ಬೆಂಗಳೂರು: ವರ್ಕ್ ಫ್ರಂ ಹೋಂ ಮತ್ತು ವರ್ಕ್ ಫ್ರಂ ಆಫೀಸ್ ದ್ವಂದ್ವದಲ್ಲಿ ಕಂಪನಿಗಳು ಮತ್ತು ಉದ್ಯೋಗಿಗಳ ಮಧ್ಯೆ ಕೆಲವೆಡೆ ಹಗ್ಗ ಜಗ್ಗಾಟ ನಿಲ್ಲುತ್ತಿಲ್ಲ. 3 ವರ್ಷಗಳಿಂದ ಮನೆಯಿಂದ ಕೆಲಸ ಮಾಡುತ್ತಾ ಒಗ್ಗಿಹೋಗಿರುವ ಕೆಲ ಉದ್ಯೋಗಿಗಳು ಕಚೇರಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಮನೆಯಿಂದ ಕೆಲಸ ಮಾಡಲು ಬಿಟ್ಟಿದ್ದೇ ದೊಡ್ಡ ತಪ್ಪಾಯಿತು ಎಂದು ಕೊರೋನಾಗೆ ಹಿಡಿಶಾಪ ಹಾಕುತ್ತಿರುವ ಐಟಿ ಕಂಪನಿಗಳು, ಮನೆಗಂಟಿಕೊಂಡಿರುವ ಉದ್ಯೋಗಿಗಳನ್ನು ಕಚೇರಿಗೆ ಕರೆತರಲು ಸಾಮ ದಾನ ಭೇದ ಇತ್ಯಾದಿ ನಾನಾ ಅಸ್ತ್ರಗಳನ್ನು ಪ್ರಯೋಗಿಸುತ್ತಿವೆ.
ಅಮೆರಿಕ ಮತ್ತು ಕೆನಡಾದಲ್ಲಿರುವ ತನ್ನ ಉದ್ಯೋಗಿಗಳಿಗೆ ದಂಡಂ ದಶಗುಣಂ ಬೆದರಿಕೆ ಹಾಕುತ್ತಿರುವುದು ತಿಳಿದುಬಂದಿದೆ. ಕಚೇರಿಗೆ ಬಂದೇ ಕೆಲಸ ಮಾಡಬೇಕು, ಇಲ್ಲವಾದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಇನ್ಫೋಸಿಸ್ ಸಂಸ್ಥೆ ತನ್ನ ಆ ದೇಶಗಳಲ್ಲಿನ ಉದ್ಯೋಗಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ವರ್ಕ್ ಫ್ರಂ ಹೋಮ್ ಮಾಡಲೇಬೇಕೆಂದರೆ ಅಂಥ ಉದ್ಯೋಗಿಗಳು ವಿಶೇಷ ಅನುಮತಿ ಪಡೆಯಬೇಕು ಎಂದು ಕಟ್ಟುನಿಟ್ಟಾಗಿ ತಿಳಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ವರದಿಯಾಗಿದೆ.
ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿರುವ ಇನ್ಫೋಸಿಸ್, ಭಾರತದಲ್ಲಿನ ತನ್ನ ಉದ್ಯೋಗಿಗಳನ್ನು ಕಚೇರಿಗೆ ಬಂದು ಕೆಲಸ ಮಾಡಿಸಿಕೊಳ್ಳುವ ಪ್ರಯತ್ನ ಮುಂದುವರಿಸಿದೆ. ಆದರೆ, ಶಿಸ್ತುಕ್ರಮದ ಎಚ್ಚರಿಕೆಯನ್ನು ಭಾರತದಲ್ಲಿರುವ ಉದ್ಯೋಗಿಗಳಿಗೆ ಸದ್ಯಕ್ಕೆ ಅದು ನೀಡಿಲ್ಲ. ಆದರೆ, ಅಮೆರಿಕ ಮತ್ತು ಕೆನಡಾದಲ್ಲಿರುವ ಅದರ 30,000 ಉದ್ಯೋಗಿಗಳಲ್ಲಿ ಬಹಳ ಮಂದಿ ಕಚೇರಿಗೆ ಬಂದು ಕೆಲಸ ಮಾಡಲು ಸಿದ್ಧರಿಲ್ಲ. ಇದು ಅಲ್ಲಿನ ಇನ್ಫೋಸಿಸ್ ಉದ್ಯೋಗಿಗಳ ಕಥೆ ಮಾತ್ರವಲ್ಲ ಬಹುತೇಕ ಎಲ್ಲಾ ಕಂಪನಿಗಳದ್ದೂ ಹೌದು. ಅಮೆರಿಕದಲ್ಲಿ ಮನೆಯಿಂದ ಕೆಲಸ ಮಾಡುತ್ತಿರುವವರಲ್ಲಿ ಹೆಚ್ಚಿವನರು ಕಚೇರಿಗೆ ಬರಲು ಒಪ್ಪುತ್ತಿಲ್ಲ. ಕೆಲಸ ಹೋದರೂ ಪರವಾಗಿಲ್ಲ, ಮನೆಯಿಂದಲೇ ಕೆಲಸ ಮಾಡುತ್ತೇವೆ ಎಂದು ಅವರು ಹೇಳುತ್ತಿದ್ದಾರೆ ಎನ್ನುವಂತಹ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದವು.
