ಅಂಕೋಲಾ: ರಾಜ್ಯದಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಪಿಎಸ್ಐ-2021ರ 545 ಸಿವಿಲ್ ಪಿಎಸ್ಐ ಹುದ್ದೆಗಳ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಎಸಗಿದ 52 ಅಭ್ಯರ್ಥಿಗಳನ್ನು ಶಾಶ್ವತವಾಗಿ ಡಿಬಾರ್ ಮಾಡಲಾಗಿದೆ.
ಅಕ್ಟೋಬರ್ 3, 2021ರಂದು ರಾಜ್ಯದ ಬೆಂಗಳೂರು ಕಲಬುರ್ಗಿ ಮೈಸೂರು ಸೇರಿದಂತೆ 7 ಕೇಂದ್ರಗಳಲ್ಲಿ ಪಿಎಸ್ಐ ನೇಮಕಾತಿಗೆ ಲಿಖಿತ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪ ಕೇಳಿ ಬಂದಿದ್ದು, ರಾಜ್ಯದ್ಯಂತ ಪ್ರತಿಭಟನೆ ನಡೆಸಲಾಗಿತ್ತು. ಈ ಹಿನ್ನೆಲೆ ಸರ್ಕಾರ ತನಿಖೆ ನಡೆಸುವಂತೆ ಸಿಐಡಿ ಘಟಕಕ್ಕೆ ಆದೇಶ ನೀಡಿತ್ತು.
ತನಿಖೆ ಕೈಗೆತ್ತಿಕೊಂಡ ಸಿಐಡಿ ಪ್ರಾಥಮಿಕ ತನಿಖೆಯಲ್ಲಿ ಆರೋಪಿತರಾಗಿರುವ 52 ಜನರ ವಿರುದ್ಧ ಬೆಂಗಳೂರು ಕಲಬುರ್ಗಿ ಸೇರಿದಂತೆ ವಿವಿಧಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ, ಆರೋಪಿಗಳನ್ನು ದಸ್ತಗಿರಿ ಮಾಡಿದ್ದರು. ಈ ಹಂತದಲ್ಲಿ ವಿಚಾರಣೆ ಮಾಡಿದಾಗ ನೇಮಕಾತಿ ಪರೀಕ್ಷೆಯ ಪೇಪರ್ ಒಂದರಲ್ಲಿ ಅಭ್ಯರ್ಥಿಗಳು ಬ್ಲೂಟೂತ್ ಮತ್ತಿತರ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಕೆ ಮಾಡಿದ್ದು ಹಾಗೂ ಅನುಚಿತ ಮಾರ್ಗದಲ್ಲಿ ಓ ಎಂ ಆರ್ ಅಕ್ರಮವಾಗಿ ತಿದ್ದುಪಡಿ ಮಾಡಿರುವುದು ಸಾಬೀತಾಗಿದೆ. ಎಫ್ಐಆರ್ ದಾಖಲಿಸಿ ವಿಚಾರಣೆ ಮಾಡಿದ ನಂತರ 52 ಜನರ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ತಯಾರಿಸಿ ನ್ಯಾಯಕ್ಕೆ ಸಲ್ಲಿಸಲಾಗಿದೆ.
1977 ರ ಕರ್ನಾಟಕ ನಾಗರಿಕ ಸೇವೆಗಳು (ಸಾಮಾನ್ಯ ನೇಮಕಾತಿ-ತಿದ್ದುಪಡಿ) ನಿಯಮಗಳಲ್ಲಿನ ನಿಯಮ 20ರಲ್ಲಿ ನಮೂದಿಸಿರುವ ದುರ್ನಡತೆಯ ಶಾಶ್ವತವಾಗಿ 52 ಅಭ್ಯರ್ಥಿಗಳನ್ನು ಪೋಲಿಸ್ ಇಲಾಖೆಯು ನಡೆಸುವ ಎಲ್ಲಾ ವೃಂದದ ಪಿಎಸ್ಐ, ಕಾನ್ಸ್ಟೇಬಲ್, ಮತ್ತು ಇತರೆ ವಿಭಾಗಗಳಲ್ಲಿ ನಡೆಯುವ ನೇಮಕಾತಿಗಳಲ್ಲಿ ಭಾಗವಹಿಸಲು ಶಾಶ್ವತವಾಗಿ ನಿಷೇಧಿಸಲಾಗಿದೆ ಎಂದು ನೇಮಕಾತಿ ವಿಭಾಗದ ಡಿಜಿಪಿ ಕಮಲ್ ಪಂತ್ ಆದೇಶಿಸಿದ್ದಾರೆ.
ಎಂಟು ಜಿಲ್ಲೆಯ ಅಭ್ಯರ್ಥಿಗಳು; ಬೆಂಗಳೂರು ಮತ್ತು ಕಲ್ಬುರ್ಗಿ ಮೇಲುಗೈ.
ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಹೆಸರಿರುವ 52 ಅಭ್ಯರ್ಥಿಗಳು ಎಂಟು ಜಿಲ್ಲೆಗಳವರಾಗಿದ್ದಾರೆ. ಇದರಲ್ಲಿ ಬೆಂಗಳೂರು ನಗರ ಮತ್ತು ಗ್ರಾಮೀಣದ 20 ಹಾಗೂ ಕಲಬುರ್ಗಿ ಜಿಲ್ಲೆಯ 18 ಜನರಿದ್ದಾರೆ. ಉಳಿದಂತೆ ರಾಮನಗರ 5, ವಿಜಯಪುರ 3, ಬೆಳಗಾವಿ ಮತ್ತು ಹಾಸನ ತಲಾ 2, ಯಾದಗಿರಿ ಮತ್ತು ರಾಯಚೂರಿನ ತಲಾ ಒಬ್ಬರು ಅಭ್ಯರ್ಥಿಗಳನ್ನು ಶಾಶ್ವತವಾಗಿ ಡಿಬಾರ್ ಮಾಡಲಾಗಿದೆ.
ಕೆಲವೇ ಜಿಲ್ಲೆಯ ಅಭ್ಯರ್ಥಿಗಳು ಮಾಡಿದ ಅಪರಾಧಕ್ಕೆ ಇಡೀ ರಾಜ್ಯದ ಪಿಎಸ್ಐ ಹುದ್ದೆ ಆಕಾಂಕ್ಷಿಗಳು ಸಂಕಷ್ಟ ಅನುಭವಿಸುವಂತಾಗಿದೆ.