ರಾಯಚೂರು (ಜೂ.21): ಸಫಾಯಿ ಕರ್ಮಚಾರಿ ಸಮುದಾಯಕ್ಕೆ ಪ್ರತ್ಯೇಕ ಸ್ಮಶಾನ ಒದಗಿಸಲು ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆಂದು ಮಹಿಳೆಯೊಬ್ಬರು ಕಾಲುವೆಗೆ ಇಳಿದು ಚರಂಡಿ ನೀರನ್ನು ಮೈಮೇಲೆ ಸುರಿದುಕೊಂಡ ಘಟನೆ ನಗರದಲ್ಲಿ ಜರುಗಿದೆ. ಸಫಾಯಿ ಕರ್ಮಚಾರಿ ಗೀತಾಸಿಂಗ್ ಚರಂಡಿಗಿಳಿದ ಮಹಿಳೆ. ಕಳೆದ ಕೆಲ ದಿನಗಳ ಹಿಂದೆ ಪ್ರತ್ಯೇಕ ಸ್ಮಶಾನ ಮಂಜೂರು ಮಾಡುವಂತೆ ಮನೆಯ ಮುಂದೆ ಶವವನ್ನಿಟ್ಟು ಪ್ರತಿಭಟನೆ ಮಾಡಲಾಗಿತ್ತು.
ಈ ವೇಳೆ ನಗರಸಭೆ ಅಧಿಕಾರಿ ಮತ್ತು ತಹಸೀಲ್ದಾರ್ ಸ್ಥಳಕ್ಕೆ ಬಂದು ಸ್ಮಶಾನ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದರು. ಇಷ್ಟು ದಿನಗಳ ಕಳೆದರೂ ಭರವಸೆ ಈಡೇರದ ಕಾರಣಕ್ಕೆ ಅಸಮಾಧಾನಗೊಂಡ ಗೀತಾ ಸಿಂಗ್ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ್ ಅವರಿಗೆ ಸೋಮವಾರ ಮನವಿ ಸಲ್ಲಿಸಲು ಮುಂದಾಗಿದ್ದರು, ಅದಕ್ಕೆ ಪೊಲೀಸರು ಅವಕಾಶ ನೀಡದ ಕಾರಣಕ್ಕೆ ಸಿಟ್ಟಿಗೆದ್ದ ಅವರು ಸಮೀಪದ ರಾಜಕಾಲುವೆಗೆ ಇಳಿದು ಚರಂಡಿ ನೀರನ್ನು ಮೈಮೇಲೆ ಹಾಕಿಕೊಂಡು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು.