ಹ್ಯಾಂಡ್ ರೈಟಿಂಗ್ ಅಥವಾ ಕೈ ಬರಹ ಚೆನ್ನಾಗಿರಬೇಕೆಂದರೆ ಅದಕ್ಕೆ ಅಷ್ಟೇ ಪರಿಶ್ರಮ ಅಭ್ಯಾಸ ಅಗತ್ಯ. ಕೈ ಬರಹ ಉತ್ತಮವಾಗಲಿ ಎಂಬ ಕಾರಣಕ್ಕೆ ಪ್ರಾಥಮಿಕ ಶಾಲೆಯಲ್ಲಿ ಓದುವ ಮಕ್ಕಳಿಗೆ ಶಿಕ್ಷಕರು ಕಾಪಿ ಬರೆಯಲು ಹೋಮ್ ವರ್ಕ್ ನೀಡುತ್ತಾರೆ. ನೀವು ಕೂಡ ಈ ಕಾಪಿ ಬರೆಯುವ ಹೋಮ್ ವರ್ಕ್‌ನ್ನು ಮಾಡಿರಬಹುದು, ನಿಮ್ಮ ಕೈ ಬರಹವನ್ನು ಸುಂದರವಾಗಿಸುವುದೇ ಈ ಕಾಪಿ ಬರಹದ ಮೂಲ ಉದ್ದೇಶ, ಹೀಗೆ ವರ್ಷಾನುಗಟ್ಟಲೇ ಕಾಪಿ ಬರೆದರು ಕೆಲವರ ಅಕ್ಷರಗಳು ನೋಡಲಾಗದಷ್ಟು ಅರ್ಥವಾಗದಷ್ಟು ಕೆಟ್ಟದಾಗಿರುತ್ತದೆ. ಕೆಟ್ಟದಾದ ಅಕ್ಷರ ನೋಡಿ ಶಿಕ್ಷಕರು ಪೋಷಕರು ಆಹಹಾ ನೋಡು ಕಾಗೆ ಕಾಲ್ ತರ ಇದೆ ನಿನ್ನ ಅಕ್ಷರ ಅಂತ ಬೈಯುವುದನ್ನು ನೀವು ಕೇಳಿರಬಹದು. ಹೀಗಿರುವಾಗ ಪುಟ್ಟ ಬಾಲಕನ ಸುಂದರವಾದ ಕೈ ಬರಹವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಆತನ ಕೈಬರಹ ಮೆಚ್ಚಿ ಕೊಂಡಾಡಿದ್ದಾರೆ.
ಅಂದಹಾಗೆ ಸೆಬಾಸ್ಟಿಯನ್ ಎಂಬ ಹೆಸರಿನ ಆರು ವರ್ಷದ ಹುಡುಗನ ಕೈರಹದ ಚಿತ್ರವಿದು. ಎಷ್ಟು ಚೆನ್ನಾಗಿದೆ ನೋಡಿ ಆತನ ಕೈ ಬರಹಗಳು, ಈ ಪುಟಾಣಿ ಡಿಜಿಟಲ್ ಕ್ರಿಯೇಟರ್‌ಗೆ ಇನ್ಸ್ಟಾಗ್ರಾಮ್‌ನಲ್ಲಿ ಒಂದು ಲಕ್ಷದ 89 ಸಾವಿರ ಫಾಲೋವರ್‌ಗಳಿದ್ದಾರೆ. ತಾನೊಬ್ಬ ಹೈಪರ್ ಲೆಕ್ಸಿಯಾ ಎಂದು ಹೇಳಿಕೊಂಡಿರುವ ಬಾಲಕ ಬಯೋದಲ್ಲಿ ಆತ 18 ತಿಂಗಳು ತುಂಬಿರುವಾಗಲೇ ಓದುವ ಹಾಗೂ ಬರೆಯುವ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ಎಂದು ಬರೆದುಕೊಂಡಿದೆ. (ಹೈಪರ್‌ಲೆಕ್ಸಿಯಾ ಎಂದರೆ ಮಕ್ಕಳಿಗೆ ತಮ್ಮ ವಯಸ್ಸಿಗೆ ಮೀರಿದ, ಅನಿರೀಕ್ಷಿತ (ಓದುವ ಬರೆಯುವ) ಕಲಿಕಾ ಸಾಮರ್ಥ್ಯವಾಗಿದೆ).
