ಪ್ರಾಣಿಗಳ ಮೇಲೆ ಕೆಲವರಿಗೆ ವಿಪರೀತ ಪ್ರೀತಿ ಇರುತ್ತದೆ. ವಿಶೇಷವಾಗಿ ಗುರುತಿಸಿಕೊಂಡ ಪ್ರಾಣಿಗಳನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸಲಾಗುತ್ತದೆ. ಅದಕ್ಕೆ ಹೊಸ ಉದಾಹರಣೆ ಎಂದರೆ ‘7 ಸ್ಟಾರ್ ಸುಲ್ತಾನ್’ ಎಂಬ ಟಗರು. ಟಗರು ಕಾಳಗದಲ್ಲಿ ಕಾದಾಡಿ ಅನೇಕ ಬಹುಮಾನ ಗೆದ್ದಿರುವ ಈ ಟಗರಿನ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಒಂದು ಅಭಿಯಾನ ಶುರುವಾಗಿದೆ. ಬಕ್ರೀದ್ ಹಬ್ಬಕ್ಕೆ ಈ ಟಗರನ್ನು ಬಲಿ ಕೊಡುತ್ತಾರೆ ಎಂಬ ಸುದ್ದಿ ಹಬ್ಬಿರುವ ಬೆನ್ನಲ್ಲೇ ಅದನ್ನು ಉಳಿಸಿಕೊಳ್ಳಬೇಕು ಎಂದು ಜನರು ಪ್ರಯತ್ನಿಸುತ್ತಿದ್ದಾರೆ.
ಡಾಲಿ ಧನಂಜಯ್ ನಿರ್ಮಾಣದ ‘ಟಗರು ಪಲ್ಯ ’ ಸಿನಿಮಾದಲ್ಲೂ ಈ ಟಗರು ನಟಿಸಿದೆ ಎಂಬುದು ವಿಶೇಷ.
ಬಕ್ರೀದ್ ಹಬ್ಬಕ್ಕೆ ಕುರುಬಾನಿ ನೀಡಬೇಕು ಎಂಬ ಉದ್ದೇಶದಿಂದ ಮುಸ್ಲಿಂ ಕುಟುಂಬವೊಂದು ಪುಟ್ಟ ಟಗರಿನ ಮರಿಯನ್ನು ತಂದು ಸಾಕಿತ್ತು. ಅದು ಸ್ವಲ್ಪ ದೊಡ್ಡದಾಗುತ್ತಿದ್ದಂತೆಯೇ ಅದನ್ನು ಮೊದಲ ಬಾರಿ ಟಗರು ಕಾಳಗಕ್ಕೆ ಇಳಿಸಲಾಯಿತು. ಮೊದಲ ಪಂದ್ಯದಲ್ಲೇ ಬಹುಮಾನ ಗೆದ್ದು ಎಲ್ಲರಿಗೂ ಆಶ್ಚರ್ಯ ಮೂಡಿಸಿತು ಆ ಟಗರು. ಕೇವಲ 8 ತಿಂಗಳಲ್ಲಿ ಹಲವು ಕಡೆಗಳಲ್ಲಿ ನಡೆದ ಟಗರು ಕಾಳಗದಲ್ಲಿ ಅನೇಕ ಪ್ರಶಸ್ತಿಗಳನ್ನು ಇದು ಪಡೆದುಕೊಂಡಿತು. ನಂತರ ‘7 ಸ್ಟಾರ್ ಸುಲ್ತಾನ್’ ಎಂದೇ ಅದು ಫೇಮಸ್ ಆಯಿತು. ಇಡೀ ಬಾಗಲಕೋಟೆ ಜಿಲ್ಲೆಯಲ್ಲಿ ಇದು ಮನೆಮಾತಾಯಿತು. ಮಾಲೀಕರಿಗೆ ಇದರಿಂದ ಸಾಕಷ್ಟು ಹಣ, ಬಹುಮಾನ ಹರಿದುಬಂತು.
‘7 ಸ್ಟಾರ್ ಸುಲ್ತಾನ್’ ಎಂಬ ಟಗರು ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಭಾರಿ ಜನಮೆಚ್ಚುಗೆ ಗಳಿಸಿದೆ ಎಂಬುದು ನಿಜ. ಆದರೆ ಅದನ್ನು ಆ ಮುಸ್ಲಿಂ ಕುಟುಂಬದವರು ತಂದಿದ್ದು ಕುರುಬಾನಿ ನೀಡುವ ಸಲುವಾಗಿ. ಹಾಗಾಗಿ ಈ ವರ್ಷದ ಬಕ್ರೀದ್ಗೆ ಈ ಟಗರನ್ನು ಕುರುಬಾನಿ ನೀಡಲಾಗುವುದು ಎಂಬ ಸುದ್ದಿ ಹಬ್ಬಿದೆ. ಅನೇಕ ಜನರ ಪ್ರೀತಿ ಗಳಿಸಿರುವ ಈ ಟಗರನ್ನು ಸಾಯಿಸಬಾರದು ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಮಾಡಲಾಗುತ್ತಿದೆ. ಅದಕ್ಕೆ ಅನೇಕರು ಬೆಂಬಲ ಸೂಚಿಸುತ್ತಿದ್ದಾರೆ.
ಬಿಳಿ ಬಣ್ಣದ ‘7 ಸ್ಟಾರ್ ಸುಲ್ತಾನ್’ಗೆ ದೊಡ್ಡ ಅಭಿಮಾನಿ ಬಳಗ ಇದೆ. ಇದರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಸಿನಿಮಾಗಳ ಮಾಸ್ ಡೈಲಾಗ್ಗಳನ್ನು ಅಳವಡಿಸಿ ಈ ಟಗರಿನ ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ‘ಸುಲ್ತಾನ್ ಟಗರಿನಿಂದ ಅದರ ಮಾಲೀಕರು ಕೂಡ ಫೇಮಸ್ ಆಗಿದ್ದಾರೆ. ದಯವಿಟ್ಟು ಬಕ್ರೀದ್ಗೆ ಕೊಲ್ಲಬೇಡಿ. ಅದರ ಬದಲು ಬೇರೆ ಮರಿಯನ್ನು ಕಡಿಯಿರಿ. ಅದನ್ನು ಕಳೆದುಕೊಂಡರೆ ನೀವು ತುಂಬ ಪಶ್ಚಾತ್ತಾಪ ಪಡುತ್ತೀರಿ. ಅದರ ಪ್ರೀತಿ ಕಳೆದುಕೊಂಡು ಕೊರಗುತ್ತೀರಿ. ದಯವಿಟ್ಟು ಈ ಟಗರನ್ನು ನಿಮ್ಮ ಬಳಿ ಇಟ್ಟುಕೊಳ್ಳಿ. ಅದು ಎಷ್ಟು ದಿನ ನಿಮ್ಮ ಜೊತೆ ಇರುತ್ತದೋ ಅಲ್ಲಿಯವರೆಗೂ ನಿಮಗೆ ಗೌರವ ಹೆಚ್ಚುತ್ತದೆ’ ಎಂದು ಅಭಿಮಾನಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.