ಕೇರಳದಲ್ಲಿ ದಿನೇ ದಿನೇ ಬಿದಿ ನಾಯಿಗಳು ಜನರ ಮೇಲೆ ದಾಳಿ ನಡೆಸುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇತ್ತೀಚೆಗಷ್ಟೇ ಜೂನ್ 11 ರಂದು ಬೀದಿನಾಯಿಗಳ ಹಿಂಡು ದಾಳಿಗೆ 11 ವರ್ಷದ ಬಾಲಕ ಸಾವನ್ನಪ್ಪಿದ್ದು, ಇದೀಗಾ ಈ ಘಟನೆಗೆ ಪೂರಕ ಎಂಬಂತೆ ಮತ್ತೆ ಅಂತದ್ದೇ ಘಟನೆ ಕೇರಳದ ಕಣ್ಣೂರು ಜಿಲ್ಲೆಯ ಮುಜ್ಜಪಿಲಂಗಾಡಿನಲ್ಲಿ ನಡೆದಿದೆ. 3ಬಿದಿ ನಾಯಿಗಳು ಮಗುವಿನ ಮೇಲೆ ದಾಳಿ ಮಾಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗಾ ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
8 ವರ್ಷದ ಜಾನ್ವಿ ತನ್ನ ಮನೆಯ ಅಂಗಳದಲ್ಲಿ ಇದ್ದಾಗ ಮೂರು ನಾಯಿಗಳು ಆಕೆಯ ಮೇಲೆ ದಾಳಿ ಮಾಡಿದೆ. ನೋವು ತಾಳಲಾರದೇ ಬಾಲಕಿ ಕಿರುಚಲು ಪ್ರಾರಂಭಿಸಿದ್ದಾಳೆ. ಕೆಲ ಹೊತ್ತಿನಲ್ಲೇ ಸ್ಥಳೀಯರು ಬಾಲಕಿಯ ಸಹಾಯಕ್ಕೆ ಬಂದಿದ್ದಾರೆ. ಬಾಲಕಿಯ ಕೈ ಮತ್ತು ಕಾಲುಗಳಿಗೆ ಗಾಯಗಳಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂತಹ ಘಟನೆಗಳು ಮರುಕಳಿಸುತ್ತಿದ್ದಂತೆ ಅಲ್ಲಿನ ಸರ್ಕಾರ ಎಚ್ಚೆತ್ತುಕೊಂಡಿದ್ದು, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಕೆಲವು ನಿಬಂಧನೆಗಳನ್ನು ಸಡಿಲಿಸಬೇಕಾಗಿದೆ ಎಂದು ಕೇರಳದ ಸ್ಥಳೀಯ ಸ್ವ-ಸರ್ಕಾರಗಳ ಸಚಿವ ಎಂ.ಬಿ.ರಾಜೇಶ್ ಕಳೆದ ವಾರ ಹೇಳಿದ್ದಾರೆ. ಮಾನವ ಜೀವಕ್ಕೆ ಅಪಾಯವನ್ನುಂಟು ಮಾಡುವ ಬೀದಿ ನಾಯಿಗಳನ್ನು ಕೊಲ್ಲಲು ಅನುಮತಿ ಕೋರಿ ರಾಜ್ಯವು ಮತ್ತೊಮ್ಮೆ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ ಎಂದು ಅವರು ಹೇಳಿದ್ದಾರೆ.