ಸಾರಿಗೆ ನಿಗಮಗಳಿಗೆ “ಶಕ್ತಿ” ತಂದ ಉಚಿತ ಪ್ರಯಾಣ ಯೋಜನೆ; ಆಟೋ, ಓಲಾ, ಊಬರ್​ಗೆ ಸಂಕಷ್ಟ

ಬೆಂಗಳೂರು: ಶಕ್ತಿ ಯೋಜನೆ ಜಾರಿಯಾಗಿದ್ದೆ ತಡ ರಾಜ್ಯದಲ್ಲಿ ಆಟೋ, ಕ್ಯಾಬ್, ಬೈಕ್, ಕಾರುಗಳಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರು ‌ಮಾಡ್ತಿದ್ದ ಸಾರಿಗೆ ಬಸ್ಸುಗಳತ್ತ ಮುಖ ಮಾಡಿದ್ದಾರೆ. ಇದರಿಂದ ಆಟೋ, ಓಲಾ, ಉಬರ್ ಬೈಕ್​ಗೆ ಭಾರೀ ನಷ್ಟ ಉಂಟಾಗಿದೆ. ಒಂದು ಕಿ.ಮೀ ನಡೆಯಬೇಕಂದ್ರೂ ಆಟೋ ಬುಕ್ ಮಾಡುತ್ತಿದ್ದ ಮಹಿಳಾ ಮಣಿಗಳು ಎಷ್ಟೇ ರಶ್ ಇದ್ದರೂ ಬಸ್ ಏರುತ್ತಿದ್ದಾರೆ.

ಸಾರಿಗೆ ನಿಗಮಗಳಿಗೆ “ಶಕ್ತಿ” ತಂದ ಉಚಿತ ಪ್ರಯಾಣ ಯೋಜನೆ ನಷ್ಟದಲ್ಲಿದ್ದ ನಿಗಮಗಳಿಗೆ ಆರ್ಥಿಕ ಚೇತರಿಕೆ ನೀಡ್ತಿದೆ. ಆಟೋ, ಓಲಾ ಊಬರ್ ಬೈಕ್​ಗಳಿಗೆ ಬೈ ಬೈ ಹೇಳಿ. ಇತ್ತ ಸರ್ಕಾರಿ ಸಾರಿಗೆಗಳಿಗೆ ಮಹಿಳೆಯರು ಹಾಯ್ ಹಾಯ್ ಹೇಳುತ್ತಿದ್ದಾರೆ. ಉಚಿತ ಪ್ರಯಾಣದಡಿ ರಾಜ್ಯಾದ್ಯಂತ ಶೇ 23% ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಮಾಸಿಕ ಆದಾಯವು ಏರಿಕೆಯಾಗಿದ್ದು. ಕಳೆದ ನಾಲ್ಕು ವರ್ಷಗಳಿಂದ ಭಾರಿ ನಷ್ಟದಲ್ಲಿದ್ದ ನಿಗಮಗಳ ಆದಾಯ ಪ್ರಮಾಣ ಶೇ 25ರಷ್ಟು ಹೆಚ್ಚಳವಾಗಿದೆ. 16 ದಿನದಲ್ಲಿ 8 ಕೋಟಿಗೂ ಹೆಚ್ಚು ಮಹಿಳೆಯರು ಪ್ರಯಾಣ ಮಾಡಿದ್ದು 196ಕೋಟಿಗೂ ಹೆಚ್ಚಿನ ಟಿಕೆಟ್ ಮಾರಾಟವಾಗಿದೆ. ಇದರ ಎಲ್ಲಾ ವೆಚ್ಚವನ್ನು ಸರ್ಕಾರ ಸಾರಿಗೆ ಇಲಾಖೆಗೆ ಭರಿಸಲಿದೆ. ಹೀಗಾಗಿ ಇಲಾಖೆ ಸಂತಸದಲ್ಲಿದೆ. ಇನ್ನು ಈ ಬಗ್ಗೆ ಮಹಿಳೆಯರು ನಾವು ಪ್ರತಿದಿನ ಆಟೋ ಕ್ಯಾಬ್​ನಲ್ಲಿ ಪ್ರಯಾಣ ಮಾಡ್ತಿದ್ವಿ. ಪ್ರತಿ ತಿಂಗಳು ಐದು ಸಾವಿರ ಖರ್ಚಾಗುತ್ತದೆ. ಈಗ ಬಸ್ ನಲ್ಲಿ ಫ್ರೀ ಇರೋದ್ರಿಂದ ತುಂಬಾ ಸಹಾಯ ಆಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನೂ ಇದರ ಜೊತೆಗೆ ಪುರುಷ ಪ್ರಯಾಣಿಕರ ಸಂಖ್ಯೆ ಕೂಡ ಉತ್ತಮವಾಗಿರೋದ್ರಿಂದ ನಿಗಮಗಳಿಗೆ ಆರ್ಥಿಕ ಚೇತರಿಕೆಯಾಗಿದೆ. ಈ ಹಿಂದೆ ಆದಾಯದ ಶೇ 40 ರಷ್ಟು ಡಿಸೇಲ್, ಶೇ 45% ರಷ್ಟು ಸಿಬ್ಬಂದಿ ವೇತನ, ಶೇ 15ರಷ್ಟು ಬಿಡಿಭಾಗ ಸೇರಿ ಇತರೆ ಖರ್ಚುವೆಚ್ಚಕ್ಕೆ ಬಳಕೆಯಾಗುತ್ತಿತ್ತು. ಅನೇಕ ಬಾರಿ ಖರ್ಚು ವೆಚ್ಚಕ್ಕೂ ಸಾಲದೇ ಸರ್ಕಾರಕ್ಕೆ ಆರ್ಥಿಕ ಸಹಾಯದ ಮೊರೆ ಹೋಗುತ್ತಿದ್ದ ನಿಗಮಗಳು ಸದ್ಯ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಿರುವುದರಿಂದ ನಿಗಮಗಳ ಆದಾಯ ಉಳಿತಾಯಕ್ಕೆ ಶಕ್ತಿ ಯೋಜನೆ ಸಹಾಯಕವಾಗ್ತಿದೆ. ಆದರೆ ಆಟೋ ಚಾಲಕರು ಮಾತ್ರ ಈ ಶಕ್ತಿ ಯೋಜನೆಯಿಂದ ಬಹಳ ಕಷ್ಟ ಅನುಭವಿಸುತ್ತಿದ್ದಾರೆ.

ಒಟ್ನಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದ ಸಾರಿಗೆ ನಿಗಮಕ್ಕೆ ಕಾಂಗ್ರೆಸ್ ನೂತನ ಯೋಜನೆ ಶಕ್ತಿ ತುಂಬಿದ್ರೆ ಮಹಿಳಾ ‌ಪ್ರಯಾಣಿಕರನ್ನು ನಂಬಿದ್ದ ಕ್ಯಾಬ್, ಆಟೋ, ಬಸ್ ಚಾಲಕರ ಶಕ್ತಿ ಕಳೆದಿದ್ದು ಮಾತ್ರ ಸುಳ್ಳಲ್ಲ.