೇ?
ನೂತನ ತಂತ್ರಜ್ಞಾನವಾದ ತಾರಾ (TAARA) ಗಾಳಿಯಲ್ಲಿ ಮಾಹಿತಿಯನ್ನು ರವಾನಿಸಲು ಬೆಳಕನ್ನು ಬಳಸುತ್ತದೆ. ಇದು ಅತ್ಯಂತ ತೆಳ್ಳಗಿನ, ಕಣ್ಣಿಗೆ ಕಾಣದ ರೀತಿಯ ಕಿರಣದ ಮೂಲಕ ಮಾಹಿತಿ ರವಾನಿಸುತ್ತದೆ. ಇದಕ್ಕೆ ಫೈಬರ್ ರೀತಿಯ ಯಾವುದೇ ಸಂಪರ್ಕಗಳ ಅವಶ್ಯಕತೆ ಇರುವುದಿಲ್ಲ.
ತಾರಾದ ಬೆಳಕಿನ ಕಿರಣದ ಅಂತರ್ಜಾಲ ತಂತ್ರಜ್ಞಾನವನ್ನು ಪ್ರಸ್ತುತ ಭಾರತ, ಆಫ್ರಿಕಾ, ಹಾಗೂ ಜಗತ್ತಿನ ವಿವಿಧ ಪ್ರದೇಶಗಳಲ್ಲಿ ಚಾಲ್ತಿಗೆ ತರಲಾಗುತ್ತಿದೆ. ತಾರಾ ವ್ಯವಸ್ಥೆ ಕಡಿಮೆ ವೆಚ್ಚದಾಯಕವಾದ, ಶೀಘ್ರವಾಗಿ ಕಾರ್ಯರೂಪಕ್ಕೆ ತರಬಹುದಾದ, ನಗರಗಳು ಮತ್ತು ಹಳ್ಳಿಗಳಿಗೆ ವೇಗದ ಅಂತರ್ಜಾಲ ವ್ಯವಸ್ಥೆಯಾಗಿದೆ. ತಾರಾ ಮೊಬೈಲ್ ಟವರ್ ಮತ್ತು ವೈಫೈ ಹಾಟ್‌ಸ್ಪಾಟ್‌ಗಳ ನಡುವಿನ ಅಂತರವನ್ನು ಕಡಿಮೆಗೊಳಿಸುತ್ತದೆ. ತಾರಾ ಮೂಲಕ ಸಾವಿರಾರು ಜನರಿಗೆ ಅಂತರ್ಜಾಲದ ಶೈಕ್ಷಣಿಕ, ವ್ಯಾಪಾರಿ ಹಾಗೂ ಸಂವಹನ ಪ್ರಯೋಜನಗಳನ್ನು ಗಳಿಸಲು ಸಾಧ್ಯವಾಗುತ್ತದೆ.
ವೈರ್‌ಲೆಸ್ ಆಪ್ಟಿಕಲ್ ಸಂವಹನ ತಂತ್ರಜ್ಞಾನದ ಮೂಲಕ 20 ಕಿಲೋಮೀಟರ್‌ಗಳಷ್ಟು ಅಡೆತಡೆಯಿಲ್ಲದ ವ್ಯಾಪ್ತಿಯಲ್ಲಿ 20 ಜಿಬಿಪಿಎಸ್ ವೇಗದ ಅಂತರ್ಜಾಲ ವ್ಯವಸ್ಥೆಯನ್ನು ಒದಗಿಸುತ್ತದೆ. ತಾರಾ ಲಿಂಕ್‌ಗಳನ್ನು ನೆಟ್‌ವರ್ಕ್ ನಿರ್ವಾಹಕರು ಮತ್ತು ಸೇವಾ ಪೂರೈಕೆದಾರರು ಕ್ಷಿಪ್ರವಾಗಿ ಜಾರಿಗೆ ತಂದು, ಈ ಕೆಳಗಿನ ಪ್ರಯೋಜನಗಳನ್ನು ಪಡೆಯಬಹುದು.
