ಡೆನ್ಮಾರ್ಕ್ ದೇಶದ ಬ್ಯಾಂಕ್​ಗೆ ಐಟಿ ಸೇವೆಯ ಗುತ್ತಿಗೆ ಇನ್ಫೋಸಿಸ್ ಪಾಲು; ಇನ್ಫೋಸಿಸ್ ಸುಪರ್ದಿಗೆ ಬರಲಿದೆ ಬೆಂಗಳೂರಿನ ಡ್ಯಾನ್​ಸ್ಕ್ ಸೆಂಟರ್

ಬೆಂಗಳೂರು: ಅಮೆರಿಕದ ಕಂಪನಿಗಳಿಗೆ ಐಟಿ ಸೇವೆ ಒದಗಿಸುವ ಮೂಲಕ ಹೆಚ್ಚಿನ ಆದಾಯ ಗಳಿಸುತ್ತಿದ್ದ ಭಾರತದ ಐಟಿ ಕಂಪನಿಗಳಿಗೆ ಈಗ ಯೂರೋಪ್​ನಿಂದ ಆದಾಯಮೂಲ ಹೆಚ್ಚುತ್ತಿರುವ ಟ್ರೆಂಡ್ ಕಾಣುತ್ತಿದೆ. ಅಮೆರಿಕದ ಟ್ರಾನ್ಸಮೆರಿಕಾ ಕಂಪನಿ ಟಿಸಿಎಸ್ ಜೊತೆಗಿನ 2 ಬಿಲಿಯನ್ ಡಾಲರ್ ಒಪ್ಪಂದವನ್ನು ಮಧ್ಯದಲ್ಲೇ ಕೈಬಿಡಲು ನಿರ್ಧರಿಸಿದ್ದೂ ಸೇರಿದಂತೆ ಭಾರತೀಯ ಐಟಿ ಕಂಪನಿಗಳಿಗೆ ಈಗ ಅಮೆರಿಕದಿಂದ ಹೆಚ್ಚು ವ್ಯವಹಾರ ಸಿಗುತ್ತಿಲ್ಲ. ಈ ಮಧ್ಯೆ ಭಾರತದ ಅತಿದೊಡ್ಡ ಐಟಿ ಕಂಪನಿಗಳಲ್ಲಿ ಒಂದಾದ ಇನ್ಫೋಸಿಸ್  ​ಗೆ ಐರೋಪ್ಯ ದೇಶವೊಂದರ ಕಂಪನಿಯಿಂದ ಒಳ್ಳೆಯ ಒಪ್ಪಂದ ಸಿಕ್ಕಿದೆ. ಡೆನ್ಮಾರ್ಕ್ ದೇಶದ ಡ್ಯಾನ್​ಸ್ಕ್ ಬ್ಯಾಂಕ್  450 ಮಿಲಿಯನ್ ಡಾಲರ್ (ಸುಮಾರು 3,690 ಕೋಟಿ ರೂ) ಮೊತ್ತದ ಒಪ್ಪಂದವನ್ನು ಇನ್ಪೋಸಿಸ್ ಜೊತೆ ಮಾಡಿಕೊಂಡಿದೆ. ಡೆನ್ಮಾರ್ಕ್​ನ ಈ ಪ್ರಮುಖ ಬ್ಯಾಂಕ್​ಗೆ ಎಐ ಇತ್ಯಾದಿ ಹೊಸ ತಂತ್ರಜ್ಞಾನದ ಅಳವಡಿಕೆ ಮಾಡಿ, ಅದರ ಸೇವೆಯನ್ನು ಉನ್ನತ ಸ್ತರಕ್ಕೆ ಏರಿಸುವ ಹೊಣೆಗಾರಿಕೆ ಇನ್ಫೋಸಿಸ್ ಮೇಲಿದೆ. ಐದು ವರ್ಷಗಳ ಅವಧಿಗೆ ಈ ಗುತ್ತಿಗೆ ಇರಲಿದೆ. ಡ್ಯಾನ್​ಸ್ಕ್ ಬ್ಯಾಂಕ್ ಇಚ್ಛಿಸಿದಲ್ಲಿ ಹೆಚ್ಚುವರಿ 3 ವರ್ಷ ಕಾಲ ಒಪ್ಪಂದದ ಅವಧಿ ಹೆಚ್ಚಿಸಬಹುದು. ಇದೇ ಸೆಪ್ಪಂಬರ್ ತಿಂಗಳ ಕೊನೆಯೊಳಗೆ ಇನ್ಫೋಸಿಸ್ ಮತ್ತು ಡ್ಯಾನ್​ಸ್ಕ್ ಬ್ಯಾಂಕ್ ಮಧ್ಯೆ ಒಪ್ಪಂದ ಅಂತಿಮಗೊಳ್ಳುವ ನಿರೀಕ್ಷೆ ಇದೆ.

