ಬತ್ತುತ್ತಿರುವ ಬೆಳಗಾವಿ ಜಿಲ್ಲೆಯ 7 ನದಿಗಳು: ಹುಬ್ಬಳ್ಳಿ-ಧಾರವಾಡ, ಕುಂದಾನಗರಿಯಲ್ಲಿ ನೀರಿಗೆ ಹಾಹಾಕಾರ..!?

ಬೆಳಗಾವಿ: ಜೂನ್ ತಿಂಗಳು ಆರಂಭವಾಗಿ 19 ದಿನ ಕಳೆದರೂ ಗಡಿನಾಡು ಬೆಳಗಾವಿಗೆ ಮುಂಗಾರಿನ ಸುಳಿವೇ ಇಲ್ಲ. ಮಳೆ ಬರಲಿ ಎಂದು ಜನ ಕತ್ತೆ ಮದುವೆ ಹಾಗೂ ದೇವರಿಗೆ ಹರಿಕೆಗಳನ್ನು ತೀರಿಸಿದರೂ ವರುಣರಾಯ ಧರಗೆ ಇಳಿದಿಲ್ಲ. ಇದರಿಂದ ಬೆಳಗಾವಿ ಜಿಲ್ಲೆಯ ಏಳಕ್ಕೆ ಏಳೂ ನದಿಗಳು ಬತ್ತುತ್ತಿದ್ದು, ಬರಗಾಲದ ಕರಿ ಛಾಯೆ ಭೀತಿ ಎದುರಾಗಿದೆ. ಜಿಲ್ಲೆಯ ಕೃಷ್ಣಾ ಮಲಪ್ರಭಾ ಘಟಪ್ರಭಾ, ವೇದಗಂಗಾ, ದೂಧಗಂಗಾ, ಮಾರ್ಕಂಡೇಯ, ಹಿರಣ್ಯಕೇಶಿ ನದಿಗಳ ಒಡಲು ಖಾಲಿಯಾಗುತ್ತಿದ್ದು, ಅನ್ನದಾತರು ಕಂಗೆಟ್ಟಿದ್ದಾರೆ. ಇದೀಗ ಕೃಷಿಕರು ಟ್ಯಾಂಕರ್ ಮೂಲಕ ಭತ್ತದ ಗದ್ದೆಗಳಿಗೆ ನೀರುಣಿಸುತ್ತಿದ್ದಾರೆ.

ಬೆಳಗಾವಿ ನಗರಕ್ಕೆ ನೀರು ಪೂರೈಸುತ್ತಿದ್ದ ರಕ್ಕಸಕೊಪ್ಪ, ಹಿಡಕಲ್ ಜಲಾಶಯದಲ್ಲೂ ನೀರಿನ ಮಟ್ಟ ಗಣನೀಯ ಇಳಿಕೆಯಾಗಿದ್ದು, ಹತ್ತು ದಿನಗಳಿಗೊಮ್ಮೆ ಬೆಳಗಾವಿ ನಗರ ಪ್ರದೇಶದಲ್ಲಿ ನೀರು ಪೂರೈಸಲಾಗುತ್ತಿದೆ. ಮಹಾರಾಷ್ಟ್ರಕ್ಕೆ ನೀರು ಬಿಡುವಂತೆ ಮನವಿ ಮಾಡಬೇಕಂದರೇ ಅಲ್ಲಿಯ ಕೋಯ್ನಾ ಡ್ಯಾಂ ಸಹ ಖಾಲಿಯಾಗಿದೆ.

ರಕ್ಕಸಕೊಪ್ಪ ಜಲಾಶಯದಲ್ಲಿ ಕೇವಲ 16 ಅಡಿ ಆಳದಷ್ಟು ನೀರು ಬಾಕಿ ಇದ್ದು, ಬೆಳಗಾವಿ ನಗರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಇದು ಬೆಳಗಾವಿ ನಗರದ ಕೆಲವು ಶಾಲಾ-ಕಾಲೇಜುಗಳ ಮೇಲೆಯೂ ಪರಿಣಾಮ ಬೀರಿದ್ದು, ಮಕ್ಕಳಿಗೆ ನೀರು ಕೊಡಲು ಆಗದೇ ಗಂಭೀರ ಸ್ಥಿತಿಗೆ ತಲುಪುತ್ತಿವೆ. ನೀರಿನ ಅಭಾವದಿಂದ ಶಾಲೆಗಳಿಗೆ ರಜೆ ನೀಡಲು ಆಡಳಿತ ಮಂಡಳಿಗಳು ನಿರ್ಧರಿಸಿವೆ.