ಯೂಟ್ಯೂಬ್​ನಿಂದ ಹಣ ಮಾಡಬೇಕೆನ್ನುವವರಿಗೆ ಖುಷಿ ಸುದ್ದಿ; 500 ಸಬ್​ಸ್ಕ್ರೈಬರ್ಸ್ ಇದ್ದರೆ ಸಾಕಂತೆ… ಬದಲಾಗಿದೆ 3 ಮಾನದಂಡಗಳು

ವಿಶ್ವದ ಅತಿದೊಡ್ಡ ವಿಡಿಯೋ ಪ್ಲಾಟ್​ಫಾರ್ಮ್ ಎನಿಸಿದ ಯೂಟ್ಯೂಬ್​ನಲ್ಲಿ ಬಹಳ ಜನರು ವಿಡಿಯೋಗಳನ್ನು ಹಾಕುತ್ತಾ ಬಹಳಷ್ಟು ಹಣ ಮಾಡುವುದನ್ನು ನೋಡುತ್ತಿದ್ದೇವೆ, ಕೇಳುತ್ತಿದ್ದೇವೆ. ಬಹಳಷ್ಟು ಜನರು ಕೆಲಸ ಬಿಟ್ಟು ಪೂರ್ಣಾವಧಿ  ಯೂಟ್ಯೂಬ್ ವಿಡಿಯೋ ಮಾಡಿಕೊಂಡೇ ಜೀವನ ನಡೆಸುತ್ತಿದ್ದಾರೆ. ಹಲವು ಮಾಧ್ಯಮಗಳಿಗಂತೂ ಯೂಟ್ಯೂಬ್ ಅತಿದೊಡ್ಡ ಆದಾಯಮೂಲವಾಗಿದೆ. ಆದರೆ, ಯೂಟ್ಯೂಬ್​ನಿಂದ ಹಣ ಮಾಡಬೇಕಾದರೆ ಯೂಟ್ಯೂಬ್ ಪಾರ್ಟ್ನರ್  ಅರ್ಹತೆ ಪಡೆಯಬೇಕು. ಖುಷಿ ಸುದ್ದಿ ಎಂದರೆ ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಮ್​ಗೆ ಬೇಕಾದ ಅರ್ಹತಾ ಮಾನದಂಡಗಳನ್ನು  ಸಡಿಲಿಸಲಾಗುತ್ತಿದೆ. ಇದೇನಾದರೂ ಜಾರಿಯಾದರೆ ಯೂಟ್ಯೂಬ್​ನಲ್ಲಿ ಹಣ ಮಾಡುವ ಕಾಯಕ ಶುರು ಮಾಡಬಯಸುವವರಿಗೆ ಈ ಕೆಲಸ ಹೆಚ್ಚು ಸುಲಭವಾಗಲಿದೆ.

ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಮ್ ಹೊಂದಬೇಕಾದರೆ ಕೆಲವೊಂದಿಷ್ಟು ಮಾನದಂಡಗಳಿವೆ. ಅದರಲ್ಲಿ 1000 ಸಬ್​ಸ್ಕ್ರೈಬರ್ಸ್ ಹೊಂದಿರಬೇಕು; ಒಟ್ಟು ವಿಡಿಯೋಗಳು 4,000 ಗಂಟೆಗಳ ವೀಕ್ಷಣೆ ಪಡೆದಿರಬೇಕು; ಯೂಟ್ಯೂಬ್ ಶಾರ್ಟ್ಸ್ ವಿಡಿಯೋಗಳು 1 ಕೋಟಿ ವೀಕ್ಷಣೆ ಹೊಂದಿರಬೇಕು ಎಂಬಿತ್ಯಾದಿ ಷರತ್ತುಗಳಿವೆ.

ಈಗ ಇದರಲ್ಲಿ ಮೂರು ಮಾನದಂಡಗಳನ್ನು ಸಡಿಲಿಸಲಾಗಿದೆ. ಒಂದು ಸಾವಿರ ಬದಲಿಗೆ 500 ಸಬ್​ಸ್ಕ್ರೈಬರ್ಸ್ ಹೊಂದಿದ್ದರೆ ಸಾಕು; 4,000 ಗಂಟೆಗಳ ವೀಕ್ಷಣೆ ಬದಲು 3,000 ಗಂಟೆಗಳ ವೀಕ್ಷಣೆ ಇದ್ದರೆ ಸಾಕು. ಹಾಗೆಯೇ, ಶಾರ್ಟ್ಸ್ ವಿಡಿಯೋಗಳ ವೀಕ್ಷಣೆ 1 ಕೋಟಿ ಬದಲು 30 ಲಕ್ಷ ಇದ್ದರೆ ಸಾಕು ಎಂದು ಗೂಗಲ್ ಮಾಲೀಕತ್ವದ ಯೂಟ್ಯೂಬ್ ಸಂಸ್ಥೆ ಮಾಹಿತಿ ನೀಡಿದೆ. ಆದರೆ ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಮ್​ಗೆ ಅರ್ಹರಾಗಲು ಬೇಕಾದ ಬೇರೆಲ್ಲಾ ಮಾನದಂಡಗಳು ಹಾಗೇ ಮುಂದುವರಿಯಲಿವೆ.

