ಕನ್ನಡ ಶಾಲೆಗೆ ಮಲಯಾಳಂ ಶಿಕ್ಷಕಿಯ ನೇಮಕ: ಸಚಿವ ಶಿವರಾಜ್ ತಂಗಡಗಿ ಪತ್ರಕ್ಕೂ ಕ್ಯಾರೆ ಅನ್ನದ ಕೇರಳ ಸರ್ಕಾರ

ಮಂಗಳೂರು: ಕರ್ನಾಟಕ ಮತ್ತು ಕೇರಳ ಗಡಿಯಲ್ಲಿರುವ ಕಾಸರಗೋಡಿನ ಅಡೂರಿನ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗೆ ಮಲಯಾಳಂ ಶಿಕ್ಷಕಿಯ ನೇಮಕಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಕನ್ನಡ ಬರದ ಮಲಯಾಳಂ ಶಿಕ್ಷಕಿಯ ನೇಮಿಸಿರುವ ಕೇರಳ ಸರ್ಕಾರದ ನಿರ್ಧಾರದ ವಿರುದ್ಧ ಕೆಲ ದಿನಗಳ ಹಿಂದೆ ಅಡೂರಿನ ಶಾಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರತಿಭಟಿಸಿದ್ದರು.

ಮಲಯಾಳಂ ಶಿಕ್ಷಕಿಯ ಪಾಠ ನಮಗೆ ಅರ್ಥವಾಗುತ್ತಿಲ್ಲವೆಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದರು. ಇನ್ನು ಪೋಷಕರು ಕನ್ನಡದ ಗಂಧಗಾಳಿ ಗೊತ್ತಿರದ ಶಿಕ್ಷಕಿಯನ್ನು ನೇಮಿಸಿದರೇ ಹೇಗೆ? ಇದರಿಂದ ಮಕ್ಕಳಿಗೆ ಪಾಠ ಅರ್ಥವಾಗುತ್ತಿಲ್ಲ. ಹೀಗಾಗಿ ಶಿಕ್ಷಣ ಇಲಾಖೆ ಹಾಗೂ ಕೇರಳ ಸರ್ಕಾರದ ವಿರುದ್ಧ ಗರಂ ಆಗಿದ್ದರು.

ಈ ಹಿನ್ನೆಲೆ ಕರ್ನಾಟಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಕೇರಳ ಸರ್ಕಾರದ ಸಚಿವ ಶಿವನ್ ಕುಟ್ಟಿಗೆ ಪತ್ರ ಬರೆದಿದ್ದರು. ಮಲಯಾಳಂ ಶಿಕ್ಷಕರ ಬದಲು ಕನ್ನಡ ಶಿಕ್ಷಕರ ನೇಮಿಸಬೇಕೆಂದು ಕೋರಿದ್ದರು. ಕರ್ನಾಟಕ ಸಚಿವರ ಪತ್ರಕ್ಕೆ ಕೇರಳ ಸರ್ಕಾರ ಪ್ರತಿಕ್ರಿಯೆ ನೀಡಿಲ್ಲ. ಈ ಮೂಲಕ ಮತ್ತೆ ಕೇರಳ ಸರ್ಕಾರ ಕನ್ನಡ ಮಾಧ್ಯಮವನ್ನು ಮುಗಿಸುತ್ತಿದ್ದೆ ಎಂದು ಗಡಿನಾಡು ಕನ್ನಡಿಗರು ಆರೋಪಿಸಿದ್ದಾರೆ.

ಇನ್ನು ಈ ವಿಚಾರವಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಮುಂದೇನು ಮಾಡಬೇಕೆ ಅಂತ ಯೋಚಿಸುತ್ತೇವೆ ಎಂದು ಹೇಳಿದ್ದರು.