ಜೈಪುರ: ಆಸ್ಪತ್ರೆಯಲ್ಲಿ ವೀಲ್‌ಚೇರ್‌ಗಳು ಹಾಗೂ ಸ್ಟ್ರೆಚರ್‌ಗಳ ಕೊರತೆಯ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ತಮ್ಮ ಸ್ಕೂಟಿ ಮೂಲಕ ಕಾಲು ಮುರಿದ ರೋಗಿಯನ್ನು ಮೂರನೇ ಅಂತಸ್ತಿಗೆ ಕರೆದೊಯ್ದಿದಿದ್ದಾರೆ. ಸ್ಕೂಟಿ ಮೂಲಕ ಆಸ್ಪತ್ರೆ ಪ್ರವೇಶಿಸಿ ಲಿಫ್ಟ್ ಮೂಲಕ ತೆರಳುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ರಾಜಸ್ಥಾನದ ಕೋಟಾದಲ್ಲಿ ಈ ಘಟನೆ ನಡೆದಿದ್ದು ಸ್ಕೂಟಿ ಚಲಾಯಿಸಿದ ವ್ಯಕ್ತಿಯ ಪ್ರಕಾರ, ಕಾಲು ಮುರಿದ ಮಗನಿಗೆ ಪ್ಲಾಸ್ಟರ್ ಮಾಡಿಸಲು ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ವೀಲ್‌ಚೇರ್‌ಗಳು, ಸ್ಟ್ರೆಚರ್‌ಗಳ ಕೊರತೆಯ ಹಿನ್ನೆಲೆಯಲ್ಲಿ ಆಸ್ಪತ್ರೆಯ ಆಡಳಿತ ಮಂಡಳಿಯಿಂದ ಅನುಮತಿ ಪಡೆದು ಮೂರನೇ ಮಹಡಿಗೆ ತೆರಳಲು ಸ್ಕೂಟರ್ ಮೂಲಕ ವ್ಯವಸ್ಥೆ ಮಾಡಿದೆ ಎಂದು ತಿಳಿಸಿದ್ದಾರೆ.
ವೈರಲ್ ವೀಡಿಯೋದಲ್ಲಿ ವ್ಯಕ್ತಿ ಸ್ಕೂಟರ್‌ನಲ್ಲಿ ಹೋಗುವಾಗ ಲಿಫ್ಟ್ ತೆಗೆದುಕೊಳ್ಳುತ್ತಿರುವುದನ್ನು ಕಾಣಬಹುದು. ಅವರ ಮಗ ಸ್ಕೂಟರ್‌ನ ಹಿಂಭಾಗದಲ್ಲಿ ಪ್ಲಾಸ್ಟೆಡ್ ಪಾದದೊಂದಿಗೆ ಕುಳಿತಿರುವುದು ಗಮನಿಸಬಹುದು
ಈ ಘಟನೆ ಬಳಿಕ ವ್ಯಕ್ತಿಯ ನಡೆಯ ಬಗ್ಗೆ ಆಕ್ಷೇಪ ಕೇಳಿ ಬಂದಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ವ್ಯಕ್ತಿಯನ್ನು ಸಮರ್ಥಿಸಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ವೀಲ್‌ಚೇರ್‌ಗಳು, ಸ್ಟ್ರೆಚರ್‌ಗಳ ಕೊರತೆಯಿಂದ ಅನುಮತಿ ಪಡೆದು ಈ ಕೆಲಸ ಮಾಡಿದೆ. ರೋಗಿಗಳಿಗೆ ಸಮಸ್ಯೆಯಾದರೆ ದೇವರು ಬರುವುದಿಲ್ಲ, ಸಂಬಂಧಿಕರೇ ಬರಬೇಕು ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆಸ್ಪತ್ರೆ ಸಿಬ್ಬಂದಿ, ಆಸ್ಪತ್ರೆಯ ಆಡಳಿತ ಮಂಡಳಿ ಮತ್ತು ವೈದ್ಯರು ಆಸ್ಪತ್ರೆ ಆವರಣದೊಳಗೆ ಸ್ಕೂಟರ್ ಬಿಡಲು ಅನುಮತಿ ನೀಡಿಲ್ಲ. ಆದರೆ ಸ್ಟ್ರೆಚರ್‌ಗಳ ಕೊರತೆ ಇರುವುದು ನಿಜ. ಆಸ್ಪತ್ರೆಯಿಂದ ಕಳುಹಿಸಿದ ಗಾಲಿಕುರ್ಚಿಗಳ ಪ್ರಸ್ತಾಪವನ್ನು ಉನ್ನತ ಅಧಿಕಾರಿಗಳು ರದ್ದುಗೊಳಿಸಿದ್ದಾರೆ. ಶೀಘ್ರದಲ್ಲಿ ಸಮಸ್ಯೆ ಪರಿಹರಿಸಲಾಗುವುದು ಎಂದು ಹೇಳಿದ್ದಾರೆ.