ತುರುವೇಕೆರೆ (ಜೂ.24): ತಾಲೂಕಿನ ಬಾಣಸಂದ್ರ ಬಳಿ ಇರುವ ಕಳ್ಳನಗಿಡ ಕಾವಲ್‌ನ ತೋಟವೊಂದರಲ್ಲಿ ವಾಸವಿದ್ದ ದಂಪತಿಗಳ ಮೇಲೆ ದಾಳಿ ಮಾಡಿದ ಕಳ್ಳರು ಅವರನ್ನು ಮನಸೋಇಚ್ಛೆ ಥಳಿಸಿ ಮನೆಯ ಲ್ಲಿದ್ದ ಮಹಿಳೆಯ ಕೊರಳಲ್ಲಿದ್ದ ಮಾಂಗಲ್ಯ ಸರ, ಕಿವಿ ಓಲೆಗಳು ಮತ್ತು 20 ಸಾವಿರ ನಗದನ್ನು ಅಪಹರಿಸಿರುವ ಪ್ರಕರಣದ ಗುರುವಾರ ರಾತ್ರಿ ನಡೆದಿದೆ.
ತೋಟದ ಮನೆಯಲ್ಲಿ ವಾಸವಿದ್ದ ಕೃಷ್ಣೇಗೌಡ (60) ಮತ್ತು ಅವರ ಪತ್ನಿ ಇಂದಿರಮ್ಮ (55) ಎಂಬುವರ ಮೇಲೆ ಗುರುವಾರ ರಾತ್ರಿ ಮಾರಕಾಸ್ತ್ರಗಳನ್ನು ಹೊಂದಿದ್ದ ಸುಮಾರು 10 ಮಂದಿ ದರೋಡೆಕೋರರು ಏಕಾಏಕಿ ಹಲ್ಲೆ ಮಾಡಿದ್ದಾರೆ. ಅಲ್ಲದೇ ಕೃಷ್ಣೇಗೌಡರಿಗೆ ಮಚ್ಚು ಮತ್ತು ಚಾಕುವಿನಿಂದ ಹಲ್ಲೆ ಮಾಡಿ, ಕೈಕಾಲುಗಳನ್ನು ಕಟ್ಟಿ ಹಾಕಿದ್ದಾರೆ. ಅಲ್ಲದೇ ಕೃಷ್ಣೇ ಗೌಡರ ಬಾಯಿಯನ್ನು ಬಟ್ಟೆಯಿಂದ ತುರುಕಿ ಮಾತನಾಡದಂತೆ ಮಾಡಿದ್ದಾರೆ.
ನಂತರ ಪತ್ನಿ ಇಂದಿರಮ್ಮ ಬಳಿ ತೆರಳಿದ ದರೋಡೆಕೋರರು ಅವರ ಬಾಯಿಗೆ ಬಟ್ಟೆಯನ್ನು ತುರುಕಿದ್ದಲ್ಲದೇ ಬಲವಾಗಿ ಹೊಡೆದ ಪರಿಣಾಮ ಇಂದಿರಮ್ಮನವರ ಹಲ್ಲುಗಳು ಉದುರಿ ಹೋಗಿವೆ. ಕೂಡಲೇ ಆಕೆ ಧರಿಸಿದ್ದ ಸುಮಾರು ಮೂರು ಲಕ್ಷ ರು. ಬೆಲೆಬಾಳುವ ಮಾಂಗಲ್ಯ ಸರ, ಮತ್ತು ಕಿವಿಯ ಓಲೆಯನ್ನು ಕಸಿದುಕೊಂಡಿದ್ದಾರೆ. ಮನೆಯಲ್ಲಿದ್ದ 20 ಸಾವಿರ ನಗದನ್ನೂ ಅಪಹರಿಸಿ ಪರಾರಿಯಾಗಿದ್ದಾರೆ. ಪರಾರಿಯಾಗುವ ಮುನ್ನ ಪೋಲಿಸರಿಗೆ ದೂರು ನೀಡಿದ್ದಲ್ಲಿ ಕೊಲೆ ಮಾಡುವ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಹೇಳಲಾಗಿದೆ.
ದರೋಡೆಕೋರರು ಪರಾರಿಯಾದ ನಂತರ ಕೃಷ್ಣೇಗೌಡರು ತಮಗೆ ಕಟ್ಟಿಹಾಕಲಾಗಿದ್ದ ಹಗ್ಗದಿಂದ ಬಿಡಿಸಿಕೊಂಡು, ಬಾಯಿಗೆ ತುರುಕಿದ್ದ ಬಟ್ಟೆಯನ್ನು ತೆಗೆದು ತಮ್ಮ ಪತ್ನಿ ಇಂದಿರಮ್ಮನವರ ರಕ್ಷಣೆ ಮಾಡಿದ್ದಾರೆ. ತಕ್ಷಣವೇ ತಮ್ಮ ಅಕ್ಕಪಕ್ಕದ ನಿವಾಸಿಗಳಿಗೆ ದೂರವಾಣಿ ಕರೆ ಮಾಡಿ ತಮಗಾಗಿರುವ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಕೂಡಲೇ ಅಕ್ಕಪಕ್ಕದ ನಿವಾಸಿಗಳು ತುರುವೇಕೆರೆಯ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ.
ಮೊದಲೇ ಭೇಟಿ: ಗುರುವಾರ ರಾತ್ರಿ ದರೋಡೆ ಮಾಡುವ ಹಿಂದಿನ ದಿನ ರಾತ್ರಿ ಇಬ್ಬರು ಆಗುಂತಕರು ಮನೆ ಬಳಿ ಬಂದಿದ್ದರು ಎಂದು ಪೋಲಿಸರಿಗೆ ಕೃಷ್ಣೇಗೌಡರು ಮಾಹಿತಿ ನೀಡಿದ್ದಾರೆ. ದಂಡಿನಶಿವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಡಿಷನಲ್ ಎಸ್ಪಿ ಮರಿಸ್ವಾಮಿ, ಡಿವೈಎಸ್ಪಿ ಲಕ್ಷ್ಮೇಕಾಂತ್, ಸಿಪಿಐ ಗೋಪಾಲ ನಾಯಕ್, ಎಸೈ ಚಿತ್ತರಂಜನ್ ಸ್ಥಳಕ್ಕೆ ಭೇಟಿ ನೀಡಿದ್ದರು.