ಡ್ಯಾನ್​ಸ್ಕ್ ಬ್ಯಾಂಕ್ ಬೆಂಗಳೂರಿನಲ್ಲೇ ಟೆಕ್ನಾಲಜಿ ಸಪೋರ್ಟ್ ಸೆಂಟರ್ ಹೊಂದಿದ್ದು ಅದರಲ್ಲಿ 1,400 ಮಂದಿ ಉದ್ಯೋಗಿಗಳಿದ್ದಾರೆ. ಒಪ್ಪಂದದ ಪ್ರಕಾರ, ಈ ಐಟಿ ಕೇಂದ್ರವು ಇನ್ಫೋಸಿಸ್ ಸ್ವಾಧೀನಕ್ಕೆ ಹೋಗಲಿದ್ದು, 1400 ಉದ್ಯೋಗಿಗಳು ಇನ್ಫೋಸಿಸ್ ನಿರ್ವಹಣೆಯ ಅಡಿಯಲ್ಲಿ ಇರುತ್ತಾರೆ. ಈ ಟೆಕ್ನಾಲಜಿ ಸೆಂಟರ್​ಗೆ ಆಧುನಿಕ ತಂತ್ರಜ್ಞಾನದ ಅಳವಡಿಕೆ ಮಾಡಲಾಗುತ್ತದೆ. ಇನ್ಫೋಸಿಸ್ ಟೋಪಾಜ್ ಎಂಬ ಜನರೇಟಿವ್ ಎಐ ಸರ್ವಿಸ್​ಗಳ ಸ್ಯೂಟ್ ಅನ್ನು ಡ್ಯಾನ್​ಸ್ಕ್ ಬ್ಯಾಂಕ್​ನ ಟೆಕ್ನಾಲಜಿ ಸೆಂಟರ್​ಗೆ ಅಳವಡಿಸಲಾಗುತ್ತದೆ ಎಂದು ಮಾಧ್ಯಮಗಳಿಗೆ ಮಾಹಿತಿ ಸಿಕ್ಕಿದೆ.

ಈ ಒಪ್ಪಂದದಿಂದ ಡ್ಯಾನ್​ಸ್ಕ್ ಬ್ಯಾಂಕ್​ನ ಪ್ರಧಾನ ವ್ಯವಹಾರಕ್ಕೆ ಇನ್ಫೋಸಿಸ್​ನ ಡಿಜಿಟಿಲ್, ಕ್ಲೌಡ್ ಮತ್ತು ಡಾಟಾ ತಂತ್ರಜ್ಞಾನದ ಪುಷ್ಟಿ ಸಿಗಬಹುದು. ಪ್ರಬಲ ಎಐ ತಂತ್ರಜ್ಞಾನವು ಬ್ಯಾಂಕ್​ನ ಗ್ರಾಹಕರಿಗೆ ಇನ್ನೂ ಒಳ್ಳೆಯ ಸೇವೆ ಕೊಡಲು ನೆರವಾಗಬಹುದು ಎಂಬ ನಿರೀಕ್ಷೆ ಇದೆ.

ಇನ್ಫೋಸಿಸ್ ಸಂಸ್ಥೆ ಇತ್ತೀಚೆಗಷ್ಟೇ ಡೆನ್ಮಾರ್ಕ್​ನ ಬೇಸ್ ಲೈಫ್ ಸೈನ್ಸಸ್ ಸಂಸ್ಥೆ ಹಾಗೂ ಫಿನ್​ಲ್ಯಾಂಡ್​ನ ಫ್ಲ್ಯೂಡೋ ಕಂಪನಿಗಳನ್ನು ಖರೀದಿಸಿತ್ತು. ಸ್ವೀಡನ್​ನ ಗೋಥೆನ್​ಬರ್ಗ್ ಹಾಗೂ ನಾರ್ವೆಯ ಓಸ್ಲೋದಲ್ಲಿ ಹೊಸ ಪ್ರಾಕ್ಸಿಮಿಟಿ ಸೆಂಟರ್​ಗಳನ್ನು ತೆರೆದು ಐರೋಪ್ಯ ದೇಶಗಳಿಂದ ಹೆಚ್ಚಿನ ವ್ಯವಹಾರದ ನಿರೀಕ್ಷೆ ಇಟ್ಟುಕೊಂಡಿದೆ.

ಇನ್ನೊಂದೆಡೆ, ಅಮೆರಿಕದ ಟ್ರಾನ್ಸಮೆರಿಕಾ ಒಪ್ಪಂದ ಕಳೆದುಕೊಂಡ ಟಿಸಿಎಸ್ ಸಂಸ್ಥೆ ಬ್ರಿಟನ್ ದೇಶದ ನ್ಯಾಷನಲ್ ಎಂಪ್ಲಾಯ್ಮೆಂಟ್ ಸೇವಿಂಗ್ಸ್ ಟ್ರಸ್ಟ್ ಸಂಸ್ಥೆಯ ಗುತ್ತಿಗೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಇದು ಯೂರೋಪ್​ನ ನಾಲ್ಕನೇ ಕಂಪನಿಯಿಂದ ಟಿಸಿಎಸ್​ಗೆ ಸಿಕ್ಕ ಗುತ್ತಿಗೆಯಾಗಿದೆ.