ನಡುರಸ್ತೆಯಲ್ಲಿಯೇ ಸರ್ಕಾರಿ ಇಂಜಿನಿಯರ್‌ ಕಾಲರ್‌ ಹಿಡಿದು, ಕೆನ್ನೆಗೆ ಬಾರಿಸಿದ ಎಂಎಲ್‌ಎ ಗೀತಾ ಜೈನ್‌!

ಮುಂಬೈ (ಜೂ.21): ಮಹಾರಾಷ್ಟ್ರದ ಪಕ್ಷೇತರ ಶಾಸಕಿ ಗೀತಾ ಜೈನ್‌, ಜನರ ಎದುರೇ ಜೂನಿಯರ್‌ ಇಂಜಿನಿಯರ್‌ನ ಕಾಲರ್‌ ಹಿಡಿದು ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಜೂನಿಯರ್‌ ಇಂಜಿನಿಯರ್‌ನನ್ನು ನಾಲಾಯಕ್‌ (ಅಯೋಗ್ಯ) ಎಂದೂ ಕರೆದಿದ್ದಾರೆ. ಥಾಣೆ ಜಿಲ್ಲೆಯ ಮೀರಾ ಭಯಂದರ್‌ನ ಪಕ್ಷೇತರ ಶಾಸಕಿಯಾಗಿರುವ ಗೀತಾ ಜೈನ್‌, ಮೀರಾ ಭಯಂದರ್‌ ಪುರಸಭೆಯ ಜೂನಿಯರ್‌ ಇಂಜಿನಿಯರ್‌ಗೆ ನಡುರಸ್ತೆಯಲ್ಲಿಯೇ ಕೆನ್ನೆಗೆ ಬಾರಿಸಿದ ಘಟನೆ ನಡೆದಿದೆ. ಯಾವುದೇ ನೋಟಿಸ್‌ ನೀಡದೇ, ಮನೆಯಲ್ಲಿರುವ ಮಹಿಳೆಯರು, ಮಕ್ಕಳು ಹಾಗೂ ಹಿರಿಯರನ್ನು ಹೊರಹಾಕಿ ಮನೆಯ ಒಂದು ಭಾಗವನ್ನು ಜೂನಿಯರ್‌ ಇಂಜಿನಿಯರ್‌ ಉಪಸ್ಥಿತಿಯಲ್ಲಿ ಕೆಡವಲಾಗಿತ್ತು. ಈ ವೇಳೆ ಅಲ್ಲಿಗೆ ಆಗಮಿಸಿದ ಗೀತಾ ಜೈನ್‌ ಸಿಟ್ಟಿಗೆದ್ದು ಜೂನಿಯರ್‌ ಇಂಜಿನಿಯರ್‌ ಮೇಳೆ ಹಲ್ಲೆ ಮಾಡಿದ್ದಾರೆ. ವೀಡಿಯೊದಲ್ಲಿ, ಗೀತಾ ಜೈನ್ ಅವರು ಸೂಚನೆ ನೀಡದೇ ಮನೆಯನ್ನು ಕೆಡವಿದ ಬಗ್ಗೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ನಂತರ ಸರ್ಕಾರಿ ಇಂಜಿನಿಯರ್‌ನ ಕಾಲರ್ ಹಿಡಿದು ಕಪಾಳಮೋಕ್ಷ ಮಾಡಿದ್ದಾರೆ.

ಈ ಕುರಿತಂತೆ ಸ್ಥಳೀಯ ಸುದ್ದಿವಾಹಿನಿಗೆ ಮಾತನಾಡಿರುವ ಗೀತಾಜೈನ್‌, ತನ್ನ ಮನೆಯನ್ನು ಕಳೆದುಕೊಂಡು ಆರು ತಿಂಗಳ ಮಗುವವನ್ನು ಹಿಡಿದುಕೊಂಡು ರಸ್ತೆಯಲ್ಲಿ ನಿಂತಿದ್ದ ಮಹಿಳೆಯ ಬಗ್ಗೆ ಜೂನಿಯರ್‌ ಇಂಜಿನಿಯರ್ ಕೆಟ್ಟದಾಗಿ ಮಾತನಾಡಿದ್ದ. ಇದರಿಂದ ನಾನು ಸಿಟ್ಟಾಗಿದ್ದೆ. ಆತನಿಗೆ ನಾನು ಕೆನ್ನೆಗೆ ಬಾರಿಸಿದ್ದು, ಸಾಮಾನ್ಯ ಪ್ರತಿಕ್ರಿಯೆ ಆಗಿತ್ತಷ್ಟೇ ಎಂದಿದ್ದಾರೆ. ಘಟನೆಯ ಕುರಿತು ಮಾತನಾಡಿದ ಗೀತಾ ಜೈನ್, ಜೂನಿಯರ್ ಸಿವಿಕ್ ಎಂಜಿನಿಯರ್‌ಗಳು ನೆಲಸಮ ಮಾಡಿದ ಮನೆಯ ಒಂದು ಭಾಗ ಮಾತ್ರ ಅಕ್ರಮವಾಗಿದೆ ಮತ್ತು ಅದರ ನಿವಾಸಿಗಳು ಅಕ್ರಮ ಭಾಗವನ್ನು ತೆಗೆದುಹಾಕುವುದಾಗಿ ಭರವಸೆ ನೀಡಿದ್ದರು ಎಂದಿದ್ದಾರೆ.

