ಹಂಪಿಯಲ್ಲಿ ಜಿ20 ಶೃಂಗ ಸಭೆ ತಯಾರಿ, ಯುನೆಸ್ಕೋ ನಿಯಮಗಳನ್ನು ಗಾಳಿಗೆ ತೂರಿದ ಜಿಲ್ಲಾಡಳಿತ

ಹೊಸಪೇಟೆ: ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ ಜುಲೈ 13ರಿಂದ ಮೂರು ದಿನಗಳ ಕಾಲ ಜಿ20 ಶೃಂಗ ಸಭೆ ನಡೆಯಲಿದೆ. ಈ ಸಂಬಂಧ ವಿಜಯನಗರ ಜಿಲ್ಲಾಡಳಿತವತಿಯಿಂದ ಸಿದ್ಧತೆಗಳು ಬರದಿಂದ ಸಾಗಿವೆ. ಸಿದ್ಧತೆಯ ನಡುವೆ ಯುನೆಸ್ಕೋ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ನಿಯಮಗಳನ್ನು ಜಿಲ್ಲಾಡಳಿತ ಗಾಳಿಗೆ ತೂರಿದೆ. ಹೌದು ಶೃಂಗಸಭೆಯ ಸಿದ್ಧತೆಗಾಗಿ, ಅಧಿಕಾರಿಗಳು ಭಾರಿ ವಾಹನಗಳನ್ನು ಪಾರಂಪರಿಕ ತಾಣದ ನಿರ್ಬಂಧಿತ ವಲಯಗಳಲ್ಲಿ ಸಂಚರಿಸಲು ಬಿಟ್ಟಿದ್ದಾರೆ. ಇದು ಸ್ಮಾರಕಗಳ ಸುರಕ್ಷತೆಗೆ ದೊಡ್ಡ ಅಪಾಯವಾಗಿದೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.

ಯುನೆಸ್ಕೊ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ವಿಜಯ ವಿಠಲ ಮಂದಿರ ಮತ್ತು ವಿರೂಪಾಕ್ಷ ದೇವಸ್ಥಾನದ ಬಳಿ ಭಾರಿ ವಾಹನ ಸಂಚಾರವನ್ನು ನಿಷೇಧಿಸಿದೆ. ಆದರೂ ಕೂಡ, ಆಡಳಿತವು ಇತ್ತೀಚೆಗೆ ವಿರೂಪಾಕ್ಷ ದೇವಾಲಯದ ಗೋಪುರ ಸ್ವಚ್ಛಗೊಳಿಸಲು ಕ್ರೇನ್​​ ಬಳಸಿತ್ತು. ಅಲ್ಲದೆ, ವಿಜಯ ವಿಠಲ ದೇವಸ್ಥಾನದ ಬಳಿ ಟ್ರ್ಯಾಕ್ಟರ್ ಸಂಚಾರಕ್ಕೆ ಅನುಮತಿ ನೀಡಿದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.

ಆದರೆ ಅಧಿಕಾರಿಗಳು ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಹೇಳಿದ್ದಾರೆ. ಜಿ20 ಶೃಂಗಸಭೆ ತಯಾರಿಗಾಗಿ ನಮಗೆ ಕಡಿಮೆ ಸಮಯವಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಪ್ರಕಾರ, ಪಾರಂಪರಿಕ ತಾಣಗಳಲ್ಲಿ ಯಾವುದೇ ಉತ್ಖನನ ಅಥವಾ ವಾಹನಗಳ ಸಂಚಾರಕ್ಕೆ ಅನುಮತಿಸಲಾಗುವುದಿಲ್ಲ. ಸ್ಮಾರಕಗಳಿಗೆ ಯಾವುದೇ ಹಾನಿಯಾಗದಂತೆ ಎಚ್ಚರಿಕೆಯಿಂದ ಕೆಲಸ ನಡೆಯುತ್ತಿದೆ. ಕಾಮಗಾರಿಗೆ ಹಿರಿಯ ಅಧಿಕಾರಿಗಳಿಂದ ಅನುಮತಿ ಪಡೆಯಲಾಗಿದೆ. ವಿರೂಪಾಕ್ಷ ದೇವಸ್ಥಾನದ ಗೋಪುರ ಸ್ವಚ್ಛಗೊಳಿಸಲು, ಬಂಡೆಗಳನ್ನು ಸ್ಥಳಾಂತರಿಸಲು ಕ್ರೇನ್ ಬಳಸುತ್ತಿದ್ದೇವೆ ಎಂದು ವಿಜಯನಗರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.

ಸಾಮಾಜಿಕ ಕಾರ್ಯಕರ್ತ, ಹಂಪಿ ನಿವಾಸಿ ಪ್ರಭಾಕರ ಜೋಶಿ ಮಾತನಾಡಿ, ನಿರ್ಬಂಧಿತ ಹಾಗೂ ಕಂಪನ ರಹಿತ ವಲಯಗಳಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಬಾರದು ಎಂಬ ನಿಯಮ ಸ್ಪಷ್ಟವಾಗಿದೆ. ಆದರೆ, ಶೃಂಗಸಭೆಗೆ ಸಿದ್ಧತೆ ನಡೆಸಲು ಅಧಿಕಾರಿಗಳು ವಿರೂಪಾಕ್ಷ ದೇವಸ್ಥಾನದ ಬಳಿ ಕ್ರೇನ್ ಮತ್ತು ವಿಜಯ ವಿಠಲ ದೇವಸ್ಥಾನದ ಬಳಿ ಟ್ರ್ಯಾಕ್ಟರ್ ಸಂಚರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.

ವಿವಿಐಪಿಗಳ ಭೇಟಿಯ ಸಂದರ್ಭದಲ್ಲಿಯೂ ಸ್ಮಾರಕಗಳ ಬಳಿ ಬ್ಯಾಟರಿ ಚಾಲಿತ ಬಗ್ಗಿಗಳನ್ನು ಮಾತ್ರ ಅನುಮತಿಸಲಾಗಿದೆ. ಆದರೆ ಅಧಿಕಾರಿಗಳು ಸ್ವತಃ ನಿಯಮಗಳನ್ನು ಅನುಸರಿಸಿಲ್ಲ. ಕ್ರೇನ್‌ಗಳು ಮತ್ತು ಟ್ಯ್ರಾಕ್ಟರ್​​ಗಳ ಸಂಚಾರದಿಂದ ದುರ್ಬಲವಾದ ಸ್ಮಾರಕಗಳಿಗೆ ಹಾನಿಯಾಗಬಹುದು. ಶೃಂಗಸಭೆಯು ಇಲ್ಲಿ ನಡೆಯುತ್ತಿರುವುದಕ್ಕೆ ನಮಗೆ ಸಂತೋಷವಾಗಿದೆ. ಆದರೆ ಯುನೆಸ್ಕೋದ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಕೂಡಲೇ ಅಧಿಕಾರಿಗಳು ಭಾರಿ ವಾಹನಗಳ ಪ್ರವೇಶವನ್ನು ತಡೆಯಬೇಕು ಎಂದು ಒತ್ತಾಯಿಸಿದರು.