- ಫೈಬರ್ ಬ್ಯಾಕ್‌ಹೌಲ್ ಉದ್ದ ಹೆಚ್ಚಿಸುವಿಕೆ
- ರೇಡಿಯೋ ಬ್ಯಾಕ್‌ಹೌಲ್ ಅಭಿವೃದ್ಧಿ
- ಜಾಲದ ಸ್ಥಿತಿಸ್ಥಾಪಕತ್ವ ಹೆಚ್ಚಿಸುವುದು
- ಕಷ್ಟಕರ ಭೂಪ್ರದೇಶದಲ್ಲಿ ಅಂತರ್ಜಾಲ ವ್ಯವಸ್ಥೆ
- ಹೆಚ್ಚಿನ ಸಾಮರ್ಥ್ಯದ ರಿಲೇ ವ್ಯವಸ್ಥೆ
- ಬ್ಯಾಕಪ್ ಮಾರ್ಗದ ಪೂರೈಕೆ
- ಹೆಚ್ಚುತ್ತಿರುವ ಅಂತರ್ಜಾಲ ಬೇಡಿಕೆ ಪೂರೈಸಲು ಸಹಾಯ
ಫೈಬರ್ ಸಂಪರ್ಕ ತಲುಪಲು ಕಷ್ಟಕರವಾದ ಮತ್ತು ರೇಡಿಯೋ ಮೂಲಭೂತ ವ್ಯವಸ್ಥೆಗಳ ಸ್ಥಾಪನೆ ಕಷ್ಟಕರವಾದ ಪ್ರದೇಶಗಳಲ್ಲಿ ತಾರಾ ತಂತ್ರಜ್ಞಾನ ಅತ್ಯಂತ ಅನುಕೂಲಕರವಾಗಿದೆ. ಇದು ಅರಣ್ಯ ಪ್ರದೇಶಗಳಲ್ಲಿ, ಜಲ ಪ್ರದೇಶಗಳಲ್ಲಿ, ರೈಲ್ವೇ ಪ್ರಯಾಣದಲ್ಲಿ, ಹಾಗೂ ದಟ್ಟವಾದ ನಗರ ಪ್ರದೇಶಗಳಲ್ಲಿ ನೆರವಾಗುತ್ತದೆ.
ಚಾಲ್ತಿಗೆ ತರಲು ಸುಲಭ
ತಾರಾ ವ್ಯವಸ್ಥೆಯನ್ನು ಪ್ರಸ್ತುತ ಇರುವ ಮೂಲಭೂತ ವ್ಯವಸ್ಥೆಗಳಾದ ರೇಡಿಯೋ ಮತ್ತು ಫೈಬರ್ ಜೊತೆಗೆ ಅಳವಡಿಸಲು ಅನುಕೂಲಕರವಾಗಿದೆ.
