ಮಾದರಿಯಾದ ಪ್ರತಿಭಾ ಪುರಸ್ಕಾರ

ಶಿರಸಿಯ ‘ಅನೇಕ’ ಸಾಂಸ್ಕೃತಿಕ ವೇದಿಕೆಯಿಂದ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮತ್ತು ಸಾಮಾಜಿಕವಾಗಿ ಹಿಂದುಳಿದ ಕುಟುಂಬಗಳ ಬಹುಮುಖ ಪ್ರತಿಭೆಯ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಿ ಪ್ರೋತ್ಸಾಹಿಸುವ ಕಾರ್ಯಕ್ರಮ ಜರುಗಿತು.

ಶ್ರೀ ಮಾರಿಕಾಂಬಾ ಸರಕಾರಿ ಪ್ರೌಢಶಾಲೆ ಶಿರಸಿ ಇದರ ಸಭಾಂಗಣದಲ್ಲಿ ದಿನಾಂಕ: 18/06/23 ರಂದು ನಡೆದ ಸರಳ ಸಮಾರಂಭದಲ್ಲಿ ತೀರಾ ಬಡಕುಟುಂಬದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು, ತಂದೆಯನ್ನು ಕಳೆದುಕೊಂಡು ತಾಯಿಯ ಆಶ್ರಯದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು, ತಂದೆ ತಾಯಿ ಇಬ್ಬರಿಂದಲೂ ದೂರವಾಗಿ ಬೇರೊಬ್ಬರ ಆಶ್ರಯದಲ್ಲಿ ಬೆಳೆಯುತ್ತಿರುವ ವಿದ್ಯಾರ್ಥಿಗಳು ಮತ್ತು ದಿನಗೂಲಿಯನ್ನೇ ಆಶ್ರಯಿಸಿಕೊಂಡಂತ ಕುಟುಂಬದ ಕೆಲವು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ಅವರ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ಒಹಿಸಿ ಮಾತನಾಡಿದ ನಿವೃತ್ತ ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಸಿ. ಟಿ. ನಾಯಕ ಮಾತನಾಡಿ ” ಬಹುತೇಕ ಎಲ್ಲ ಸಂಘಟನೆಗಳು ಜಾತಿ, ಧರ್ಮದ ಆಧಾರದ ಮೇಲೆ ಮತ್ತು ತಾಲೂಕು, ಜಿಲ್ಲೆ, ರಾಜ್ಯ ಮಟ್ಟದ ಸಾಧಕ ‌ವಿದ್ಯರ್ಥಿಗಳನ್ನು ಗುರುತಿಸುತ್ತಿರುವಾಗ. ‘ ಈ ಅನೇಕ’ ಸಾಂಸ್ಕೃತಿಕ ಸಂಘಟನೆಯು ಬಡತನ, ಸಾಮಾಜಿಕವಾಗಿ ಹಿಂದುಳಿದ ಅಥವಾ ಕೌಟುಂಬಿಕ ‘ಸಮಸ್ಯೆಯ ಬೆಂಕಿಯಲ್ಲಿ ಅರಳುತ್ತಿರುವ’ ವಿದ್ಯಾರ್ಥಿಗಳನ್ನು ಗುರುತಿಸಿ, ಬೆನ್ನು ತಟ್ಟುತ್ತಿರುವುದು ಮಾದರಿಯಾಗಿದೆ ಮತ್ತು ಈ ಕೆಲಸ ಜೊತೆಗೆ ನಾವೆಲ್ಲರೂ ಕೈಜೋಡಿಸ ಬೇಕಿದೆ” ಅಂದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಸರಕಾರಿ ಪದವಿ ಪೂರ್ವ ಕಾಲೇಜು ಬನವಾಸಿ ಶಿರಸಿ ಇದರ ಸಮಾಜಶಾಸ್ತ್ರ ಉಪನ್ಯಾಸಕಿ ತನುಜಾ ನಾಯ್ಕ ತಮ್ಮ ಮಾತಿನಲ್ಲಿ ” ಈ ಎಲ್ಲ ವಿದ್ಯಾರ್ಥಿಗಳು ಬಡತನ ಮತ್ತು ಮನೆಯ ಇತರೆ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಮುಂದೆ ನಡೆಯಬೇಕು. ನಿಮ್ಮ ಜೊತೆಯಲ್ಲಿ ನಮ್ಮ ‘ಅನೇಕ’ ಸಾಂಸ್ಕೃತಿಕ ವೇದಿಕೆ ಬೆಂಬಲಕ್ಕೆ ನಿಂತಿದೆ. ಈ ಸಂಸ್ಥೆಯ ಸಂಚಾಲಕರಾದ ಉಮೇಶ ನಾಯ್ಕ ಮತ್ತು ಅವರ ಬಳಗವು ಜಾತಿ,ಧರ್ಮದ ಗೋಡೆಯನ್ನು ದಾಟಿ ಕೆಲಸ ಮಾಡುತ್ತಲಿದೆ. ಇದರ ಸದುಪಯೋಗ ಎಲ್ಲ ಮಕ್ಕಳು ಮಾಡಿಕೊಳ್ಳಬೇಕು” ಅಂದರು.

