ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ವಿರುದ್ಧ ಬೆಂಗಳೂರಿನಲ್ಲಿ ದೂರು ದಾಖಲಾಗಿದೆ.
ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ಅವಹೇಳನಕಾರಿ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಹಿನ್ನೆಲೆಯಲ್ಲಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ರಮೇಶ್ ಬಾಬು ಅವರು ದೂರು ನೀಡಿದ್ದಾರೆ
ಕಾಂಗ್ರೆಸ್ ದೇಶದ್ರೋಹ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದೆ ಎಂದು ಅನಿಮೇಷನ್ ವೀಡಿಯೋ ಮೂಲಕ ಪ್ರಕಟಿಸಿ ಅವಹೇಳನ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ದೂರು ನೀಡಿದ ಬಳಿಕ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಬಿಜೆಪಿಯ ಸುಳ್ಳು ಫ್ಯಾಕ್ಟರಿಯನ್ನು ನಾವು ಬಂದ್ ಮಾಡುತ್ತೇವೆ. ಹೋದ ಸಲ ಅವರ ಸರ್ಕಾರದಲ್ಲಿ ಅವರ ಆಟ ನಡೆದಿತ್ತು. ಯಾರು ಶಾಂತಿ ಕದಡುವ ಪ್ರಯತ್ನ ಮಾಡುತ್ತಾರೆ ಅವರ ವಿರುದ್ದ ಕಾನೂನು ಚೌಕಟ್ಟಿನ ಅಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಫ್ಯಾಕ್ಟ್ ಚೆಕ್ ಯುನಿಟ್ ಮೊದಲೇ ಇತ್ತು. ಆದರೆ ಬಿಜೆಪಿ ಪೊಲೀಸ್ ಇಲಾಖೆಯ ಫ್ಯಾಕ್ಟ್ ಚೆಕ್ ಯುನಿಟ್ ಬಂದ್ ಮಾಡಿತ್ತು. ಸ್ವತಃ ಬಿಜೆಪಿಯವರೇ ಫೇಕ್ ನ್ಯೂಸ್ ಗಳನ್ನು ಸೃಷ್ಟಿ ಮಾಡುತ್ತಿದ್ದರು. ಆದರೆ ನಾವು ಇನ್ನು ಮುಂದೆ ಬಿಡುವುದಿಲ್ಲ. ಫ್ಯಾಕ್ಟ್ ಚೆಕ್ ಯುನಿಟ್ ಮತ್ತಷ್ಟು ಪ್ರಬಲಗೊಳಿಸುತ್ತೇವೆ. ಈಗಾಗಲೇ ಸಿಎಂ ಜೊತೆ ನಾವು ಮಾತನಾಡಿದ್ದೇನೆ. ಕೋಮುಗಲಭೆ, ಶಾಂತಿ ಕದಡುವ ಪೋಸ್ಟ್ ಗಳನ್ನು ಮಾಡಿದರೆ ಅಂಥವರ ವಿರುದ್ದ ಸೂಕ್ತ ಕ್ರಮ ಜರುಗಿಸುತ್ತೇವೆ. ಗೃಹ ಇಲಾಖೆ ಜೊತೆಗೆ ಮಾತನಾಡಿ ಪ್ರತ್ಯೇಕ ತಂಡ ರಚನೆ ಮಾಡುತ್ತೇವೆ ಎಂದು ತಿಳಿಸಿದರು.