ಸಮುದ್ರದ ಆಳ ಎಷ್ಟು ಇದೆ ಎಂದು ತೋರಿಸಲು ನೀರಿಗೆ ಹಾರಿ ಲೈವ್ ರಿಪೋರ್ಟಿಂಗ್ ಮಾಡಿದ ಪಾಕ್ ಪತ್ರಕರ್ತ

ಪಾಕಿಸ್ತಾನದ ಕರಾಚಿಯಲ್ಲಿ ಪತ್ರಕರ್ತರೊಬ್ಬರ ಹವಾಮಾನ ವರದಿಗಾರಿಕೆ ವೈರಲ್ ಆಗಿದೆ. ವೈರಲ್ ವಿಡಿಯೊದಲ್ಲಿ ಮಧ್ಯ ವಯಸ್ಕರೊಬ್ಬರು ಬಹಳ ಜೋಶ್​​​ನಿಂದ ಲೈವ್ ರಿಪೋರ್ಟಿಂಗ್ ಮಾಡುವುದನ್ನು ಕಾಣಬಹುದು. ಅವರು ಸಮುದ್ರದ ಆಳ ಎಷ್ಟು ಇದೆ ಎಂಬುದನ್ನು ಮೊದಲು ಹೇಳುತ್ತಾರೆ. ನಂತರ ಇದರ ಆಳ ಎಷ್ಟಿದೆ ಅಂದರೆ ನೋಡಿ ಎಂದು ಮೈಕ್ರೋಫೋನ್ ಹಿಡಿದುಕೊಂಡೇ ನೀರಿಗೆ ಹಾರುತ್ತಾರೆ. ಅಲ್ಲಿರುವ ಜನರು ನಗುವ ಸದ್ದೂ ವಿಡಿಯೊದಲ್ಲಿ ಕೇಳಿಸುತ್ತದೆ. ನೀರಿನಲ್ಲಿ ನಿಂತು ನೋಡಿ ಇಷ್ಟು ಆಳ ಇದೆ ಎಂದು ಅವರು ಹೇಳುತ್ತಾರೆ. ಮತ್ತೊಮ್ಮೆ ನೀರಿನಲ್ಲಿ ಮುಳುಗಿ, ಇದು ತುಂಬಾ ಆಳವಾಗಿದೆ, ಅದಕ್ಕೆ ತಳವಿಲ್ಲ ಅಂತಾರೆ.

ಹೀಗೆ ಲೈವ್ ರಿಪೋರ್ಟಿಂಗ್ ಮಾಡಿದ ವ್ಯಕ್ತಿ ಕ್ಯಾಮೆರಾಮೆನ್ ತೈಮೂರ್ ಖಾನ್ ಜತೆ ಅಬ್ದುಲ್ ರೆಹಮಾನ್ ಖಾನ್, ಅಬ್ದುಲ್ ರೆಹಮಾನ್ ನ್ಯೂಸ್‌ ಕರಾಚಿ ಎಂದು ಹೇಳಿ ಸುದ್ದಿ ಮುಗಿಸುತ್ತಾರೆ. ಆದಾಗ್ಯೂ, ಈ ವ್ಯಕ್ತಿ ವೃತ್ತಿಪರ ವರದಿಗಾರನೇ ಅಥವಾ ಮನರಂಜನಾ ಉದ್ದೇಶಗಳಿಗಾಗಿ ಈ ವಿಡಿಯೊ ಮಾಡಿದ್ದಾನೆಯೇ ಎಂಬುದು ಗೊತ್ತಿಲ್ಲ.

ಈ ಹಿಂದೆ 2008 ರಲ್ಲಿ ಇದೇ ರೀತಿಯ ವಿಡಿಯೊವೊಂದು ವೈರಲ್ ಆಗಿತ್ತು. ಪಾಕಿಸ್ತಾನಿ ಟಿವಿ ವರದಿಗಾರ ಚಾಂದ್ ನವಾಬ್‌ ಕರಾಚಿ ರೈಲು ನಿಲ್ದಾಣದಲ್ಲಿ ಈದ್ ಹಬ್ಬದ ಅವ್ಯವಸ್ಥೆಯ ಬಗ್ಗೆ ವರದಿ ಮಾಡುವಾಗ, ಅಲ್ಲಿ ಹಾದು ಹೋಗುವವರು ಪದೇ ಪದೇ ಕ್ಯಾಮೆರಾ ಮುಂದೆ ಬಂದು ಅಡಚಣೆಯುಂಟು ಮಾಡುತ್ತಿದ್ದರು. ಆಗ ಚಾಂದ್ ನವಾಬ್ ಪ್ರತಿಕ್ರಿಯಿಸುವ ರೀತಿ, ಆತನ ವರದಿಗಾರಿಕೆಯ ವಿಡಿಯೊ ವೈರಲ್ ಆಗಿತ್ತು .

ಈ ವೈರಲ್ ವಿಡಿಯೊದಿಂದ ಸ್ಫೂರ್ತಿ ಪಡೆದ ಭಾರತೀಯ ಚಲನಚಿತ್ರ ನಿರ್ಮಾಪಕ ಕಬೀರ್ ಖಾನ್ 2015 ರ ಚಲನಚಿತ್ರ ‘ಬಜರಂಗಿ ಭಾಯಿಜಾನ್’ ನಲ್ಲಿ ನವಾಜುದ್ದೀನ್ ಸಿದ್ದಿಕಿ , ಚಾಂದ್ ನವಾಬ್​​ನಂತೆ ವರದಿಗಾರಿಕೆ ಮಾಡುವ ದೃಶ್ಯವೊಂದನ್ನು ಸಿನಿಮಾದಲ್ಲಿ ತೋರಿಸಿದ್ದರು.