ಬರ್ಮಿಂಗ್ಹ್ಯಾಮ್(ಜೂ.16): ಇಂಗ್ಲೆಂಡ್ ಹಾಗೂ ಆಸ್ಪ್ರೇಲಿಯಾ ನಡುವಿನ ಮಹತ್ವದ 5 ಪಂದ್ಯಗಳ ಆ್ಯಷಸ್ ಟೆಸ್ಟ್ ಸರಣಿ ಶುಕ್ರವಾರದಿಂದ ಆರಂಭಗೊಳ್ಳಲಿದ್ದು, ಮೊದಲ ಪಂದ್ಯಕ್ಕೆ ಬರ್ಮಿಂಗ್ಹ್ಯಾಮ್ ಆತಿಥ್ಯ ವಹಿಸಲಿದೆ. ಇದು 2023-25ರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ನ ಮೊದಲ ಸರಣಿಯಾಗಿದ್ದು, ಬದ್ಧವೈರಿಗಳ ನಡುವಿನ ಕಾದಾಟ ಕುತೂಹಲ ಮೂಡಿಸಿದೆ.
ಆಸ್ಪ್ರೇಲಿಯಾದಲ್ಲಿ ನಡೆದಿದ್ದ 2021-22ರ ಸರಣಿಯಲ್ಲಿ ಇಂಗ್ಲೆಂಡ್ ಎದುರು ಆಸೀಸ್ 4-0 ಕ್ಲೀನ್ ಸ್ವೀಪ್ ಸಾಧಿಸಿತ್ತು. ಇಂಗ್ಲೆಂಡ್ 2015ರಲ್ಲಿ ಕೊನೆ ಬಾರಿ ಸರಣಿ ಗೆದ್ದಿದ್ದು, ಈ ಬಾರಿ ತವರಿನಲ್ಲಿ ಮತ್ತೊಮ್ಮೆ ಸರಣಿ ಕೈವಶಪಡಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಇತ್ತೀಚೆಗಷ್ಟೇ ಇಂಗ್ಲೆಂಡ್ನಲ್ಲೇ ಭಾರತವನ್ನು ಮಣಿಸಿ ಟೆಸ್ಟ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಚೊಚ್ಚಲ ಬಾರಿ ಪ್ರಶಸ್ತಿ ಗೆದ್ದಿದ್ದ ಆಸೀಸ್ ತುಂಬು ಆತ್ಮವಿಶ್ವಾಸದೊಂದಿಗೆ ಸರಣಿಗೆ ಕಾಲಿಡಲಿದೆ.
ಬಜ್ ಬಾಲ್ ಆಟ ಮುಂದುವರೆಸುತ್ತೇವೆ ಎಂದ ಬೆನ್ ಸ್ಟೋಕ್ಸ್: ಜೋ ರೂಟ್ ನಾಯಕತ್ವದ ಕ್ರಿಸ್ ಸಿಲ್ವರ್‌ವುಡ್ ಮಾರ್ಗದರ್ಶನದಲ್ಲಿ ಇಂಗ್ಲೆಂಡ್ ತಂಡವು ಹೀನಾಯ ಸೋಲಿನತ್ತ ಮುಖ ಮಾಡಿತ್ತು. ಬೆನ್ ಸ್ಟೋಕ್ಸ್ ಟೆಸ್ಟ್ ನಾಯಕರಾಗಿ ಬ್ರೆಂಡನ್ ಮೆಕ್ಕಲಂ ಮಾರ್ಗದರ್ಶನದಲ್ಲಿ ಇಂಗ್ಲೆಂಡ್ ತಂಡವು ಆಕ್ರಮಣಕಾರಿ ಆಟದ ಮೂಲಕ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಬಜ್ ಬಾಲ್ ಶೈಲಿಯ ಮೂಲಕ ಇಂಗ್ಲೆಂಡ್ ತಂಡವು ಕಳೆದ 13 ಟೆಸ್ಟ್ ಪಂದ್ಯಗಳ ಪೈಕಿ 11 ಪಂದ್ಯಗಳಲ್ಲಿ ಗೆಲುವಿನ ಗೆಲುವಿನ ನಗೆ ಬೀರಿದೆ.