ಇಂತಹ ಪುಟ್ಟ ಹುಡುಗನ ಇನ್ಸ್ಟಾಗ್ರಾಮ್ ತುಂಬೆಲ್ಲಾ ತಾನು ಸೀಮೆಸುಣ್ಣ(ಚಾಕ್ ಫೀಸ್) ಬಳಸಿ ಮನೆಯ ಅಂಗಳ ಗೋಡೆ ಎಂಬುದನ್ನು ನೋಡದೇ ಬರೆದು ಅಭ್ಯಾಸ ಮಾಡಿದ ಹಲವು ವೀಡಿಯೋಗಳಿವೆ. ಇಂಗ್ಲೀಷ್ ಅಕ್ಷರಗಳನ್ನು ಇಟಾಲಿಕ್ ಶೈಲಿಯಲ್ಲಿ ಮುದ್ದಾಗಿ ಕೂಡಿಸಿ ಬರೆದಿದ್ದು, ಆತನಷ್ಟೇ ಮುದ್ದು ಮುದ್ದಾಗಿವೆ ಪುಟಾಣಿಯ ಈ ಅಕ್ಷರಗಳು. ಅಲ್ಲದೇ ಅಮೆರಿಕಾ ಪ್ರತಿಷ್ಠಿತ ಸ್ಪೆಲ್ಲಿಂಗ್ ಬಿ ಚಾಂಪಿಯನ್‌ಶಿಪ್‌ನಲ್ಲೂ ಭಾಗವಹಿಸುವ ಗುರಿಯನ್ನು ಬಾಲಕ ಹೊಂದಿದ್ದಾನೆ. ಇದರ ಜೊತೆಗೆ ಈ ಬಾಲಕ ಪೆನ್ ಹಿಡಿಯುವ ಶೈಲಿಯೇ ಒಂದು ಅದ್ಭುತ. ಆತ ಹಿಡಿದಂತೆ ನಾವು ಪೆನ್ ಪೆನ್ಸಿಲ್ ಹಿಡಿದು ಬರೆಯಲು ಹೋದರೆ ಅದು ಕಾಗೆ ಕಾಲಾಗುವುದಂತೂ ಪಕ್ಕಾ. ಆತ ಬರೆಯುವ ಶೈಲಿಯನ್ನು ನೀವು ವೀಡಿಯೋದಲ್ಲೇ ನೋಡಬೇಕು.
ಇದರ ಜೊತೆಗೆ ಬಾಲಕ ಮ್ಯಾಕ್ ಡೊನಾಲ್ಡ್‌ನ ಲೋಗೋ ಕ್ವಿಜ್‌ನಲ್ಲಿಯೂ ಭಾಗವಹಿಸಿದ್ದು, ನಮಗೆ ನೋಡುವಾಗಲೇ ಇದನ್ನು ಮಾಡುವುದು ಬಲು ಕಷ್ಟ ಎನಿಸುವ ಅಕ್ಷರಗಳನ್ನು ಬಾಲಕ ಬಹಳ ಮುದ್ದಾಗಿ ಅಷ್ಟೇ ನೀಟಾಗಿ ಬರೆಯುವುದು ನೋಡಿದರೆ ಈತನೋರ್ವ ಎಕ್ಟ್ರಾರ್ಡಿನರಿ ಹುಡುಗ ಎಂಬುದನ್ನು ಯಾವುದೇ ಸಂಶಯವಿಲ್ಲದೇ ಹೇಳಬಹುದಾಗಿದೆ.
ಅನೇಕರು ಈ ಪುಟ್ಟ ಬಾಲಕನ ವೀಡಿಯೋ ನೋಡಿ ನಾವು ನಮ್ಮ ಜೀವಮಾನದಲ್ಲೇ ಇಷ್ಟೊಂದು ಸುಂದರ ಕೈ ಬರಹವನ್ನು ಎಂದು ನೋಡಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದರೆ ಮತ್ತೊಬ್ಬರು ಈ ಅಕ್ಷರ ತುಂಬಾ ಚೆನ್ನಾಗಿದೆ ನಾನು ಎಂದಿಗೂ ಇಂತಹ ಅಕ್ಷರಗಳನ್ನು ನೋಡಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅವನೋರ್ವ ಅವನು ಕ್ಯಾಲಿಗ್ರಾಫರ್ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.