ವರ್ಕ್ ಫ್ರಂ ಹೋಮ್ ಮಾಡುವವರ ವಿಶೇಷ ಅನುಮತಿ ಹೇಗೆ?
ಅಮೆರಿಕದ ನಮ್ಮ ಉದ್ಯೋಗಿಗಳು ದೇಶದ ಹೊರಗೆ ಪ್ರವಾಸದಲ್ಲಿದ್ದಾಗ ಕೆಲಸ ಮಾಡಲು ವಿಶೇಷ ಅನುಮತಿ ಪಡೆಯಬೇಕು. ವರ್ಕ್ ಫ್ರಂ ಹೋಂ ಅನುಮತಿಗಾಗಿ ಅರ್ಜಿ ಹಾಕುವಾಗ ಉದ್ಯೋಗಿಗಳು ತಮ್ಮ ಮನೆಯ ವಿಳಾಸ ಕೊಡಬೇಕು. ವರ್ಕ್ ಫ್ರಂ ಹೋಂ ಅನುಮತಿ ಸಿಕ್ಕಾಕ್ಷಣ ಆ ಅವಕಾಶ ಖಾಯಂ ಆಗಿರುವುದಿಲ್ಲ ಎಂದು ಇನ್ಫೋಸಿಸ್ ಸಂಸ್ಥೆ ಅಮೆರಿಕ ಮತ್ತು ಕೆನಡಾದಲ್ಲಿರುವ ತನ್ನ 30,000ಉದ್ಯೋಗಿಗಳಿಗೆ ತಿಳಿಸಿದೆ.
ಈ ಎಚ್ಚರಿಕೆಯ ಸಂದೇಶವು ಇನ್ಫೋಸಿಸ್ನ ಭಾರತೀಯ ಉದ್ಯೋಗಿಗಳಿಗೆ ಸದ್ಯಕ್ಕೆ ಅನ್ವಯ ಆಗುವುದಿಲ್ಲ. ದೇಶೀಯ ಉದ್ಯೋಗಿಗಳಿಗೆ ಇನ್ಫೋಸಿಸ್ ಇನ್ನೂ ಸಾಮ, ದಾನದ ಹಂತದಲ್ಲಿದ್ದಂತಿದೆ.
ಟಿಸಿಎಸ್ನಲ್ಲಿ ಮಾಸ್ ರೆಸಿಗ್ನೇಶನ್
ಇದೇ ವೇಳೆ, ಟಿಸಿಎಸ್ ಸಂಸ್ಥೆಯಲ್ಲಿ ಮಹಿಳಾ ಉದ್ಯೋಗಿಗಳ ಸಮೂಹಿಕ ರಾಜೀನಾಮೆ ಕೊಡುತ್ತಿರುವ ಸುದ್ದಿ ಇಲ್ಲಿ ಉಲ್ಲೇಖಿಸಬಹುದು. ವರ್ಕ್ ಫ್ರಂ ಹೋಮ್ ಅನ್ನು ರದ್ದು ಮಾಡಿದ ಕಾರಣಕ್ಕೆ ಟಿಸಿಎಸ್ನ ಮಹಿಳಾ ಉದ್ಯೋಗಿಗಳು ಕೆಲಸ ಬಿಡುತ್ತಿದ್ದಾರೆನ್ನಲಾಗಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಂಸ್ಥೆಯಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆ ಗಮನಾರ್ಹ ಮಟ್ಟದಲ್ಲಿದೆ