ಅನೇಕ ಸಂಸ್ಕೃತಿ ವೇದಿಕೆಯ ಸಂಚಾಲಕರು ಹಾಗೂ ಕಾರ್ಯಕ್ರಮದ ಸಂಘಟಕರೂ ಆದ ರಾಜ್ಯಶಾಸ್ತ್ರ ಉಪನ್ಯಾಸಕ ಉಮೇಶ್ ನಾಯ್ಕ ತಮ್ಮ ಪ್ರಾಸ್ತಾವಿಕ ಮಾತಿನಲ್ಲಿ ” ಅನೇಕ ಸಾಂಸ್ಕೃತಿಕ ವೇದಿಕೆಯು ವಿದ್ಯಾರ್ಥಿಗಳನ್ನೇ ದೃಷ್ಟಿಯಲ್ಲಿಟ್ಟುಕೊಂಡು ಅವರ ಸಾಮಾನ್ಯ ಶಿಕ್ಷಣದ ಜೊತೆಗೆ ಅವರ ಪ್ರತಿಭೆ ಮತ್ತು ಆಸಕ್ತಿಗಳಾದ ಶಾಸ್ತ್ರೀಯ ಸಂಗೀತ, ಭರತನಾಟ್ಯ, ಸಾಹಿತ್ಯ, ಕಲೆ ಹಾಗೂ ಕ್ರೀಡೆಯನ್ನು ಗುರುತಿಸಿ, ಅವರಿಗೆಬವೇದಿಕೆ ಕಲ್ಪಿಸುವ ಹಾಗೂ ಬೆಂಬಲವಾಗಿ ನಿಲ್ಲುವ ಕೆಲಸ ಮಾಡುತ್ತದೆ. ಇದು ಶಿಕ್ಷಕ ಮಿತ್ರರು ಹಾಗೂ ನಮ್ಮದೇ ಹಳೆಯ ವಿದ್ಯಾರ್ಥಿಗಳ ಬೆಂಬಲದಿಂದ ಸಾಗುತ್ತಿದೆ. ಈ ಸಂಸ್ಥೆಯು ಜಾತಿ ಮತ, ಧರ್ಮದ ಮಿತಿಯನ್ನು ಮೀರಿ ಯೋಚಿಸಿ, ಪ್ರತಿಭಾವಂತ ಹಿಂದುಳಿದ ಕುಟುಂಬದ ಮಕ್ಕಳಿಗಾಗಿಯೇ ಮೀಸಲಾಗಿರುತ್ತದೆ. ಎಲ್ಲರೂ ಕೈಜೋಡಿಸಿ” ಎಂದರು.

2023 ನೇ ಸಾಲಿನ ಎಸ್ ಎಸ್ ಎಲ್.ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಸಿಂಧು ಪಟಗಾರ, ಲಿಖಿತಾ ಮಡಿವಾಳ, ಸ್ಮಿತಾ ಗೌಡ, ಮಾರುತಿ ಚಲವಾದಿ, ಕಾಂಚಿಕಾ ನಾಯ್ಕ, ಪ್ರಕೃತಿ ಹಳ್ಳಿಕೊಪ್ಪದವರಮನೆ, ನಯನಾ ನಾಯ್ಕ, ಚಿನ್ಮಯ್ ಮೊಗೇರ, ಅನುಷಾ ಶೇಟ್, ನಮನ ಗೌಡ್ರು ಮುಂತಾದ ವಿದ್ಯಾರ್ಥಿಗಳಿಗೆ ಅವರ ಪಾಲಕ- ಪೋಷಕ ರೊಂದಿಗೆ ಗೌರವಿಸಲಾಯಿತು. ಕಾರ್ಯಕ್ರಮ ನಿರ್ವಹಣೆ ಶಿಕ್ಷಕಿ ಡಾ. ಯಶೋದ ಕರನಿಂಗ ಮಾಡಿದರು, ಶಿಕ್ಷಕ ಬಿ.ಪಿ. ನಾಯ್ಕ ಸ್ವಾಗತಿಸಿದರು ವಿಕಾಸ ಬಟ್ಟ ಹೆಗ್ಗರಣೆ ವೇದಿಕೆಯಲ್ಲಿ ಉಪಸ್ಥಿತಿರಿದ್ದರು ಹಾಗೂ ಉಪನ್ಯಾಸಕಿ ಮುಕಾಂಬಿಕಾ ನಾಯ್ಕ ಸಹಕರಿದರು.ಕಾರ್ಯಕ್ರಮವು ವಿದ್ಯಾರ್ಥಿ ಪ್ರಥಮ ಯು. ಎನ್. ಈತನ ಭಾವಗೀತೆಯೊಂದಿಗೆ ಆರಂಭವಾಗಿ ಭಾರತಿ ನಾಯ್ಕ ಇವರ ವಂದನಾರ್ಪಣೆಯೊಂದಿಗೆ ಸಂಪನ್ನವಾಯಿತು