ಪ್ರೇಮವಿವಾಹಕ್ಕೆ ವಿರೋಧ: ಯುವಕನನ್ನು ಮನೆಗೆ ಕರೆಯಿಸಿ ಥಳಿಸಿದ ಯುವತಿ ಪೋಷಕರು

ಧಾರವಾಡ: ಮೇ.31ರಂದು ಜಿಲ್ಲೆಯ ಕಲಘಟಗಿ ತಾಲೂಕಿನ ಲಿಂಗನಕೊಪ್ಪ ಗ್ರಾಮದ ಶಿವನಗೌಡ ಪಾಟೀಲ್​ ಮತ್ತು ಅಕ್ಕಮ್ಮ ಎಂಬ ಪ್ರೇಮಿಗಳು ರಿಜಿಸ್ಟ್ರರ್ ಮದುವೆಯಾಗಿದ್ದರು. ಇದಾದ ಬಳಿಕ ಹುಡುಗಿ ಮನೆಯವರು ಇದಕ್ಕೆ ವಿರೋಧ ವ್ಯಕ್ತಪಡಿಸಿ, ಆತನನ್ನ ಮನೆಗೆ ಕರೆಯಿಸಿ ಥಳಿಸಿದ್ದಾರೆ. ನಂತರ ಹುಡುಗಿ ಮನೆಯವರ ಹಲ್ಲೆಯಿಂದ ಪ್ರೇಮಿ ಶಿವನಗೌಡ ಪಾಟೀಲ್​ ಧಾರವಾಡ ಜಿಲ್ಲಾಸ್ಪತ್ರೆ ಸೇರಿಸಿದ್ದಾರೆ. ಇನ್ನು ಕಲಘಟಗಿ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಮದುವೆ ಮಾಡಿಕೊಂಡಿದ್ದ ಈ ಜೋಡಿ. ಬಳಿಕ ಅಕ್ಕಮ್ಮ ತನ್ನ ಮನೆಗೆ ಹೋಗಿದ್ದಳು. ಮನೆಗೆ ಹೋದ ಮೇಲೆ ಅಕ್ಕಮ್ಮನ ಮೇಲೂ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇದನ್ನು ತಿಳಿದ ಶಿವನಗೌಡ ಪಾಟೀಲ್​ ಆಕೆಯನ್ನ ಕರೆದುಕೊಂಡು ಬರಲು ಹೋಗಿದ್ದೆ, ಈ ವೇಳೆ ಕಣ್ಣಿಗೆ ಕಾರದ ಪುಡಿ ಎರಚಿ ಕಬ್ಬಿಣದ ರಾಡ್‌ನಿಂದ ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು ಈ ಕುರಿತು ದೂರು ನೀಡಲು ಹೋದರೂ, ಹುಡುಗಿ ಮನೆಯಲ್ಲಿ ಪೊಲೀಸ್ ಇಲಾಖೆ ಮತ್ತು ಸೈನ್ಯದಲ್ಲಿದ್ದವರು ಇದ್ದು, ಹೀಗಾಗಿ ಕಲಘಟಗಿ ಠಾಣೆಯಲ್ಲಿ ನನ್ನ ದೂರು ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದ ಪ್ರೇಮಿ ಶಿವನಗೌಡ ಪಾಟೀಲ್​, ಈಗ ನ್ಯಾಯಕ್ಕಾಗಿ ಎಸ್ಪಿ ಬಳಿ ಹೋಗುವೆ ಎನ್ನುತ್ತಿದ್ದಾರೆ.