ಕೋಟಿ ಕೋಟಿ ಭಗವದ್ಗೀತೆ ಪ್ರತಿ ಮುದ್ರಿಸಿದ ಗೀತಾ ಪ್ರೆಸ್‌ಗೆ ಗಾಂಧಿ ಶಾಂತಿ ಪ್ರಶಸ್ತಿ: ಕಾಂಗ್ರೆಸ್ ಆಕ್ರೋಶ

ನವದೆಹಲಿ: ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ದತೆಯನ್ನು ಸಾರುವವರಿಗೆ ನೀಡಲಾಗುವ ಗಾಂಧಿ ಶಾಂತಿ ಪ್ರಶಸ್ತಿಯ 2021ನೇ ಸಾಲಿನ ಪುರಸ್ಕಾರವನ್ನು ಗೋರಖಪುರದ ಗೀತಾ ಪ್ರೆಸ್‌ಗೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಪ್ರಶಸ್ತಿ ಪ್ರದಾನ ಸಮಿತಿಯ ಅಧ್ಯಕ್ಷರಾದ ಪ್ರಧಾನಿ ನರೇಂದ್ರ ಮೋದಿ ನೇತೃ​ತ್ವ​ದಲ್ಲಿ ನಡೆದ ಸಭೆ​ಯ​ಲ್ಲಿ ಗೀತಾ ಪ್ರೆಸ್‌ ಹೆಸರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. 

ಸಮಾಜದಲ್ಲಿ ಅಹಿಂಸೆಯ ಮಾರ್ಗದಲ್ಲಿ ಮಾನವೀಯ ಮೌಲ್ಯಗಳ ಮೇಲೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಉನ್ನತಿಗೆ ಕೆಲಸ ಮಾಡಿದ ಗೀತಾ ಪ್ರೆಸ್‌ ಕೊಡುಗೆಯನ್ನು ಸ್ಮರಿಸಿದ ಮೋದಿ, ಪ್ರೆಸ್‌ ಸ್ಥಾಪನೆಯಾಗಿ ಸರಿ​ಯಾಗಿ 100 ವರ್ಷಕ್ಕೆ ಈ ಪ್ರಶಸ್ತಿ ಲಭಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದಿದ್ದಾ​ರೆ. ಗೀತಾ ಪ್ರೆಸ್‌ ಈವರೆಗೂ 14 ಭಾಷೆಗಳಲ್ಲಿ 41.7 ಕೋಟಿ ಪುಸ್ತಕಗಳನ್ನು ಪ್ರಕಟಿಸಿದ್ದು, ಅದರಲ್ಲಿ 16.21 ಕೋಟಿ ಭಗವದ್ಗೀತೆ ಪುಸ್ತಕಗ​ಳೇ ಆಗಿ​ವೆ.

ಆದರೆ ಗೀತಾ ಪ್ರೆಸ್‌ಗೆ ಈ ಪ್ರಶಸ್ತಿ ನೀಡುತ್ತಿರುವುದಕ್ಕೆ ಕಾಂಗ್ರೆಸ್ ಕೆಂಡಾಮಂಡಲವಾಗಿದೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಆಕ್ರೋಶ ಹೊರ ಹಾಕಿದ ಕಾಂಗ್ರೆಸ್ ನಾಯಕ ಜೈ ರಾಮ್ ರಮೇಶ್‌,’ ಈ ವರ್ಷ ತನ್ನ ಶತಮಾನೋತ್ಸವವನ್ನು ಆಚರಿಸುತ್ತಿರುವ ಗೋರಖ್‌ಪುರದ ಗೀತಾ ಪ್ರೆಸ್‌ಗೆ 2021 ರ ಗಾಂಧಿ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ. ಅವರ ಪ್ರಕಾಶನದ 2015ರಲ್ಲಿ ಬಿಡಗಡೆಯಾದ ಬಹಳ ಉತ್ತಮ ಜೀವನ ಚರಿತ್ರೆಯಲ್ಲಿ ಮುಕುಲ್ ಅವರು ಮಹಾತ್ಮ ಗಾಂಧಿ ಜೊತೆ ಹೊಂದಿದ್ದ ಕಾದಾಟದ ಸಂಬಂಧದ ಬಗ್ಗೆ ಹಾಗೂ ಅವರ ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯ ವ್ಯವಸ್ಥೆಯಲ್ಲಿ ಅವರೊಂದಿಗೆ ನಡೆಸಿದ ಹೋರಾಟದ ಬಗ್ಗೆ ಬಹಿರಂಗಪಡಿಸಿದ್ದರು. ಹೀಗಿರುವಾಗ ಅಂತವರಿಗೆ ಶಾಂತಿ ಪ್ರಶಸ್ತಿ ನೀಡಿರುವುದು ಹಾಸ್ಯಾಸ್ಪದ ವಿಚಾರವಾಗಿದೆ ಹಾಗೂ ಇದು ಒಂದು ರೀತಿಯಲ್ಲಿ ಸಾರ್ವಕರ್ ಹಾಗೂ ಗೋಡ್ಸೆಗೆ ಪ್ರಶಸ್ತಿ ನೀಡಿದಂತೆ ಎಂದು ಜೈ ರಾಮ್ ರಮೇಶ್ ಕಿಡಿಕಾರಿದ್ದಾರೆ.