ತಾರಾ ವ್ಯವಸ್ಥೆ ಒದಗಿಸುವ ಕಂಪನಿ
ಗೂಗಲ್ ಸಂಸ್ಥೆಯ ಪೋಷಕ ಸಂಸ್ಥೆಯಾದ ಆಲ್ಫಾಬೆಟ್ 2021ರ ಜನವರಿ ತಿಂಗಳಲ್ಲಿ ಪ್ರಾಜೆಕ್ಟ್ ಲೂನ್ ಅನ್ನು ಕೊನೆಗೊಳಿಸಿತು. ಈ ಯೋಜನೆ ಸ್ಟ್ರಾಟೋಸ್ಫಿಯರಿಕ್ ಹೀಲಿಯಂ ಬಲೂನ್‌ಗಳ ಮೂಲಕ ವೈರ್‌ಲೆಸ್ ಅಂತರ್ಜಾಲ ವ್ಯವಸ್ಥೆ ಒದಗಿಸುವ ಉದ್ದೇಶ ಹೊಂದಿತ್ತು. ಈ ಮೊದಲು 2017ರಲ್ಲಿ ಸೋಲಾರ್ ಚಾಲಿತ ಡ್ರೋನ್‌ಗಳನ್ನು ಬಳಸಿ ಅಂತರ್ಜಾಲ ವ್ಯವಸ್ಥೆ ಒದಗಿಸುವ ಯೋಜನೆ ವಿಫಲವಾಗಿತ್ತು. ಆದರೆ, ಲೂನ್ ಯೋಜನೆಯಡಿ ಅಭಿವೃದ್ಧಿ ಪಡಿಸಲಾದ ಕೆಲವು ತಂತ್ರಜ್ಞಾನಗಳು, ಅದರಲ್ಲೂ ಎತ್ತರದಲ್ಲಿ ಹಾರಾಡುವ ಬಲೂನ್‌ಗಳನ್ನು ಸಂಪರ್ಕಿಸುವ ಫ್ರೀ ಸ್ಪೇಸ್ ಆಪ್ಟಿಕಲ್ ಕಮ್ಯುನಿಕೇಷನ್ಸ್ (ಎಫ್ಎಸ್ಒಸಿ) ತಂತ್ರಜ್ಞಾನ ಅಭಿವೃದ್ಧಿಯ ಹಂತದಲ್ಲಿದೆ. ಈ ತಂತ್ರಜ್ಞಾನವನ್ನು ಪ್ರಸ್ತುತ ಆಫ್ರಿಕಾದ ಜನರಿಗೆ ವೇಗದ ಅಂತರ್ಜಾಲ ವ್ಯವಸ್ಥೆಯನ್ನು ಒದಗಿಸಲು ಬಳಸಲಾಗುತ್ತದೆ.
ಎಫ್ಎಸ್ಒಸಿ ಆಪ್ಟಿಕ್ ಫೈಬರ್ ಕೇಬಲ್ ರೀತಿಯಲ್ಲೇ ಕಾರ್ಯಾಚರಿಸುತ್ತದಾದರೂ, ಇದು ಕೇಬಲ್ ಅನ್ನು ಬಳಸುವುದಿಲ್ಲ. ಇದು ಸ್ಪಷ್ಟತೆ ಹೊಂದಿರುವ ಎರಡು ಪ್ರದೇಶಗಳ ನಡುವೆ 20 ಜಿಬಿಪಿಎಸ್‌ಗೂ ಹೆಚ್ಚಿನ ವೇಗದ ಅಂತರ್ಜಾಲ ವ್ಯವಸ್ಥೆಯನ್ನು ಕಲ್ಪಿಸುತ್ತದೆ. ಆಲ್ಫಾಬೆಟ್‌ನ ಮೂನ್‌ಶಾಟ್ ಲ್ಯಾಬ್ ಎಕ್ಸ್ ಇದನ್ನು ಪ್ರಯತ್ನಿಸಲು ಪ್ರಾಜೆಕ್ಟ್ ತಾರಾಗೆ ಚಾಲನೆ ನೀಡಿತು. ಕೆಲ ವರ್ಷಗಳ ಹಿಂದೆ ಭಾರತದಲ್ಲಿ ಮತ್ತು ಕೀನ್ಯಾದ ಕೆಲ ಪ್ರದೇಶಗಳಲ್ಲಿ ಯೋಜನೆಗೆ ಚಾಲನೆ ನೀಡಲಾಯಿತು. ಎಕ್ಸ್ ಸಂಸ್ಥೆ ತನ್ನ ವೈರ್‌ಲೆಸ್ ಆಪ್ಟಿಕಲ್ ಲಿಂಕ್ ಮೂಲಕ ಕಾಂಗೋ ನದಿ ಪ್ರದೇಶದ ಬಜ್ಜ಼ಾವಿಲ್, ರಿಪಬ್ಲಿಕ್ ಆಫ್ ಕಾಂಗೋ, ಕಿನ್ಶಾಸಾ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋಗಳಲ್ಲಿ ಸೇವೆ ಒದಗಿಸುತ್ತಿದೆ.
ಭಾರತದಲ್ಲಿ ತಾರಾ
ಗೂಗಲ್‌ನ ಪೋಷಕ ಸಂಸ್ಥೆಯಾದ ಆಲ್ಫಾಬೆಟ್ ಇಂಕ್ ಈ ಮೊದಲು ಜಗತ್ತಿನ ಗ್ರಾಮೀಣ ಮತ್ತು ದುರ್ಗಮ ಪ್ರದೇಶಗಳಿಗೆ ಸ್ಟ್ರಾಟೋಸ್ಫಿಯರಿಕ್ ಬಲೂನ್‌ಗಳ ಮೂಲಕ ಅಂತರ್ಜಾಲ ವ್ಯವಸ್ಥೆ ಒದಗಿಸುವ ಪ್ರಯತ್ನ ನಡೆಸಿತ್ತು. ಆದರೆ ಅದಕ್ಕೆ ಯಶಸ್ಸು ಲಭಿಸಿರಲಿಲ್ಲ.
ಈಗ ಆಧುನಿಕ ತಂತ್ರಜ್ಞಾನದ ಅಭಿವೃದ್ಧಿಯ ಮೂಲಕ ಸಂಸ್ಥೆ ದೂರ ದೂರದ ಪ್ರದೇಶಗಳಿಗೆ ಬೆಳಕಿನ ಕಿರಣಗಳ ಮೂಲಕ ಅಂತರ್ಜಾಲ ವ್ಯವಸ್ಥೆ ಒದಗಿಸುತ್ತಿದೆ.
ಆಲ್ಫಾಬೆಟ್ ಸಂಸ್ಥೆಯ ಎಕ್ಸ್ (ಈ ಮೊದಲು ಮೂನ್‌ಶಾಟ್ ಫ್ಯಾಕ್ಟರಿ ಎಂದು ಕರೆಯಲ್ಪಡುತ್ತಿದ್ದ ಸಂಸ್ಥೆ) ತಾರಾ ಯೋಜನೆಯನ್ನು 2016ರಲ್ಲಿ ಅಂತರ್ಜಾಲ ವ್ಯವಸ್ಥೆ ಪೂರೈಸಲು ಸ್ಟ್ರಾಟೋಸ್ಫಿಯರಿಕ್ ಬಲೂನ್‌ಗಳನ್ನು ಬಳಸಿಕೊಳ್ಳಲು ಪ್ರಯತ್ನಿಸಿತ್ತು. ಆದರೆ ಆರ್ಥಿಕ ತೊಂದರೆಗಳ ಕಾರಣದಿಂದ ಈ ಯೋಜನೆ ವಿಫಲವಾಯಿತು.
ತಾರಾ ಯೋಜನೆಯ ಮುಖ್ಯಸ್ಥರಾದ ಕೃಷ್ಣಸ್ವಾಮಿಯವರು ಪ್ರಸ್ತುತ ಪರಿಸ್ಥಿತಿ ಉತ್ತಮವಾಗುತ್ತಿದೆ ಎಂದಿದ್ದಾರೆ. ತಾರಾ ಮತ್ತು ಭಾರತದ ಪ್ರಮುಖ ಟೆಲಿಕಾಂ ಮತ್ತು ಅಂತರ್ಜಾಲ ಪೂರೈಕೆದಾರರಾದ ಭಾರ್ತಿ ಏರ್‌ಟೆಲ್ ಸಂಸ್ಥೆಗಳು ತಾವು ಜೊತೆಯಾಗಿ ಭಾರತದಲ್ಲಿ ನೂತನ ಲೇಸರ್ ಆಧಾರಿತ ಅಂತರ್ಜಾಲ ವ್ಯವಸ್ಥೆ ಒದಗಿಸುವುದಾಗಿ ಘೋಷಿಸಿವೆ. ಆದರೆ ಇದರ ಜಾರಿಗೆ ಬೇಕಾದ ಆರ್ಥಿಕ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.