“ಅಕ್ರಮ ನಿರ್ಮಾಣವು ಬಿಲ್ಡರ್‌ಗೆ ಅಡ್ಡಿಯಾಗಿದೆ ಮತ್ತು ಯಾವುದೇ ಸರ್ಕಾರಿ ಸೌಕರ್ಯ ಅಥವಾ ರಸ್ತೆಗೆ ಇದು ಅಡ್ಡಿಯಾಗಿರಲಿಲ್ಲ ಎಂದು ಸಾಬೀತಾಗಿದೆ. ಆದರೂ, ಈ ನಾಗರಿಕ ಅಧಿಕಾರಿಗಳು ಅಲ್ಲಿಗೆ ಹೋಗಿ ಅಕ್ರಮ ಭಾಗವನ್ನು ಕೆಡವುವ ಬದಲು ಇಡೀ ಮನೆಯನ್ನು ನೆಲಸಮ ಮಾಡಿದ್ದಾರೆ” ಎಂದು ಅವರು ಹೇಳಿದರು. ತಮ್ಮ ಮನೆ ಕೆಡವುವುದನ್ನು ವಿರೋಧಿಸಿದ ಮಹಿಳೆಯರ ಜುಟ್ಟು ಎಳೆದಾಡಿದ್ದಾರೆ ಎಂದು ಶಾಸಕರು ಆರೋಪಿಸಿದ್ದಾರೆ.

ಇಬ್ಬರು ಇಂಜಿನಿಯರ್‌ಗಳು ಬಿಲ್ಡರ್‌ಗಳ ಸಹಕಾರದೊಂದಿಗೆ ಖಾಸಗಿ ಜಮೀನಿನಲ್ಲಿ ನೆಲಸಮ ಕಾರ್ಯವನ್ನು ನಡೆಸುತ್ತಿದ್ದಾರೆ ಎಂದು ಗೀತಾ ಜೈನ್ ಹೇಳಿದ್ದಾರೆ. ತನ್ನ ಕೃತ್ಯಕ್ಕೆ ವಿಷಾದಿಸುವುದಿಲ್ಲ ಮತ್ತು ಯಾವುದೇ ಶಿಕ್ಷೆಯನ್ನು ಎದುರಿಸಲು ಸಿದ್ಧ ಎಂದಿದ್ದಾರೆ.

ನಾನು ಈ ವಿಚಾರವನ್ನು ಸದನದಲ್ಲಿಯೂ ಪ್ರಸ್ತಾಪ ಮಾಡುತ್ತೇನೆ. ಇಂಜಿನಿಯರ್ ಬೇಕಾದರೆ ನನ್ನ ಮೇಲೆ ಕೇಸ್‌ ಕೂಡ ಮಾಡಲಿ. ಅದನ್ನು ಎದುರಿಸಲು ನಾನು ಸಿದ್ಧ. ಖಾಸಗಿ ಜಮೀನಿನಲ್ಲಿ ನಿರ್ಮಿಸಿರುವ ಕಟ್ಟಡಗಳನ್ನು ಅಧಿಕಾರಿಗಳು ಕೆಡವುವುದನ್ನು ಸಹಿಸಿಕೊಳ್ಳುವುದು ಹೇಗೆ ಎಂದು ಶಾಸಕಿ ಪ್ರಶ್ನೆ ಮಾಡಿದ್ದಾರೆ.

ಗೀತಾ ಜೈನ್ 2019 ರ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷೇತರವಾಗಿ ಗೆಲುವು ಕಂಡಿದ್ದರು. ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾದ ನಂತರ ಶಿವಸೇನೆಗೆ ಬೆಂಬಲ ನೀಡಿದರು. ಆದರೆ, ಕಳೆದ ವರ್ಷ ಜೂನ್‌ನಲ್ಲಿ ಏಕನಾಥ್ ಶಿಂಧೆ ಬಂಡಾಯದ ನಂತರ ಗೀತಾ ಜೈನ್ ಈಗ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪಾಳೆಯದಲ್ಲಿದ್ದಾರೆ.