ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ಅವರು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಬಂದು ಹೋದ ಬಳಿಕ ಹೊರರಾಜ್ಯಗಳಿಂದಲೂ ಪ್ರವಾಸಿಗರು ಲಗ್ಗೆಯಿಡುತ್ತಿದ್ದಾರೆ. ಪ್ರವಾಸಿಗರ ಆಗಮನದಿಂದ ಅರಣ್ಯ ಇಲಾಖೆಗೆ ಆದಾಯವೂ ಹರಿದುಬರುತ್ತಿದೆ.
ಹೌದು. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯವಾಗಿ ಇತ್ತೀಚೆಗಷ್ಟೇ 50 ವರ್ಷ ಪೂರೈಸಿತು. 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಳೆದ ಏಪ್ರಿಲ್ 9 ರಂದು ಪ್ರಧಾನಿ ನರೇಂದ್ರ ಮೋದಿ ಬಂಡೀಪುರಕ್ಕೆ ಭೇಟಿ ನೀಡಿ ಎರಡು ತಾಸುಗಳ ಕಾಲ ಸಫಾರಿ ನಡೆಸಿದ್ದರು.
ಪ್ರಧಾನಿ ಮೋದಿ ಅವರು ಬಂದು ಹೋದ ದಿನದಿಂದ ಬಂಡೀಪುರಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಪ್ರತಿದಿನ 2 ಸಾವಿರ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ವಾರಾಂತ್ಯದಲ್ಲಿ ಸಫಾರಿಗಾಗಿ ಬರುವವರ ಸಂಖ್ಯೆ ಇನ್ನೂ ಹೆಚ್ಚಿದೆ. ಇದರಿಂದ ಪ್ರತಿದಿನ 7 ಲಕ್ಷಕ್ಕೂ ಹೆಚ್ಚು ಆದಾಯ ಅರಣ್ಯ ಇಲಾಖೆಗೆ ಹರಿದು ಬರುತ್ತಿದೆ. ಬಂಡೀಪುರದಲ್ಲಿ 31 ಸಫಾರಿ ಜೀಪ್ ಓಡಿಸಲು ಅವಕಾಶವಿದೆ. ಆದ್ರೆ ಇದುವರೆಗೆ ಅರಣ್ಯ ಇಲಾಖೆ 26 ಜೀಪ್ಗಳನ್ನಷ್ಟೇ ಬಳಸುತ್ತಿತ್ತು. ಇದರೊಂದಿಗೆ 2 ಜೀಪ್ ಮತ್ತು 2 ಹೆಚ್ಚುವರಿ ಸಫಾರಿ ಬಸ್‌ಗಳನ್ನ ಹೊಸದಾಗಿ ತರಿಸಲಾಗಿದ್ದು, ಪ್ರವಾಸಿಗರಿಗೆ ಸಾಕಷ್ಟು ಅನುಕೂಲವಾಗಿದೆ.
ಇನ್ನೂ ಮೋದಿ ಭೇಟಿ ಬಳಿಕ ಆದಾಯ ಕೂಡ ಡಬಲ್ ಆಗ್ತಿದೆ. ಪ್ರಧಾನಿ ಮೋದಿ 50 ವರ್ಷದ ಸಂಭ್ರಮಕ್ಕೆ ಸಾಕ್ಷಿಯಾಗುವ ಜೊತೆಗೆ ದೇಶದ ವಿವಿಧ ರಾಜ್ಯದ ಗಣ್ಯರಿಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವನ್ನ ಪರಿಚಯಿಸಿದ್ದರು. ಪ್ರಧಾನಿ ಮೋದಿ ಅವರು ಪ್ರವಾಸ ಮಾಡಿದ್ದನ್ನ ಟಿವಿಯಲ್ಲಿ ನೋಡಿದ್ವಿ, ಆದ್ದರಿಂದ ನಾವೂ ಸಫಾರಿ ಹೋಗೋಣ ಅಂತಾ ಬಂದಿದ್ದೇವೆ ಎಂದು ಪುಣೆ ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಪ್ರಧಾನಿ ಮೋದಿ ಬಂದು ಹೋದ ನಂತರ ವಿವಿಧ ರಾಜ್ಯಗಳಿಂದ ಬರುವವರ ಸಂಖ್ಯೆ ಹೆಚ್ಚಾಗಿದೆ.
ಅಲ್ಲದೇ, ಹುಲಿ ವಾಸಕ್ಕೆ ದೇಶದ 2ನೇ ಅತ್ಯುತ್ತಮ ಅರಣ್ಯ ಪ್ರದೇಶವೆಂಬ ಹೆಮ್ಮೆಯೂ ಬಂಡೀಪುರಕ್ಕೆ ಇದ್ದು, ಈ ಹಿನ್ನೆಲೆಯಲ್ಲೂ ಪ್ರವಾಸಿಗರು ಲಗ್ಗೆಯಿಡುತ್ತಿದ್ದಾರೆ.