ದಾಂಡೇಲಿ : ಈ ದೇಶದ ಆರ್ಥಿಕ ಸದೃಢತೆಯಲ್ಲಿ ಆರೋಗ್ಯವಂತ ಸಮಾಜ ನಿರ್ಮಾಣದ ಪಾತ್ರ ಬಹುಮುಖ್ಯವಾಗಿದೆ. ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕಾದರೇ ನಾವು ನಮ್ಮ ನಿತ್ಯದ ಜೀವನದಲ್ಲಿ ಆದರ್ಶ ಸಂಸ್ಕಾರಗಳನ್ನು ಮೈಗೂಡಿಸಿಕೊಳ್ಳಬೇಕು. ವ್ಯವಸಗಳಿಂದ ದೂರವಿದ್ದವರೇ ಆರೋಗ್ಯವಂತ ಸಮಾಜ ನಿರ್ಮಾಣದ ನಿಜವಾದ ರೂವಾರಿಗಳೆಂದು ದಾಂಡೇಲಿ ನಗರ ಪೊಲೀಸ್ ಠಾಣೆಯ ಪಿಎಸೈ ಐ.ಆರ್.ಗಡ್ಡೇಕರ್ ಅವರು ಹೇಳಿದರು.
ಅವರು ನಗರದ ಹಳೆ ನಗರ ಸಭೆಯ ಕಟ್ಟಡದಲ್ಲಿರುವ ಸೋರಗಾವಿ ಪ್ರೌಢಶಾಲೆಯಲ್ಲಿ ಪೊಲೀಸ್ ಇಲಾಖೆಯ ಆಶ್ರಯದಡಿ ನಡೆದ ಅಂತರಾಷ್ಟ್ರೀಯ ಮಾದಕ ವ್ಯಸನ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ಕ್ಷಣಿಕ ಸುಖಕ್ಕಾಗಿ ವ್ಯಸನಗಳಿಗೆ ಬಲಿಯಾಗಬಾರದು. ಭವಿಷ್ಯದ ಉನ್ನತಿಗಾಗಿ ಸತತ ಅಧ್ಯಯನಶೀಲರಾಗಬೇಕೆಂದು ಐ.ಆರ್.ಗಡ್ಡೇಕರ್ ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಎಎಸೈ ಬಸವರಾಜ ಒಕ್ಕುಂದ, ಪೊಲೀಸ್ ಸಿಬ್ಬಂದಿಗಳಾದ ಮಹಾದೇವ ಸಾತಪ್ಪ ಬಳೆಗಾರ, ಚಂದ್ರಶೇಖರ್ ಮೊಳೆಕರ್ ಹಾಗೂ ಶಾಲೆಯ ಶಿಕ್ಷಕ ವೃಂದ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.