ಯಲ್ಲಾಪುರ: ಪಟ್ಟಣದಲ್ಲಿ ಸಚಿವ ಶಿವರಾಮ ಹೆಬ್ಬಾರ್ ಪ್ರಯತ್ನದ ಫಲವಾಗಿ ಸುಮಾರು ಆರೂವರೆ ಕೋಟಿ ರೂ. ವೆಚ್ಚದಲ್ಲಿ ಬೃಹತ್ ಬಸ್ ನಿಲ್ದಾಣ ನಿರ್ಮಾಣವಾದರೂ ಇದರಲ್ಲಿ ಪುಸ್ತಕ ಮಳಿಗೆ ಸ್ಥಾಪನೆಗೆ ಸಾರಿಗೆ ನಿಗಮದ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಈ ನಿಟ್ಟಿನಲ್ಲಿ ಪುಸ್ತಕ ಮಳಿಗೆಗೆ ಅಗ್ರಹಿಸಿ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗುವದು ಎಂದು ಮಾತೃಭೂಮಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಶ್ರೀರಂಗ ಕಟ್ಟಿ ಎಚ್ಚರಿಸಿದ್ದಾರೆ.
ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸಚಿವ ಶಿವರಾಮ್ ಹೆಬ್ಬಾರ್ ಮತ್ತು ವಾಯವ್ಯ ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷ ವಿ.ಎಸ್.ಪಾಟೀಲ್ ಅಧಿಕಾರಿಗಳಿಗೆ ಪುಸ್ತಕ ಮಳಿಗೆ ಸ್ಥಾಪನೆ ಬಗ್ಗೆ ಆದೇಶಿಸಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಸಚಿವರು ಮತ್ತು ಅಧ್ಯಕ್ಷರ ಆದೇಶವನ್ನು ಗಾಳಿಗೆ ತೂರಿದ ಅಧಿಕಾರಿಗಳು, ಕನ್ನಡ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಶ್ರೀರಂಗ ಕಟ್ಟಿ ಆಪಾದಿಸಿದರು.
ಮಾತೃಭೂಮಿ ಸೇವಾ ಪ್ರತಿಷ್ಠಾನದ ಹೋರಾಟಕ್ಕೆ ಕರ್ನಾಟಕ ಜರ್ನಲಿಸ್ಟ ಅಸೋಸಿಯೇಶನ್ ಮತ್ತು ಕಾರ್ಯನಿರತ ಪತ್ರಕರ್ತ ಸಂಘಗಳು ಬೆಂಬಲ ಸೂಚಿಸಿದ್ದು ಮುಂಬರುವ ದಿನಗಳಲ್ಲಿ ವಿವಿಧ ಸಂಘಟನೆಗಳು ಸಹ ಹೋರಾಟಕ್ಕೆ ಕೈ ಜೋಡಿಸಲಿವೆ. ಅಗಸ್ಟ 5 ರ ಒಳಗಾಗಿ ಬಸ್ ನಿಲ್ದಾಣದಲ್ಲಿ ಪುಸ್ತಕ ಮಳಿಗೆ ಸ್ಥಾಪನೆಯಾಗುವಂತೆ ಒತ್ತಾಯಿಸಿದ್ದಾರೆ. ಇಲ್ಲದಿದ್ದಲ್ಲಿ ಬಸ್ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಮಂಜುನಾಥ ಹಿರೇಮಠ ಪ.ಪಂ.ಸದಸ್ಯ ಸೋಮು ನಾಯ್ಕ, ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.