ಸದ್ಯ ಈ ಹೊಸ ಮಾರ್ಪಾಡು ಅಮೆರಿಕ, ಬ್ರಿಟನ್, ಕೆನಡಾ, ತೈವಾನ್ ಮತ್ತು ಸೌತ್ ಕೊರಿಯಾದಲ್ಲಿ ಮೊದಲು ಅಳವಡಿಕೆ ಆಗಲಿದೆ. ಆ ಬಳಿಕ ಬೇರೆ ಕಡೆ ಜಾರಿಯಾಗಬಹುದು. ಭಾರತೀಯ ಯೂಟ್ಯೂಬ್ ಆಸಕ್ತರು ಈ ಅವಕಾಶಕ್ಕಾಗಿ ಇನ್ನಷ್ಟು ದಿನ ಕಾಯಬೇಕಾಗಬಹುದು.

ನೀವು ಒಮ್ಮೆ ಯೂಟ್ಯೂಬ್ ಚಾನಲ್ ಆರಂಭಿಸಿ, ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಮ್​ಗೆ ಅಪ್ಲೈ ಮಾಡಿದ್ದರಾಯ್ತು. ಯೂಟ್ಯೂಬ್ ನಿಗದಿಪಡಿಸಿರುವ ಮಾನದಂಡಗಳನ್ನು ನೀವು ತಲುಪಿದ ಬಳಿಕ ತಾನಾಗೇ ವರಮಾನ ಬರತೊಡಗುತ್ತದೆ. ಅಂದರೆ ಮಾನಿಟೈಸೇಶನ್ ಆಗತೊಡಗುತ್ತದೆ. ನಿಮ್ಮ ವಿಡಿಯೋಗಳಿಗೆ ಬರುವ ಜಾಹೀರಾತುಗಳಿಂದ ಗೂಗಲ್​ಗೆ ಆದಾಯ ಬರುತ್ತದೆ. ನೀವು ಯೂಟ್ಯೂಬ್ ಪಾರ್ಟ್ನರ್ ಆಗಿದ್ದರೆ ಆ ಆದಾಯವನ್ನು ಯೂಟ್ಯೂಬ್ ನಿಮ್ಮೊಂದಿಗೆ ಹಂಚಿಕೊಳ್ಳುತ್ತದೆ.

ಪೇಯ್ಡ್ ಚ್ಯಾಟ್, ಟಿಪ್ಪಿಂಗ್, ಶಾಪಿಂಗ್ ಫೀಚರ್, ಚಾನಲ್ ಮೆಂಬರ್​ಶಿಪ್ ಇತ್ಯಾದಿ ಹೊಸ ರೀತಿಯ ಆದಾಯಮಾರ್ಗಗಳನ್ನು ಯೂಟ್ಯೂಬ್ ವಿಡಿಯೋ ಕ್ರಿಯೇಟರುಗಳಿಗೆ ಅವಕಾಶ ಮಾಡಿಕೊಡಲಾಗಿದೆ.

ಹಾಗೆಯೇ, ಈಗ ಯೂಟ್ಯೂಬ್ ವಿಡಿಯೋಗಳಿಗೆ ಮ್ಯೂಸಿಕ್ ಬಳಸಲು ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ. ಯಾವುದೇ ಕಾಪಿರೈಟ್ ಇಲ್ಲದ, ಫ್ರೀ ಆಗಿ ಹಂಚಿಕೆಯಾಗುವ ಮ್ಯೂಸಿಕ್ ಸಂಗ್ರಹವನ್ನು ಯೂಟ್ಯೂಬ್ ಇಟ್ಟಿದೆ. ಇದರಲ್ಲಿ ಯಾರು ಬೇಕಾದರೂ ತಮ್ಮ ಯೂಟ್ಯೂಬ್ ವಿಡಿಯೋಗಳಿಗೆ ಬಳಸಬಹುದು. ಇಂತಹ ಮ್ಯೂಸಿಕ್ ಸಂಗ್ರಹವನ್ನು ಯೂಟ್ಯೂಬ್ ನಿರಂತವಾಗಿ ಹೆಚ್ಚಿಸುತ್ತಲೇ ಇರುತ್ತದೆ.