ಅಂಕೋಲಾ: ಕಿರು ಸೇತುವೆ ಕಾಮಗಾರಿ ಮುಗಿಸುವಂತೆ ಗ್ರಾಮಸ್ಥರ ಆಗ್ರಹ. ರಸ್ತೆ ಬಂದ್ ಮಾಡಿ ಪ್ರತಿಭಟನೆ.

ಅಂಕೋಲಾ: ಪುರಸಭೆ ವ್ಯಾಪ್ತಿಯ ಅಲಗೇರಿ ರಸ್ತೆಯಲ್ಲಿನ ಕಂತ್ರಿ ಮತ್ತು ಜೋಗಳಸೆ ಗ್ರಾಮದ ನಡುವಿನ ಕಿರು ಸೇತುವೆ ಕಾಮಗಾರಿ ಹಲವು ತಿಂಗಳುಗಳು ಕಳೆದರು ಮುಗಿಯದೆ ಇರುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶಗೊಂಡು ತಾತ್ಕಾಲಿಕವಾಗಿ ರಸ್ತೆ ಬಂದ್ ಮಾಡಿ ಪ್ರತಿಭಟಿಸಿದರು.


ಮೂರು ತಿಂಗಳಿಂದ 25 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಕಿರು ಸೇತುವೆ ನಿರ್ಮಾಣವಾಗುತ್ತಿದ್ದು ಕಾಮಗಾರಿ ಕುಂಟುತ್ತಾ ಸಾಗಿದೆ. ಲೋಕಪಯೋಗಿ ಇಲಾಖೆ ಮತ್ತು ಗುತ್ತಿಗೆದಾರರ ನಿರ್ಲಕ್ಷತನದಿಂದ ಸೇತುವೆ ಪಕ್ಕದ ಗದ್ದೆಯಲ್ಲಿ ಮಣ್ಣು ಹಾಕಿ ತಾತ್ಕಾಲಿಕವಾಗಿ ನಿರ್ಮಿಸಿದ ರಸ್ತೆಯು ಮಳೆಗೆ ಕೊಚ್ಚಿಕೊಂಡು ಹೋಗಿದೆ. ಮನೆಗಳ ಮುಂದೆ ಮತ್ತು ಕೃಷಿ ಭೂಮಿಯಲ್ಲಿ ನೀರು ತುಂಬಿದ್ದರಿಂದ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದಾರೆ. ಇದು ಅಂಕೋಲಾ ಪಟ್ಟಣಕ್ಕೆ ಸಂಬಂಧಿಸಿದ ಪ್ರಮುಖ ರಾಜಕಾಲುವೆ ಆಗಿದೆ.
ಹದಗೆಟ್ಟ ರಸ್ತೆಯಲ್ಲಿ ಶಾಲಾ ವಿದ್ಯಾರ್ಥಿಗಳು ಮಹಿಳೆಯರು ಓಡಾಡುವ ಅಪಾಯಕಾರಿಯಾಗಿದೆ ಎಂದು ಪ್ರತಿಭಟನಾಕಾರರು ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸ್ಥಳಕ್ಕೆ ಬಂದು ಸೇತುವೆಯ ಮೇಲಿಂದ ಸಂಚರಿಸಲು ಎರಡೂ ಕಡೆ ಮಣ್ಣು ತುಂಬಿ ತಾತ್ಕಾಲಿಕ ರಸ್ತೆ ನಿರ್ಮಿಸಿಬೇಕೆಂದು ಪಟ್ಟು ಹಿಡಿದರು.
ಪುರಸಭೆಯ ಜೆಸಿಬಿಯನ್ನು ತರಿಸಿ ತಾತ್ಕಾಲಿಕ ರಸ್ತೆ ನಿರ್ಮಿಸಿಕೊಡಲು ಒಪ್ಪಿಗೆ ಮತ್ತು ಈ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆ ಅಧಿಕಾರಿ ಭೇಟಿ ನೀಡುವ ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂದೆಕ್ಕೆ ಪಡೆದರು.
ಸಂಜಯ ಮೋದಿ, ಮಂಜುನಾಥ ಜೆ.ಆಗೇರ, ರಾಘವೇಂದ್ರ ಆಗೇರ, ವಿದ್ಯಾ ಆಗೇರ, ಗಜಾನನ ನಾಯ್ಕ, ಗಣಪತಿ ನಾಯ್ಕ, ಬೊಮ್ಮಯ್ಯ ನಾಯಕ, ಆದಾಂ ಶೇಖ್, 112 ಪೊಲೀಸ ವಾಹನದ ಹವಲ್ದಾರ ನಿತ್ಯಾನಂದ ಕಿಂದೋಳಕರ, ಚಾಲಕ ಪ್ರವೀಣ ಪೂಜಾರಿ ಮತ್ತಿತರರು ಇದ್ದರು.